ವರದಿ: ಶಬ್ಬೀರ್ ಅಹ್ಮದ್, ಶ್ರೀನಿವಾಸಪುರ
ಶ್ರೀನಿವಾಸಪುರ : ಪಟ್ಟಣದ ಹೊರ ವಲಯದ ಮಾವಿನ ತೋಟದಲ್ಲಿ ಈಚೆಗೆ ಕುರಿ ವ್ಯಾಪಾರಿಯೊಬ್ಬರ ಕತ್ತು ಕೊಯ್ದು ಕೊಲೆ ಮಾಡಿದ್ದ ಆರೋಪಿಯನ್ನು ಬಂಧಿಸುವಲ್ಲಿ ಪೊಲೀಸರು ಯಶಸ್ವಿಯಾಗಿದ್ದಾರೆ .
ಪಟ್ಟಣದ ಆಜಾದ್ ರಸ್ತೆಯ ಮಾಂಸದ ವ್ಯಪಾರಿ ಜಾವೀದ್ ಪಾಷ ಅವರ ಮಗ ನಯಾಜ್ ಪಾಷ ( ೨೦ ) ಬಂಧಿತ ಕೊಲೆ ಆರೋಪಿ .
ತಾಲ್ಲೂಕಿನ ಗುಂಡಮನತ್ತ ಗ್ರಾಮದ ಕುರಿ ವ್ಯಾಪಾರಿ ಮುನಿಸ್ವಾಮಿ ಅವರಿಗೆ , ಕುರಿ ಖರೀದಿಸಿದ್ದ ರೂ .೫೦ ಸಾವಿರ ನೀಡುವಂತೆ ಮಾಂಸದ ವ್ಯಾಪರಿ ಜಾವೀದ್ ಪಾಷ , ಆರೋಪಿ ನಯಾಜ್ ಪಾಷಗೆ ಹೇಳಿ ಹಣ ನೀಡಿದ್ದರು . ಮುನಿಸ್ವಾಮಿ ಅಂಗಡಿ ಬಳಿಗೆ ಬಂದಾಗ ತಂದೆ ಹೇಳಿದಂತೆ ಹಣ ನೀಡಿ , ಪಟ್ಟಣದ ಹೊರ ವಲಯದ ಮಾವಿನ ತೋಟದಲ್ಲಿ ಕುರಿಗಳು ಮಾರಾಟಕ್ಕೆ ಇರುವುದಾಗಿ ಹೇಳಿ , ದ್ವಿಚಕ್ರವಾಹನದಲ್ಲಿ ಕರೆದುಕೊಂಡು ಹೋಗಿದ್ದ . ತೋಟದಲ್ಲಿ ಕುರಿಗಳಿಗಾಗಿ ಕಾಯುತ್ತಿದ್ದ ಮುನಿಸ್ವಾಮಿ ಮೇಲೆ ನಯಾಜ್ ಪಾಷ ಒಮ್ಮೆಗೆ ಚಾಕುವಿನಿಂದ ದಾಳಿ ನಡೆಸಿ , ಕುತ್ತಿಗೆ ಸೀಳಿ ಹಣದೊಂದಿಗೆ ಪರಾರಿಯಾಗಿದ್ದ ‘ ಎಂದು ಪೊಲೀಸರು ತಿಳಿಸಿದ್ದಾರೆ .
ಪೊಲೀಸ್ ಇನ್ಸ್‌ಪೆಕ್ಟರ್ ಸಿ.ರವಿಕುಮಾರ್ ಅವರ ನೇತೃತ್ವದಲ್ಲಿ ತನಿಖೆ ಆರಂಭಿಸಿದ ತಂಡ , ಆರೋಪಿಯ ಬ್ಯಾಂಕ್ ಖಾತೆಯಲ್ಲಿ ರೂ .೫೦ ಸಾವಿರ ಜಮೆ ಆಗಿರುವುದನ್ನು ಪತ್ತೆ ಹಚ್ಚಿದರು . ಆ ಹಣವನ್ನು ಫೋನ್ ಪೇ ಮೂಲಕ ಬೇರೆ ಬೇರೆಯವರ ಖಾತೆಗೆ ವರ್ಗಾಯಿಸಿದ್ದ ವಿಷಯ ಬೆಳಕಿಗೆ ಬಂದಿತು . ಅದರ ಆಧಾರದ ಮೇಲೆ ತನಿಖೆ ನಡೆಸಿದಾಗ , ಆರೋಪಿ ದುಂದುವೆಚ್ಚಕ್ಕಾಗಿ ಸಾಲ ಮಾಡಿರುವ ಸಂಗತಿ ತಿಳಿಯಿತು . ಆರೋಪಿಯನ್ನು ಬಂಧಿಸಿ ವಿಚಾರಣೆ ನಡೆಸುವ ಸಂದರ್ಭದಲ್ಲಿ ಹಣದ ಆಸೆಗೆ ತಾನೆ ಕೊಲೆ ಮಾಡಿದ್ದಾಗಿ ಒಪ್ಪಿಕೊಂಡಿದ್ದಾನೆ .
ಪೊಲೀಸರು ಆರೋಪಿಯನ್ನು ಶುಕ್ರವಾರ ನ್ಯಾಯಾಲಯದಲ್ಲಿ ಹಾಜರು ಪಡಿಸಿದರು . ನ್ಯಾಯಾಧೀಶರು ಆರೋಪಿಯನ್ನು ನ್ಯಾಯಾಂಗ ಬಂಧನಕ್ಕೆ ಒಳಪಡಿಸಿದ್ದಾರೆ . ಘಟನೆಗೆ ಸಂಬಂಧಿಸಿದಂತೆ ಜಿಲ್ಲಾ ಹೆಚ್ಚುವರಿ ರಕ್ಷಣಾಧಿಕಾರಿ ಸಚಿನ್ ಘೋರ್ಪಡೆ ಪೊಲೀಸ್ ಠಾಣೆಗೆ ಭೇಟಿ ನೀಡಿ ಪರಿಶೀಲಿಸಿದರು.