ಕೋಲಾರ:- ಚುನಾವಣಾ ಪ್ರಕ್ರಿಯೆ ಯಾವುದೇ ಗೊಂದಲಗಳಿಲ್ಲದೇ ಸುಸೂತ್ರವಾಗಿ ನಡೆಯಲು ಮತದಾನ ಕಾರ್ಯಕ್ಕೆ ನೇಮಕಗೊಂಡಿರುವ ಮತಗಟ್ಟೆ ಸಿಬ್ಬಂದಿ ಕ್ರಮವಹಿಸಿ ಮತ್ತು ಮತಗಟ್ಟೆಯಲ್ಲಿ ಅಣಕುಮತದಾನ ಸಕಾಲಕ್ಕೆ ಮುಗಿಸಿ ನೈಜ ಮತದಾನಕ್ಕೆ ಸಿದ್ದತೆ ನಡೆಸಿಕೊಳ್ಳಿ ಎಂದು ತಹಸೀಲ್ದಾರ್ ಹರ್ಷವರ್ಧನ್ ಸೂಚಿಸಿದರು.
ಬುಧವಾರ ನಗರದ ಸರ್ಕಾರಿ ಮಹಿಳಾ ಕಾಲೇಜಿನಲ್ಲಿ ಲೋಕಸಭೆ ಚುನಾವಣೆ ಹಿನ್ನೆಲೆಯಲ್ಲಿ ಮತಗಟ್ಟೆ ಅಧಿಕಾರಿಗಳಾಗಿ ನೇಮಕಗೊಂಡಿರುವ ಸಿಬ್ಬಂದಿಗೆ ನಡೆದ 2ನೇ ಹಂತದ ತರಬೇತಿ ಕಾರ್ಯಾಗಾರದಲ್ಲಿ ಭಾಗವಹಿಸಿದ್ದ ಅವರು, ಜಿಲ್ಲಾಧಿಕಾರಿ ಹಾಗೂ ಜಿಲ್ಲಾ ಚುನಾವಣಾಧಿಕಾರಿ ಅಕ್ರಂ ಪಾಷಾ, ವಿಭಾಗಾಧಿಕಾರಿ ವೆಂಕಟಲಕ್ಷ್ಮಿ ಅವರ ಮಾರ್ಗದರ್ಶನದಲ್ಲಿ ತರಬೇತಿ ನಡೆಸಲಾಗುತ್ತಿದೆ ಎಂದರು.
ಕೋಲಾರ ಲೋಕಸಭಾ ಕ್ಷೇತ್ರದಲ್ಲಿ ಏ.26ರಂದು ಚುನಾವಣೆ ನಿಗಧಿಯಾಗಿದೆ, ಈ ಕಾರ್ಯ ಚೆನ್ನಾಗಿ ನಡೆಯುವಲ್ಲಿ ನಿಮ್ಮ ಪಾತ್ರ ಅತಿ ಮುಖ್ಯ, ನಿಮಗೆ ನೀಡುತ್ತಿರುವ ತರಬೇತಿಯ ಪ್ರಯೋಜನ ಪಡೆದುಕೊಳ್ಳಿ, ಸಮಸ್ಯೆಗಳು ಎದುರಾಗದಂತೆ ಕಾರ್ಯನಿರ್ವಹಿಸಿ ಎಂದರು.
ಪ್ರತಿ ಮತಗಟ್ಟೆಯಲ್ಲೂ ಅಣುಕು ಮತದಾನ
ಈಗಾಗಲೇ ರೂಪಿಸಲಾಗಿರುವ ಯೋಜನೆಯಂತೆಯೇ ಪ್ರತಿಯೊಂದು ಕೆಲಸವನ್ನು ಸಮರ್ಪಕವಾಗಿ ಮಾಡಿಕೊಳ್ಳಬೇಕು. ಮತದಾನಕ್ಕೆ ಅಂದು ಬೆಳಗ್ಗೆ 7 ಗಂಟೆಯಿಂದ ಸಂಜೆ 6 ಗಂಟೆಯವರೆಗೆ ಕಾಲಾವಕಾಶ ನೀಡಲಾಗಿದ್ದು, ತಾವು ಬೆಳಗ್ಗೆ ಮತದಾನ ಆರಂಭಕ್ಕೂ ಮುನ್ನ ಅಣುಕು ಮತದಾನವನ್ನು ಅಭ್ಯರ್ಥಿಗಳ ಪರ ಏಜೆಂಟರ ಸಮ್ಮುಖದಲ್ಲಿ ಕಡ್ಡಾಯವಾಗಿ ನಡೆಸಬೇಕು ಎಂದು ಸಲಹೆ ನೀಡಿದರು.
ಪ್ರತಿ ಅಭ್ಯರ್ಥಿಗೂ ಮತ ಹಾಕಿ, ಖಾತ್ರಿ ಚೀಟಿಯನ್ನು ಅವರಿಗೆ ತೋರಿಸಿ, ಎಲ್ಲ ಪ್ರಕ್ರಿಯೆ ಮುಗಿಸಿ, ಅದನ್ನು ಅಳಿಸಿದ ಬಳಿಕ ನೈಜ ಮತದಾನಕ್ಕೆ ವ್ಯವಸ್ಥೆ ಕಲ್ಪಿಸಬೇಕು ಎಂದು ತಿಳಿಸಿದರು.
1320 ಸಾವಿರ ಮಂದಿಗೆ ಚುನಾವಣಾ ತರಬೇತಿ
ಕೋಲಾರ ತಾಲ್ಲೂಕಿನಲ್ಲಿ ಈಗಾಗಲೇ ಪ್ರತಿ ಮತಗಟ್ಟೆಗೆ ತಲಾ ಒಬ್ಬ ಪ್ರಿಸೆಂಡಿಂಗ್, ಒಬ್ಬ ಸಹಾಯಕ ಪ್ರಿಸೆಂಡಿಂಗ್ ಅಧಿಕಾರಿ ಹಾಗೂ ಇಬ್ಬರು ಪೋಲಿಂಗ್ ಅಧಿಕಾರಿಗಳನ್ನು ನೇಮಕಾತಿ ಮಾಡಿ ಆದೇಶ ಪತ್ರಗಳನ್ನು ನೀಡಲಾಗಿದೆ ಎಂದು ತಿಳಿಸಿದರು.
ಕೋಲಾರ ತಾಲೂಕಿನಲ್ಲಿ 330 ಪಿಆರ್ಒ ಮತ್ತು 330 ಎಪಿಆರ್ಒ ಹಾಗೂ 660 ಪೋಲಿಂಗ್ ಅಧಿಕಾರಿಗಳಿದ್ದು ಪಿಆರ್ಒ,ಎಪಿಆರ್ಒಗಳಿಗೆ ಈಗಾಗಲೇ ಒಂದು ಸುತ್ತಿನ ತರಬೇತಿ ಮುಗಿದಿದ್ದು, ಇದು ಎರಡನೇ ಸುತ್ತಿನ ತರಬೇತಿಯಾಗಿದೆ ಎಂದರು.
ಅದೇ ರೀತಿ ಮಾಲೂರು, ಬಂಗಾರಪೇಟೆ, ಮುಳಬಾಗಿಲು, ಕೆಜಿಎಫ್, ಶ್ರೀನಿವಾಸಪುರದಲ್ಲಿಯೂ ಇದೇ ರೀತಿ ತರಬೇತಿ ನಡೆಸಲಾಗುತ್ತಿದೆ ಎಂದರು.
ತರಬೇತಿ ಕಾರ್ಯಾಗಾರದಲ್ಲಿ ಸಂಪನ್ಮೂಲ ವ್ಯಕ್ತಿಗಳಾಗಿದ್ದ ಉಪನ್ಯಾಸಕ ಗೋಪಿಕೃಷ್ಣನ್, ಮತಗಟ್ಟೆಯಲ್ಲಿ 49ಎಂ. 49 ಎಂ.ಎ ಅಡಿ ಎದುರಾಗಬಹುದಾದ ಚಾಲೆಂಜ್ ಮೋಟ್, ಟೆಂಡರ್ಡ್ ವೋಟ್, ಸರ್ವಿಸ್ ವೋಟ್ ಪ್ರಕರಣಗಳನ್ನು ನಿಭಾಯಿಸುವ ಕುರಿತು ಮತಗಟ್ಟೆ ಅಧಿಕಾರಿಗಳಿಗೆ ಮಾಹಿತಿ ನೀಡಿದರು.
ಮತದಾನ ಯಂತ್ರಗಳ ಬಳಕೆ ಕುರಿತು ಪ್ರಾಯೋಗಿಕವಾಗಿ ಮತ್ತು ಪವರ್ ಪಾಯಿಂಟ್ ಪ್ರಸೆಂಟೇಷನ್ ಮೂಲಕ ತರಬೇತಿ ನೀಡಿದ ಅವರು, ಯಂತ್ರಗಳ ಜೋಡಣೆ, ಬಳಕೆ, ಅವುಗಳ ನಿರ್ವಹಣೆ ಕುರಿತಂತೆ ತಿಳಿಸಿಕೊಟ್ಟರು.
ತರಬೇತಿ ಕೇಂದ್ರಕ್ಕೆ ಜಿಲ್ಲಾಧಿಕಾರಿ ಭೇಟಿ
ಇದಕ್ಕೂ ಮುನ್ನಾ ಮಹಿಳಾ ಕಾಲೇಜಿನ ತರಬೇತಿ ಕೇಂದ್ರಕ್ಕೆ ಜಿಲ್ಲಾಧಿಕಾರಿ ಅಕ್ರಂ ಪಾಷಾ, ವಿಭಾಗಾಧಿಕಾರಿ ವೆಂಕಟಲಕ್ಷ್ಮಿ ಮತ್ತಿತರ ಅಧಿಕಾರಿಗಳು ಭೇಟಿ ನೀಡಿ ಮಾರ್ಗದರ್ಶನ ನೀಡಿದರು.
ಕ್ಷೇತ್ರ ಶಿಕ್ಷಣಾಧಿಕಾರಿ ಕನ್ನಯ್ಯ, ಕ್ಷೇತ್ರ ಸಮನ್ವಯಾಧಿಕಾರಿ ಪ್ರವೀಣ್, ಮಾಸ್ಟರ್ ಟ್ರೈನರ್ಸ್ ಹಾಗೂ ಸೆಕ್ಟರ್ ಅಧಿಕಾರಿಗಳಾದ ಗೋಪಿಕೃಷ್ಣನ್, ಟಿ.ಕೆ.ನಟರಾಜ್, ಉದಯಕುಮಾರ್, ಚಂದ್ರಪ್ಪ, ಗಂಗಾಧರಮೂರ್ತಿ,ಮುಕುಂದ ಮತ್ತಿತರರು ಕಾರ್ಯನಿರ್ವಹಿಸಿದ್ದು, ಎಸಿ ಕಚೇರಿ ತಹಸೀಲ್ದಾರ್ ಮಂಜುನಾಥ್, ಗ್ರೇಡ್2 ತಹಸೀಲ್ದಾರ್ ಹಂಸಮಾರಿಯಾ, ಶಿರಸ್ತೆದಾರ್ಗಳಾದ ಶ್ರೀನಿವಾಸಮೂರ್ತಿ, ಭಾಸ್ಕರ್, ಆರ್ಐಗಳಾದ ರಾಜೇಂದ್ರಪ್ರಸಾದ್, ರಮೇಶ್,ಲೋಕೇಶ್, ಮಂಜುನಾಥ್ ನಾರಾಯಣಸ್ವಾಮಿ ಮತ್ತಿತರರು ಕಾರ್ಯನಿರ್ವಹಿಸಿದರು.