ಪಿಎಲ್‍ಡಿ ಬ್ಯಾಂಕ್‍ ಸಾಲ ವಸೂಲಾತಿಗೆ ರೈತರಿಗೆ ನೀಡಿರುವ ಆದೇಶವನ್ನು ವಾಪಸ್ ಪಡೆದು ಮರುಪಾವತಿಗಾಗಿ 1 ವರ್ಷ ಕಾಲಾವಕಾಶ ನೀಡಿ

ವರದಿ: ಶಬ್ಬೀರ್ ಅಹಮ್ಮದ್, ಶ್ರೀನಿವಾಸಪುರ

ಕೋಲಾರ, ಪೆ. 01: ಜಿಲ್ಲಾದ್ಯಂತ ಪಿಎಲ್‍ಡಿ ಬ್ಯಾಂಕ್‍ನಿಂದ ಪಡೆದಿರುವ ಕೃಷಿ, ಕೋಳಿ ಮತ್ತಿತರ ಸಾಲ ವಸೂಲಾತಿಗಾಗಿ ರೈತರಿಗೆ ನೀಡಿರುವ ನೋಟೀಸ್ ಆದೇಶವನ್ನು ವಾಪಸ್ ಪಡೆದು ಕನಿಷ್ಟಪಕ್ಷ ಒಂದು ವರ್ಷ ಸಾಲ ಮರುಪಾವತಿಸಲು ಕಾಲಾವಕಾಶ ನೀಡಿ ಸಂಕಷ್ಟದಲ್ಲಿರುವ ರೈತರಿಗೆ ನೆರವಾಗಬೇಕೆಂದು ಒತ್ತಾಯಿಸಿ ರೈತ ಸಂಘ, ಸಾಲ ಪಡೆದಿರುವ ರೈತರು, ಪ್ರಾಂತ ರೈತ ಸಂಘದ ಜಿಲ್ಲಾಧಿಕಾರಿಗಳ ಕಚೇರಿಯ ಮುಂದೆ ನೋಟಿಸ್‍ಗಳನ್ನು ಸುಡುವ ಮೂಲಕ ಹೋರಾಟ ಮಾಡಿ ಸರ್ಕಾರವನ್ನು ಒತ್ತಾಯಿಸಲಾಯಿತು.
ರೈತ ಸಂಘದ ರಾಜ್ಯ ಉಪಾದ್ಯಕ್ಷ ಕೆ.ನಾರಾಯಣಗೌಡ ಮಾತನಾಡಿ ಪ್ರಪಂಚವೇ ಕಣ್ಣಿಗೆ ಕಾಣದ ವೈರಸ್ ಹಾವಳಿಯಿಂದ ಸತತ ಒಂದು ವರ್ಷಗಳ ಕಾಲ ತತ್ತರಿಸಿ ಇಡೀ ದೇಶದ ಆರ್ಥಿಕ ಪರಿಸ್ಥಿತಿಯೇ ಬುಡಮೇಲಾಗಿ ದೇಶದ ಜನತೆ ದುಡಿಯಲು ಕೆಲಸವಿಲ್ಲದೆ ಬೆಳೆದ ಬೆಳೆಗೆ ಬೆಲೆಯಿಲ್ಲದೆ ಒದ್ದಾಡುತ್ತಿರುವುದು ಕಣ್ಣಿಗೆ ಕಾಣುವ ದೃಶ್ಯವಾಗಿದೆ. ಅದರಂತೆ ಕೋಲಾರ ಜಿಲ್ಲಾದ್ಯಂತ ರೈತರು ಬೆಳೆದ ಬೆಳೆಗಳಿಗೆ ಮಾರುಕಟ್ಟೆಯಲ್ಲಿ ಸೂಕ್ತವಾದ ಬೆಲೆ ಇಲ್ಲದ ಕಾರಣ ಹಾಕಿದ ಬಂಡವಾಳ ಕೈ ಸೇರದೆ ಖಾಸಗಿ ಸಾಲಕ್ಕೆ ಸಿಲುಕಿ ಇತ್ತ ಬದುಕಲಾರದೆ ಮತ್ತೆ ಸಾಯಲಾರದೆ ಸಂದಿಘ್ನ ಪರಿಸ್ಥಿತಿಯಲ್ಲಿರುವ ಸಮಯದಲ್ಲಿ ಜಿಲ್ಲೆಯ ಪ್ರಾಥಮಿಕ ಸಹಕಾರ ಕೃಷಿ ಮತ್ತು ಗ್ರಾಮೀಣಾಭಿವೃದ್ಧಿ ಬ್ಯಾಂಕ್‍ನಿಂದ (ಪಿಎಲ್‍ಡಿ) ಪಡೆದಿದ್ದ ಕೃಷಿ, ಮೇಕೆ, ಕುರಿ ಹಾಗೂ ಕೋಳಿ ಸಾಕಾಣಿಕೆ ರೇಷ್ಮೆ ಮನೆ ನಿರ್ಮಾಣ ಮತ್ತಿತರ ಸಾಲಗಳನ್ನು ಪಡೆದಿರುವುದು ಸತ್ಯಕ್ಕೆ ದೂರವಾದ ವಿಚಾರವಲ್ಲ. ಆದರೆ ನಾವು ಪಡೆದಿರುವ ಸಾಲವನ್ನು ಬ್ಯಾಂಕಿಗೆ ಮರುಪಾವತಿಸಿ ಬ್ಯಾಂಕನ್ನು ಅಭಿವೃದ್ಧಿ ಮಾಡಬೇಕಾದ ಜವಾಬ್ದಾರಿ ನಮ್ಮ ಮೇಲಿದೆ. ಆದರೆ ರೇಷ್ಮೆ, ಕೋಳಿ, ತರಕಾರಿಗೆ ಉತ್ತಮವಾದ ಬೆಲೆಯಿಲ್ಲ. ಈ ಪರಿಸ್ಥಿತಿಯಲ್ಲಿ ರೈತರಿಗೆ ಬೆದರಿಕೆ ಹಾಕುವ ರೀತಿಯಲ್ಲಿ ನೋಟಿಸ್ ನೀಡುತ್ತಿರುವುದು ಖಂಡನೀಯ ಯಾವ ಒಬ್ಬ ರೈತನಿಗೆ ತೊಂದರೆಯಾದರೆ ಅದಕ್ಕೆ ಜಿಲ್ಲಾಡಳಿತ ಮತ್ತು ಬ್ಯಾಂಕ್ ಅಧಿಕಾರಿಗಳೇ ನೇರ ಹೊಣೆಯಾಗುತ್ತಾರೆ. ಕೂಡಲೇ ಈ ಆದೇಶವನ್ನು ವಾಪಸ್ಸು ಪಡೆಯಬೇಕೆಂದು ಒತ್ತಾಯಿಸಿದರು.
ನೊಂದ ರೈತ ತ್ಯಾಗರಾಜ್ ಮಾತನಾಡಿ ಕೋರೋನಾ ಸಂದರ್ಭದಲ್ಲಿ ನಮ್ಮ ಮನೆಯ ಎಲ್ಲರಿಗೂ ಕೋರೋನಾ ಪಾಸಿಟೀವ್ ಆಗಿತ್ತು. ನಮ್ಮ ಜೀವಗಳು ಉಳಿಯುವುದೇ ಹೆಚ್ಚಾಗಿತ್ತು ಜೀವನ ನಿರ್ವಹಣೆಯೇ ಕಷ್ಟಕರವಾಗಿರುವ ಸಮಯದಲ್ಲಿ ಬ್ಯಾಂಕ್ ಆಡಳಿತ ಮಂಡಳಿ ಪಡೆದಿರುವ ಸಾಲವನ್ನು ಬಡ್ಡಿ ಸಮೇತ ಒಂದೇ ಕಂತಿನಲ್ಲಿ ಮರು ಪಾವತಿಸುವಂತೆ 15 ದಿನಗಳ ಗಡುವು ನೀಡಿ ನೋಟೀಸ್ ನೀಡುವ ಜೊತೆಗೆ ನೀಡಿರುವ ಸಮಯದಲ್ಲಿ ಸಾಲ ಮರುಪಾವತಿಸದೇ ಹೋದರೆ ನಿಮ್ಮ ಜಮೀನು ಹಾಗೂ ಇತರೆ ಚರ, ಸ್ಥಿರಾಸ್ತಿಗಳನ್ನು ಬಹಿರಂಗವಾಗಿ ಹರಾಜು ಜಫ್ತಿ ಕಾಯಿದೆ 70ರ ಪ್ರಕಾರ ಮಾಡುತ್ತೇವೆಂದು ನೋಟೀಸ್ ನೀಡಿರುವುದರಿಂದ ಸ್ವಾಭಿಮಾನದ ರೈತರಿಗೆ ನುಂಗಲಾರದ ತುತ್ತಾಗಿದೆ. ಕೊರೊನಾದಿಂದ ತತ್ತರಿಸಿ ಚೇತರಿಸಿಕೊಳ್ಳುವ ಸಮಯದಲ್ಲಿ ಗಾಯದ ಮೇಲೆ ಬರೆ ಎಂಬಂತೆ ಪಿಎಲ್‍ಡಿ ಬ್ಯಾಂಕ್ ಅಧಿಕಾರಿಗಳ ನೋಟೀಸ್ ರೈತರ ಬದುಕನ್ನೇ ಕಸಿದುಕೊಳ್ಳುವ ರೈತ ವಿರೋಧಿ ಧೋರಣೆಯಾಗಿದೆಂದು ತನ್ನ ಅಳಲನ್ನು ತೋಡಿಕೊಂಡರು.
ಪ್ರಾಂತ ರೈತ ಸಂಘದ ಜಿಲ್ಲಾ ಕಾರ್ಯದರ್ಶಿ ತೂರಂಡಹಳ್ಳಿ ವೆಂಕಟೇಶ್ ಮಾತನಾಡಿ ಸಾವಿರಾರು ಕೋಟಿ ಬ್ಯಾಂಕ್ ವಂಚನೆ ಮಾಡಿ ದೇಶ ಬಿಟ್ಟು ಹೋಗುವ ದೊಡ್ಡ ದೊಡ್ಡ ಕಾರ್ಪೋರೇಟ್ ಕಂಪನಿ ಮಾಲೀಕರ ರಕ್ಷಣೆ ಮಾಡುವ ಸರ್ಕಾರಗಳು ಇಡೀ ದೇಶಕ್ಕೆ ಅನ್ನ ಹಾಕುವ ಅನ್ನದಾತನ ಅಲ್ಪ ಸ್ವಲ್ಪ ಸಾಲಕ್ಕೆ ನೋಟೀಸ್ ನೀಡಿ, ಸಾರ್ವಜನಿಕವಾಗಿ ಮಾನ ಹರಾಜು ಹಾಕುತ್ತೇವೆಂಬ ರೈತ ವಿರೋಧಿ ಧೋರಣೆಯನ್ನು ಕೈಬಿಡಬೇಕು ಕೂಡಲೇ ಮಾನ್ಯ ಜಿಲ್ಲಾಧಿಕಾರಿಗಳು ಕೂಡಲೇ ರೈತರಿಗೆ ನೋಟೀಸ್ ನೀಡಿರುವ ಬ್ಯಾಂಕ್ ಅಧಿಕಾರಿಗಳ ಸಭೆ ಕರೆದು ಆರ್ಥಿಕವಾಗಿ ಚೇತರಿಸಿಕೊಳ್ಳುವವರೆಗೂ ಸಾಲ ವಸೂಲಾತಿಗೆ ಮುಂದಾಗದ ಜೊತೆಗೆ ನೋಟೀಸ್ ನೀಡದಂತೆ ಆದೇಶ ಮಾಡಿ ಸಂಕಷ್ಟದಲ್ಲಿರುವ ರೈತರ ನೆರವಾಗಬೇಕೆಂದು ಒತ್ತಾಯಿಸಿದರು.
ಮನವಿ ಸ್ವೀಕರಿಸಿ ಮಾತನಾಡಿದ ಅಪರ ಜಿಲ್ಲಾಧಿಕಾರಿಗಳಾದ ಸ್ನೇಹ ರವರು ಮಾತನಾಡಿ ಈ ಕೂಡಲೇ ಜಿಲ್ಲಾಧಿಕಾರಿಗಳ ಗಮನಕ್ಕೆ ತಂದು ಬ್ಯಾಂಕ್ ಅಧಿಕಾರಿಗಳೊಂದಿಗೆ ಸಭೆ ಮಾಡುವ ಮೂಲಕ ರೈತರ ಸಮಸ್ಯೆಯನ್ನು ಬಗೆಹರಿಸುವ ಭರವಸೆ ನೀಡಿದರು.
ಈ ಹೋರಾಟದಲ್ಲಿ ರೈತಸಂಘದ ಮಹಿಳಾ ಜಿಲ್ಲಾದ್ಯಕ್ಷೆ ಎ.ನಳಿನಿಗೌಡ, ಮಹಾಲಕ್ಷೀ, ಜಿಲ್ಲಾದ್ಯಕ್ಷ ಐತಾಂಡಹಳ್ಳಿ ಮಂಜುನಾಥ್, ಕೋಲಾರ ತಾಲ್ಲೂಕಾದ್ಯಕ್ಷ ಈಕಂಬಳ್ಳಿ ಮಂಜುನಾಥ್, ಪ್ರಾಂತ ರೈತ ಸಂಘದ ತಾ.ಅ ಶ್ರೀರಾಮರೆಡ್ಡಿ, ಶ್ರೀದರ್,ವೆಂಕಟೇಶ್, ಯೆಲ್ಲಪ್ಪ, ಕೃಷ್ಣೇಗೌಡ, ಮಣಿ, ನೊಂದ ರೈತರು ಮುನಿರತ್ನ, ಚಂದ್ರಪ್ಪ, ಹೊಳಲಿ ಚಲಪತಿ, ಚಿನ್ನಾರಪ್ಪ, ರಾಮಪ್ಪ, ವೆಂಕಟೇಶ್ , ಕಾಂತ್‍ರಾಜ್, ನವೀನ್, ರಾಧಕೃಷ್ಣ, ಜೋಗಪ್ಪ, ಮುನಿಶ್ಯಾಮಪ್ಪ, ನಾರಾಯಣಪ್ಪ, ಮುಂತಾದವರಿದ್ದರು.