ವರದಿ: ಶಬ್ಬೀರ್ ಅಹ್ಮದ್, ಶ್ರೀನಿವಾಸಪುರ
ಶ್ರೀನಿವಾಸಪುರ: ಕಂದಾಯ ಇಲಾಖೆ ಅಧಿಕಾರಿಗಳು ಕೈಗೊಂಡಿರುವ ಕೆರೆ ಒತ್ತುವರಿ ತೆರವು ಕಾರ್ಯಕ್ರಮದಿಂದ ಬಡ ರೈತರು ನಷ್ಟ ಅನುಭವಿಸುತ್ತಿದ್ದಾರೆ ಎಂದು ರಾಜ್ಯ ಜೆಡಿಎಸ್ ಪ್ರಧಾನ ಕಾರ್ಯದರ್ಶಿ ಬಿ.ವಿ.ಶಿವಾರೆಡ್ಡಿ ಹೇಳಿದರು.
ತಾಲ್ಲೂಕಿನ ನೆರ್ನಹಳ್ಳಿ ಗ್ರಾಮದ ಕೆರೆ ಒತ್ತುವರಿ ಸಂದರ್ಭದಲ್ಲಿ ಟೊಮೆಟೊ ಬೆಳೆ ನಷ್ಟ ಅನುಭವಿಸಿದ ರೈತ ಮಹಿಳೆ ಶಾಂತಮ್ಮ ಅವರಿಗೆ ಭಾನುವಾರ ವೈಯಕ್ತಿಕವಾಗಿ ಆರ್ಥಿಕ ನೆರವು ನೀಡಿ ಅವರು ಮಾತನಾಡಿದರು.
ಈ ಬಡ ಮಹಿಳೆ ಕೆರೆ ಅಂಚಿನ ಅರ್ಧ ಎಕರೆ ಪ್ರದೇಶದಲ್ಲಿ ಟೊಮೆಟೊ ಬೆಳೆದಿದ್ದಾರೆ. ಈಗ ಉತ್ಪನ್ನಕ್ಕೆ ಒಳ್ಳೆ ಬೆಲೆ ಬಂದಿದೆ. ಶಾಂತಮ್ಮ ತಮಗೆ ಜಮೀನು ತೆರವುಗೊಳಿಸಲು ಒಂದು ತಿಂಗಲು ಕಾಲಾವಕಾಶ ನೀಡುವಂತೆ ಹಿರಿಯ ಅಧಿಕಾರಿಗಳಲ್ಲಿ ಮನವಿ ಮಾಡಿದ್ದಾರೆ. ಆದರೆ ಕರುಣೆ ಇಲ್ಲದ ಅಧಿಕಾರಿಗಳು ಬೆಳೆಯಲ್ಲಿ ಕಾಲುವೆ ಮಾಡಿ ಕೈಗೆ ಬಂದ ಬೆಳೆಯನ್ನು ನಾಶಪಡಿಸಿದ್ದಾರೆ ಎಂದು ಹೇಳಿದರು.
ಸರ್ಕಾರ ಅಧಿಕಾರಿಗಳ ದರ್ಪದಿಂದ ಬೆಳೆ ಕಳೆದುಕೊಂಡ ದಲಿತ ಮಹಿಳೆ ಶಾಂತಮ್ಮ ಅವರಿಗೆ ನಷ್ಟ ಪರಿಹಾರ ನೀಡಬೇಕು. ಯಾವುದೇ ಕೆರೆಯಲ್ಲಿ ಒತ್ತುವರಿ ಸಂದರ್ಭದಲ್ಲಿ ಬೆಳೆ ಇದ್ದಲ್ಲಿ, ಫಸಲು ಪಡೆದುಕೊಳ್ಳಲು ಅವಕಾಶ ನೀಡಬೇಕು ಎಂದು ಆಗ್ರಹಿಸಿದರು.
ಭೇಟಿ: ಘಟನೆ ಸಂಬಂಧ ದಲಿತಪರ ಸಂಘಟನೆಗಳು ಹಾಗೂ ಸಾರ್ವಜನಿಕರಿಂದ ಆಕ್ರೋಶ ವ್ಯಕ್ತವಾಗುತ್ತಿದ್ದಂತೆ, ತಹಶೀಲ್ದಾರ್ ಶಿರಿನ್ ತಾಜ್ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದ ಬಳಿಕ, ಇರುವ ಬೆಳೆಯಲ್ಲಿನ ಫಸಲು ಪಡೆದುಕೊಳ್ಳಲು 60 ದಿನಗಳ ಕಾಲಾವಕಾಶ ನೀಡಿದರು.
ನೆರ್ನಹಳ್ಳಿ ಗ್ರಾಮದ ಕೆರೆಯಲ್ಲಿ 174 ಎಕರೆ ಒತ್ತುವರಿಯಾಗಿತ್ತು. ಆ ಪೈಕಿ 100 ಎಕರೆ ಒತ್ತುವರಿ ಪ್ರದೇಶವನ್ನು ತೆರವುಗೊಳಿಸಲಾಗಿದೆ. ಉಳಿದ ಒತ್ತುವರಿ ತೆರವುಗೊಳಿಸುವ ಕಾರ್ಯ ಪ್ರಗತಿಯಲ್ಲಿದೆ. ಮಾನವೀಯ ದೃಷ್ಟಿಯಿಂದ ಕೆರೆಯಂಗಳಲ್ಲಿ ಈಗಾಗಲೇ ಬೆಳೆದಿರುವ ಬೆಳೆಯನ್ನು ಪಡೆದುಕೊಳ್ಳಲು 2 ತಿಂಗಳ ಕಾಲಾವಕಾಶ ನೀಡಲಾಗಿದೆ ಎಂದು ಅವರು ಹೇಳಿದರು.
ರೈತ ಮುಖಂಡ ಬಚ್ಚೇಗೌಡ, ಕಂದಾಯ ನಿರೀಕ್ಷಕ ವಿನೋದ್ ಇದ್ದರು