ಕೋಲಾರ:- ನಿಯಮಬಾಹಿರವಾಗಿ ಪ್ರಭಾವಿಯೊಬ್ಬರ ಜಮೀನಿಗೆ ದಾರಿ ಮಾಡಿಕೊಡಲು ಆಮಿಷಗಳಿಗೆ ಒಳಗಾಗಿ ಹತ್ತಾರು ಅನ್ನದಾತರು ಬೆವರು ಸುರಿಸಿ ಬೆಳೆದಿದ್ದ ಬೆಳೆಯನ್ನೇ ಜೆಸಿಬಿ ಮೂಲಕ ನಾಶಪಡಿಸಿದ ತಹಸೀಲ್ದಾರ್ ಹರ್ಷವರ್ಧನ್ ವಿರುದ್ದ ಕ್ರಮ ಕೈಗೊಂಡು ತಮಗೆ ನ್ಯಾಯ ಒದಗಿಸಬೇಕು ಎಂದು ಆಗ್ರಹಿಸಿ ತಾಲ್ಲೂಕಿನ ಚಿಟ್ನಹಳ್ಳಿ ಗ್ರಾಮದ ರೈತರು ಮುಖಂಡ ಸಿ.ಎಂ.ರಮೇಶ್ ನೇತೃತ್ವದಲ್ಲಿ ಜಿಲ್ಲಾಧಿಕಾರಿ ಅಕ್ರಂ ಪಾಷಾ ಅವರಿಗೆ ಮನವಿ ಸಲ್ಲಿಸಿದರು.
ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಿ ಮಾತನಾಡಿದ ಅವರು, ತಹಸೀಲ್ದಾರ್ ಕಾನೂನುಬಾಹಿರವಾಗಿ ಗ್ರಾಮದಲ್ಲಿ ಸುಮಾರು 60 ವರ್ಷಗಳಿಂದ ಜನರಿಗೆ ಮಂಜೂರು ಆಗಿರುವ ಕಲ್ಲೋಣಿ ಕೆರೆಯ ನೀರು ಹರಿಯುವ ಕಾಲುವೆ ಒತ್ತುವರಿ ನೆಪದಲ್ಲಿ ಪ್ರಭಾವಿಯೊಬ್ಬರ ಜಮೀನಿಗೆ ರಸ್ತೆ ಮಾಡಿಕೊಡಲು ನಾವು ಕಷ್ಟಪಟ್ಟು ಬೆಳೆದ ಬೆಳೆ ನಾಶಪಡಿಸಿದ್ದಾರೆ, ಕನಿಷ್ಟ ನಮಗೆ ನೋಟೀಸ್ ಸಹಾ ನೀಡದೇ ದೌರ್ಜನ್ಯ ಎಸಗಿದ್ದಾರೆ ಎಂದು ಆರೋಪಿಸಿದರು.
ಕೆರೆಯೇ ಸುಮಾರು 60 ವರ್ಷಗಳಿಂದ ಮಾಯವಾಗಿರುವಾಗ ಕಾಲುವೆಯೂ ಅಲ್ಲಿ ಇಲ್ಲವಾಗಿದೆ, ಕಂದಾಯ ಇಲಾಖೆಯ ನಕ್ಷೆಯಲ್ಲೂ ಕೊರಕಲು ಕಾಲುವೆ ಎಂದೇ ನಮೂದಾಗಿದೆ. ತಾವುಗಳು ಮೊದಲು ಜನರಿಗೆ ಮಂಜೂರಾಗಿರುವ ಕೆರೆ ಒತ್ತುವರಿ ತೆರವುಗೊಳಿಸಿದ ನಂತರ ಕಾಲುವೆ ಮಾಡಲು ನಮ್ಮ ಅಭ್ಯಂತರವಿಲ್ಲ ಎಂದು ತಿಳಿಸಿದರು.
ಆದರೆ ತಹಸೀಲ್ದಾರ್ ಕಾಲುವೆ ಮಾಡುವ ನೆಪದಲ್ಲಿ ಅಲ್ಲಿ ರಸ್ತೆ ಮಾಡಲು ಹೊರಟಿದ್ದು, ಕೇಳಿದ ರೈತರೊಂದಿಗೆ ಅತ್ಯಂತ ಅಹಂನಿಂದ ವರ್ತಿಸಿ ಅವಾಚ್ಯ ಪದಗಳಿಂದ ನಿಂದಿಸಿದ್ದಾರೆ, ಗ್ರಾ.ಪಂ ಸದಸ್ಯೆಯೊಬ್ಬರ ಮನವಿಗೆ ಸ್ಪಂದಿಸಲಿಲ್ಲ ಎಂದು ತಿಳಿಸಿದರು.
ಬರದ ಸಂಕಷ್ಟದಲ್ಲಿ ಬೆವರು ಸುರಿಸಿ ಬೆಳೆದ ಬೆಳೆಯನ್ನು ರೈತರ ಕಣ್ಣಮುಂದೆಯೇ ನಾಶಪಡಿಸಿದ ತಹಸೀಲ್ದಾರ್ ಅವರ ಅಮಾನವೀಯ ವರ್ತನೆಯನ್ನು ಖಂಡಿಸಿ, ಹಾಗೂ ನಮಗೆ ಬೆಳೆನಷ್ಟ ನೀಡಬೇಕು ಮತ್ತು ಆಗಿರುವ ಅನ್ಯಾಯ ಸರಿಪಡಿಸಬೇಕು ಎಂದು ಒತ್ತಾಯಿಸಿದರು.
ಈ ಸಂಬಂಧ ಗ್ರಾಮಾಂತರ ಠಾಣೆಯಲ್ಲಿ ದೂರು ದಾಖಲಿಸಿದ್ದು, ಲೋಕಾಯುಕ್ತ ಮತ್ತು ಮಾನವ ಹಕ್ಕುಗಳ ಆಯೋಗಕ್ಕೂ ಮನವಿ ಸಲ್ಲಿಸುವುದಾಗಿ ತಿಳಿಸಿದ ರೈತರು, ನಮಗಾಗಿರುವ ಅನ್ಯಾಯ ಬೇರಾವ ರೈತರಿಗೂ ಆಗದಿರಲಿ ಎಂದು ಪ್ರಾರ್ಥಿಸಿದರು.
ಕಾಲುವೆ ಮಾಡಲು ಯಾವುದೇ ರೀತಿಯ ಸರ್ವೆ ಮಾಡದೆ ಹಾಗೂ ಹದ್ದು ಬಸ್ತನ್ನು ಗುರ್ತಿಸದೆ ಕಾಲುವೆಯನ್ನು ಕೊರೆಯಲು ಮುಂದಾಗಿ ನಮ್ಮ ಬೆಳೆಗಳಿಗೆ ತೊಂದರೆ ಕೊಡಲು ಹೊರಟಿದ್ದಾರೆ ಜಮೀನಿಗೆ ಪ್ರವೇಶಿಸುವ ಮುಂಚೆ ಮುಂಗಡವಾಗಿ ನೋಟೀಸ್ ಕೂಡ ಜಾರಿ ಮಾಡಿಲ್ಲ, ಸರ್ವೆ ಹಾಗೂ ಹದ್ದು ಬಸ್ತು ಗುರ್ತಿಸದೆ ಜಮೀನಿನಲ್ಲಿದ್ದ ಹಿಪ್ಪು ನೇರಳೆ ಸೊಪ್ಪನ್ನು ಹಾನಿ ಮಾಡಿದ್ದಾರೆ ಎಂದರು.
ತಾಲ್ಲೂಕು ಕಛೇರಿಯ ಅಧಿಕಾರಿಗಳು ಪ್ರಭಾವಿಗಳ ಜಮೀನಿಗೆ ಹೋಗಿ ಬರಲು ನಮ್ಮ ಜಮೀನಿನಲ್ಲಿ ಅಕ್ರಮವಾಗಿ ರಸ್ತೆ ನಿರ್ಮಾಣ ಮಾಡಿದರೇ ಹೊರತೂ ಕಾನೂನು ಬದ್ಧವಾಗಿ ಕೊರಕಲು ಕಾಲುವೆ ತೆರೆಯುವ ಉದ್ದೇಶ ಅವರಿಗಿರಲಿಲ್ಲ ಜಮೀನುಗಳ ದಾಖಲಾತಿಗಳನ್ನು ಪರಿಶೀಲಿಸಿ ರೈತರಿಗೆ ಯಾವುದೇ ರೀತಿಯ ತೊಂದರೆಯಾಗದಂತೆ ಸೂಕ್ತ ಕಾನೂನು ಕ್ರಮ ಜರುಗಿಸಬೇಕು ಎಂದು ಗ್ರಾಮಸ್ಥರು ಒತ್ತಾಯಿಸಿದರು.
ಈ ಸಂದರ್ಭದಲ್ಲಿ ಚಿಟ್ನಹಳ್ಳಿ ಗ್ರಾಮ ಪಂಚಾಯತಿ ಸದಸ್ಯೆ ಅನಿತ ಎನ್, ಗ್ರಾಮಸ್ಥರಾದ ಚೌಡರೆಡ್ಡಿ, ಸಿ.ಎಂ ನಾರಾಯಣಸ್ವಾಮಿ, ಶ್ರೀನಿವಾಸ್, ದಿವಾಕರ್, ಮಂಜುನಾಥ್, ಆನಂದ್, ಸಂತೋಷ್, ಪುರುಷೋತ್ತಮ್, ಸೇರಿದಂತೆ ರೈತರು ಇದ್ದರು.