ವರದಿ: ಶಬ್ಬೀರ್ ಅಹಮ್ಮದ್, ಶ್ರೀನಿವಾಸಪುರ
ಶ್ರೀನಿವಾಸಪುರ: ಜನ ಪ್ರತಿನಿಧಿಗಳು ನಾಗರಿಕರ ಮನವೊಲಿಸಿ ಕೊರೊನಾ ವಿರುದ್ಧ ಲಸಿಕೆ ಹಾಕಿಸಬೇಕು ಎಂದು ಲೋಕಸಭಾ ಸದಸ್ಯ ಎಸ್.ಮುನಿಸ್ವಾಮಿ ಹೇಳಿದರು.
ತಾಲ್ಲೂಕಿನ ಯಲ್ದೂರು ಗ್ರಾಮದಲ್ಲಿ ಮಂಗಳವಾರ ಬಡವರಿಗೆ ದಿನಸಿ ಕಿಟ್ ವಿತರಿಸಿ ಮಾತನಾಡಿ, ಜನರು ಕೊರೊನಾ ಲಸಿಕೆ ಕುರಿತು ಕೆಲವರು ಮಾಡುತ್ತಿರುವ ಅಪ ಪ್ರಚಾರಕ್ಕೆ ಕಿವಿಗೊಡಬಾರದು. ಲಸಿಕೆ ಬಗ್ಗೆ ಆತಂಕ ಬೇಡ. ಮೂಢ ನಂಬಿಕೆ ಹಾಗೂ ಅಪಪ್ರಚಾರವನ್ನು ನೆಚ್ಚಿಕೊಂಡಲ್ಲಿ ಹೆಚ್ಚಿನ ಅನಾಹುತ ಸಂಭವಿಸುವ ಸಾಧ್ಯತೆ ಇರುತ್ತದೆ ಎಂಬುದನ್ನು ಮನಗಾಣಬೇಕು ಎಂದು ಹೇಳಿದರು.
ಕಿಸಾನ್ ರೈಲು ಸೇವೆ ಪ್ರಾರಂಭಿಸಿರುವುದರಿಂದ ರೈತರಿಗೆ ಹೆಚ್ಚು ಪ್ರಯೋಜನವಾಗಿದೆ. ಅದರಲ್ಲೂ ಮಾವು ಬೆಳೆಗಾರರಿಗೆ ತುಂಬಾ ಅನುಕೂಲವಾಗಿದೆ. ಮಾವಿಗೆ ಬೆಲೆ ಕುಸಿತ ಉಂಟಾಗಿದ್ದು, ರೈತರು ಸಂಕಷ್ಟ ಎದುರಿಸುತ್ತಿದ್ದಾರೆ. ಬೆಂಬಲ ಬೆಲೆ ನೀಡುವಂತೆ ಮುಖ್ಯ ಮಂತಿ ಬಿ.ಎಸ್.ಯಡಿಯೂರಪ್ಪ ಅವರಲ್ಲಿ ಮನವಿ ಮಾಡಲಾಗಿದೆ ಎಂದು ಹೇಳಿದರು.
ಜಿಲ್ಲಾ ಬಿಜೆಪಿ ಘಟಕದ ಅಧ್ಯಕ್ಷ ಡಾ. ಕೆ.ಎನ್.ವೇಣುಗೋಪಾಲ್ ಮಾತನಾಡಿ, ಕೊರೊನಾ ಸೋಂಕು ಹಾಗೂ ಲಾಕ್ ಡೌನ್‍ನಿಂದಾಗಿ ಗ್ರಾಮೀಣ ಪ್ರದೇಶದ ಜನರ ಬದುಕು ದುಸ್ತರವಾಗಿದೆ. ಬಡವರು ಹೆಚ್ಚು ಸಂಕಷ್ಟಕ್ಕೆ ಒಳಗಾಗಿದ್ದಾರೆ. ಆದ್ದರಿಂದ ಅವರಿಗೆ ಒಂದಿಷ್ಟು ನೆರವು ನೀಡುವ ಉದ್ದೇಶದಿಂದ ದಿನಸಿ ಕಿಟ್ ವಿತರಿಸಲಾಗುತ್ತಿದೆ ಎಂದು ಹೇಳಿದರು.
ಶ್ರೀನಿವಾಸಪುರದಲ್ಲಿ ತಾಲ್ಲೂಕು ಕಾರ್ಯನಿರತ ಪತ್ರಕರ್ತರ ಸಂಘದ ಸದಸ್ಯರಿಗೆ ಆಹಾರ ಪದಾರ್ಥಗಳ ಕಿಟ್ ವಿತರಿಸಲಾಯಿತು. ಸಂಸದ ಎಸ್.ಮುನಿಸ್ವಾಮಿ ಅವರು, ಈಚೆಗೆ ಕೋವಿಡ್‍ನಿಂದ ನಿಧನರಾದ ಇಬ್ಬರು ಪತ್ರಕರ್ತರ ಕುಟುಂಬಗಳಿಗೆ ತಲಾ ರೂ.50 ಸಾವಿರ ನೀಡಿದರು.
ತಾಲ್ಲೂಕಿನ ಕೋಟಪಲ್ಲಿ ಗ್ರಾಮದ ಬಡ ಕುಟುಂಬಗಳಿಗೆ ದಿನಸಿ ಕಿಟ್ ವಿತರಿಸಲಾಯಿತು.
ತಾಲ್ಲೂಕು ಬಿಜೆಪಿ ಘಟಕದ ಅಧ್ಯಕ್ಷ ಎ.ಅಶೋಕ್ ರೆಡ್ಡಿ, ಮಾಜಿ ಅಧ್ಯಕ್ಷ ಕೊಟ್ರಗುಳಿ ನಾರಾಯಣಸ್ವಾಮಿ, ಜಿಲ್ಲಾ ಉಸ್ತುವಾರಿ ಜಯಚಂದ್ರ, ಮುಖಂಡರಾದ ಎಂ.¯ಕ್ಷ್ಮಣಗೌಡ, ಬಾಲಾಜಿ, ಶ್ರೀನಿವಾಸರೆಡ್ಡಿ, ಮಂಜು, ಪದ್ಮನಾಭ್, ಷಫಿವುಲ್ಲಾ, ಅಶೋಕರೆಡ್ಡಿ, ಎಂ.ವೇಮಣ್ಣ ಇದ್ದರು.