ಆಟೋದಲ್ಲಿ ಮರೆತಿದ್ದ ಹಣ ಮತ್ತು ಬೆಲೆ ಬಾಳುವ ಬ್ಯಾಗನ್ನು ಕೇವಲ 1 ತಾಸಿನಲ್ಲೇ ವಾರಸುದಾರರಿಗೆ ತಲುಪಿಸುವಲ್ಲಿ ಪೊಲೀಸರು ಯಶಸ್ವಿ

ಕೋಲಾರ,ಜು.26: ಮಹಿಳೆಯೋರ್ವರು ಆಟೋದಲ್ಲಿ ಮರೆತು ಬಿಟ್ಟು ಹೋಗಿದ್ದ ಹಣ ಮತ್ತು ಬೆಲೆ ಬಾಳುವ ವಸ್ತುಗಳಿದ್ದ ಬ್ಯಾಗನ್ನು ಕೇವಲ 1 ತಾಸಿನಲ್ಲೇ ಆಟೋ ಪತ್ತೆ ಹಚ್ಚಿ, ಬ್ಯಾಗನ್ನು ಮರಳಿ ವಾರಸುದಾರರಿಗೆ ನೀಡುವಲ್ಲಿ ನಗರದ ಗಲ್‍ಪೇಟೆ ಪೊಲೀಸರು ಯಶಸ್ವಿಯಾಗಿದ್ದಾರೆ.
ಬೆಂಗಳೂರಿನ ಖಾಸಗಿ ಆಸ್ಪತ್ರೆ ಉದ್ಯೋಗಿ ಭಾರತಿ (ಹೆಸರು ಬದಲಿಸಲಾಗಿದೆ) ಎಂಬ ಮಹಿಳೆ 23 ರಂದು ತನ್ನ ತಾಯಿಯನ್ನು ನಂಗಲಿ ಗ್ರಾಮದ ಮನೆಯಲ್ಲಿ ಬಿಟ್ಟು ಮರಳಿ ಬಸ್‍ನಲ್ಲಿ ನಗರದ ಹಳೇ ಬಸ್ ನಿಲ್ದಾಣದಲ್ಲಿ ಮಕ್ಕಳ ಸಮೇತ ಇಳಿದುಕೊಂಡಿದ್ದಾರೆ. ನಂತರ ಇಲ್ಲಿ ಆಟೋ ಹತ್ತಿದ ಈಕೆ ತಂಗಿಯ ಮನೆಗೆ ಹೋಗಲು ಇಲ್ಲಿನ ಬೈರೇಗೌಡ ನಗರದ ಮೈಲಾರಿ ಹೋಟೆಲ್ ಹತ್ತಿರ ಇಳಿದು ಬ್ಯಾಗ್ ಮರೆತು ಹಾಗೆ ಹೋಗಿದ್ದಾರೆ.
ಬ್ಯಾಗ್ ಬಿಟ್ಟಿದ್ದನ್ನು ಅರಿತ ಅವರು ತಕ್ಷಣ ತಾನು ಬಂದ ದಾರಿ ಮತ್ತು ಹಳೇ ಬಸ್ ನಿಲ್ದಾಣದ ವಿವಿಧ ಕಡೆ ಹುಡುಕಾಡಿದರೂ ಆಟೋ ಪತ್ತೆ ಹಚ್ಚಲಾಗಲಿಲ್ಲ, ಕೊನೆಗೆ 24 ರಂದು ನಗರದ ಗಲ್‍ಪೇಟೆ ಪೊಲೀಸ್ ಠಾಣೆಗೆ ಮಧ್ಯಾಹ್ನ 12-00 ಗಂಟೆಗೆ ಬೇಟಿ ನೀಡಿದ ಮಹಿಳೆ ಘಟನೆಯ ಬಗ್ಗೆ ಮಾಹಿತಿನೀಡಿದ್ದಾರೆ. ಠಾಣಾಧಿಕಾರಿ ಅರುಣ್‍ಗೌಡ ಪಾಟೀಲ್ ಅವರು ತಕ್ಷಣ ಆಟೋ ಪತ್ತೆ ಹಚ್ಚುವಂತೆ ಪೇದೆ ಹೆಚ್.ರಾಜಣ್ಣ ಅವರಿಗೆ ಸೂಚಿಸಿದ್ದಾರೆ.
ತಕ್ಷಣ ಕಾರ್ಯಪ್ರವೃತ್ತರಾದ ಪೇದೆ ರಾಜಣ್ಣ ಹಳೇ ಬಸ್ ನಿಲ್ದಾಣ ಮತ್ತು ಸುತ್ತಮುತ್ತಲಿನ ಸಿ.ಸಿ.ಕ್ಯಾಮೆರಾಗಳನ್ನು ಪರಿಶೀಲಿಸಲು ಹೋದಾಗ ಅವುಗಳು ಕೆಟ್ಟಿರುವುದು ಹಾಗೂ ಅಂಗಡಿಗಳ ಸಿ.ಸಿ. ಕ್ಯಾಮೆರಾ ಪರಿಶೀಲಿಸಲಾಗಿ ಅವು ರಸ್ತೆಯ ಕಡೆ ಪೋಕಸ್ ಮಾಡದೆ ಇರುವ ಕಾರಣ ಯಾವುದೇ ಸುಳಿವು ಸಿಗಲಿಲ್ಲ. ಕೊನೆಗೆ ಮಹಿಳೆಯು ಇಳಿದುಕೊಂಡಿದ್ದ ಸ್ಥಳಕ್ಕೆ ಹೋಗಲಾಗಿ ಮೈಲಾರಿ ಹೋಟೆಲ್‍ನ ಸಿ.ಸಿ.ಕ್ಯಾಮೆರಾ ಪರಿಶೀಲಿಸಲಾಗಿ ಮಹಿಳೆ ಆಟೋ ಇಳಿದು ಹಣ ಕೊಟ್ಟು ಬ್ಯಾಗ್ ಬಿಟ್ಟು ಬರಿಕೈಲಿ ಮಳೆಯ ಕಾರಣ ತರಾತುರಿಯಲ್ಲಿ ಹೋಗುತ್ತಿರುವುದು ಕಂಡು ಬಂದಿದೆ.
ಸದರಿ ಆಟೋ ನೊಂದಣಿ ಸಂಖ್ಯೆ ಕೆ.ಎ-05 ಎಂಬುದನ್ನು ಬಿಟ್ಟರೆ ಉಳಿದ ಸಂಖ್ಯೆಗಳು ಅಸ್ಪಷ್ಟವಾಗಿತ್ತು. ಹಾಗೂ ಬಲಭಾಗದ ಇಂಡಿಕೇಟರ್ ಒಡೆದುಹೋಗಿತ್ತು. ಇದರ ತುಣುಕು (ಪುಟೇಜ್) ಪಡೆದ ಪೇದೆ ಆರ್.ಟಿ.ಓದಲ್ಲಿ ನಡೆಸಿದ ಪ್ರಯತ್ನ ಫಲ ನೀಡಲಿಲ್ಲ. ನಂತರ ಆಟೋ ಚಾಲಕರು ಹಾಗೂ ಸಂಘದ ಮುಖಂಡರನ್ನು ಭೇಟಿ ಮಾಡಿ ಅವರ ಸಂಪರ್ಕ ಜಾಲದಲ್ಲಿ ತಲಾಷೆ ಮಾಡಿದಾಗ ಆಟೋ ಮತ್ತು ಚಾಲಕನ ಸುಳಿವು ಸಿಕ್ಕಿ ನಂತರ ಹಳೇ ಬಸ್ ನಿಲ್ದಾಣದಲ್ಲಿ ಪತ್ತೆ ಹಚ್ಚಲಾಯಿತು.
ಆಟೋವನ್ನು ಪರಿಶೀಲಿಸಲಾಗಿ ಸೀಟಿನ ಹಿಂಭಾಗ ಬ್ಯಾಗ್ ಇದುವುದು ಪತ್ತೆಯಾಯಿತು. ಅದರೊಳಗೆ 5 ಸಾವಿರ ನಗದು, ಬ್ಯಾಂಕಿಗೆ ಸಂಬಂಧಪಟ್ಟ ಎ.ಟಿ.ಎಂ, ಕ್ರೆಡಿಟ್ ಕಾರ್ಡ್‍ಗಳು, ಅಮೂಲ್ಯ ದಾಖಲೆಗಳು ಹಾಗೂ ಬಟ್ಟೆಗಳು ಹಾಗೆ ಇರುವುದು ಕಂಡುಬಂತು. ಮಹಿಳೆ ಮಕ್ಕಳನ್ನು ಸೀಟಿನಲ್ಲಿ ಕುಳ್ಳರಿಸಿಕೊಂಡಿದ್ದು ಆಕೆಯ ಬ್ಯಾಗನ್ನು ಹಿಂಭಾಗದ ಜಾಗದಲ್ಲಿ ಇಟ್ಟು ಮರೆತು ಬಿಟ್ಟು ಹೋಗಿದ್ದು ಇದು ನನ್ನ ಗಮನಕ್ಕೆ ಬಂದಿಲ್ಲವೆಂದು ಚಾಲಕ ತಿಳಿಸಿದ್ದಾನೆ.
ಮಾಹಿತಿ ಬಂದು ಒಂದು ತಾಸಿನಲ್ಲಿ ಆಟೋ ಪತ್ತೆ ಹಚ್ಚಿ ಅಧಿಕಾರಿಗಳ ಸಮ್ಮುಖದಲ್ಲಿ ಅದೇ ಚಾಲಕನಿಂದ ಮಹಿಳೆಗೆ ಬ್ಯಾಗ್ ಹಿಂದಿರುಗಿಸಿದ ಪೇದೆ ರಾಜಣ್ಣ ಕಾರ್ಯವೈಖರಿಗೆ ಹಿರಿಯ ಅಧಿಕಾರಿಗಳು ಪ್ರಶಂಸಿಸಿದ್ದಾರೆ.