ವ್ಯಕ್ತಿತ್ವ ವಿಕಸನ ಮತ್ತು ಜೀವನ ಮೌಲ್ಯಗಳು ಮಾಹಿತಿ ಶಿಬಿರ 2022


ನಮ್ಮ ನಡೆ-ನುಡಿ, ಆಚಾರ-ವಿಚಾರ, ಹಬ್ಬ-ಹರಿದಿನ ಮತ್ತು ಸಂಪ್ರದಾಯಗಳನ್ನು ವಿೂೀರದೆ ಎಲ್ಲರಲ್ಲಿ ಸೌಹಾರ್ದತೆಯಿಂದ ಸ್ಪರ್ಧಾತ್ಮಕ ಪ್ರಪಂಚದಲ್ಲಿ ಬಾಳಿ ಬದುಕುವುದೇ ವ್ಯಕ್ತಿತ್ವ. ಅದರೊಂದಿಗೆ ಕೆಲವು ಮೌಲ್ಯಗಳನ್ನು ವಿದ್ಯಾರ್ಥಿ ದೆಸೆಯಿಂದ ರೂಢಿಸಿಕೊಂಡು ತಂದೆ, ತಾಯಿ, ಗುರುಹಿರಿಯರನ್ನು ಗೌರವಿಸಿ ವಿದ್ಯಾರ್ಜನೆ ಮಾಡಿ ಜೊತೆ ಜೊತೆಗೆ ಸಾಮಾಜಿಕವಾಗಿ ಗೌರವದಿಂದ ಬದುಕುವುದೇ ಜೀವನ ಮೌಲ್ಯಗಳು ಎಂದು ಶ್ರೀ ವಿಜಯ ನಾಯ್ಕ್, ಅಧ್ಯಕ್ಷರು ಗ್ರಾಮ ಪಂಚಾಯತ್ ನಾಲ್ಕೂರು ಹೇಳಿದರು. ಅವರು ಇತ್ತೀಚೆಗೆ ಅಭಿವೃದ್ಧಿ ಸಂಸ್ಥೆ (ರಿ) ಬಾಳ್ಕುದ್ರು ಹಂಗಾರಕಟ್ಟೆ ಗ್ರಾಮ ಪಂಚಾಯತ್ ನಾಲ್ಕೂರು, ಸರಕಾರಿ ಪ್ರೌಢಶಾಲೆ ನಾಲ್ಕೂರು ಹಾಗೂ ಶಾಲಾಭಿವೃದ್ಧಿ ಮತ್ತು ಮೇಲುಸ್ತುವಾರಿ ಸಮಿತಿ ಇವರ ಸಂಯುಕ್ತ ಆಶ್ರಯದಲ್ಲಿ ಇತ್ತೀಚೆಗೆ ನಡೆದ ಒಂದು ದಿನದ “ವ್ಯಕ್ತಿತ್ವ ವಿಕಸನ ಮತ್ತು ಜೀವನ ಮೌಲ್ಯಗಳು” ಎಂಬ ಮಾಹಿತಿ ಶಿಬಿರ 22 ಉದ್ಘಾಟಿಸಿ ಮಾತಾಡಿದರು.
ಸಭಾದ್ಯಕ್ಷತೆಯನ್ನು ಶ್ರೀ ರೊ| ಪ್ರಸಾದ ಹೆಗ್ಡೆ ಅಧ್ಯಕ್ಷರು ಶಾಲಾಭಿವೃದ್ಧಿ ಮತ್ತು ಮೇಲುಸ್ತುವಾರಿ ಸಮಿತಿ ಸರಕಾರಿ ಪ್ರೌಢಶಾಲೆ ನಾಲ್ಕೂರು ಇವರು ಮಾತಾಡಿ ವಿದ್ಯಾರ್ಥಿ ದೆಸೆಯಿಂದಲೇ ಪ್ರಸಕ್ತ ವಿದ್ಯಾಮಾನಕ್ಕೆ ಸರಿಹೊಂದುವಂತೆ ಇಂತಹ ಮಾಹಿತಿ ಶಿಬಿರದಿಂದ ಮಕ್ಕಳಿಗೆ ಅತ್ಯುತ್ತಮ ಸಂಸ್ಕಾರ ನೀಡಿದಂತಾಗಿದೆ. ಇದು ನಮ್ಮೆಲ್ಲರ ಜವಾಬ್ದಾರಿ ಕೂಡ. ನಮ್ಮ ಅನುಕರಣೆಯಿಂದ ಮತ್ತು ಕೆಲವು ಮಾದರಿಗಳಿಂದ ಮೌಲ್ಯಗಳನ್ನು ಬೆಳೆಸಿಕೊಳ್ಳಲು ಸಾಧ್ಯವಾಗುತ್ತದೆ. ಅದೇ ರೀತಿ ನಮ್ಮ ತಂದೆ-ತಾಯಿ, ಗುರು ಹಿರಿಯರು ನಮಗೆ ಮಾರ್ಗದರ್ಶಕರಾಗಿರುತ್ತಾರೆ ಎಂದು ಪ್ರತಿಪಾದಿಸಿ, ಮಕ್ಕಳಲ್ಲಿ ಶಿಸ್ತಿನ ಜೊತೆಗೆ, ಸಹಪಠ್ಯೇತರ ವಿಚಾರಧಾರೆಗಳು ಶಾಲೆಯಲ್ಲಿ ಸಿಗುವಂತಾಗಬೇಕು ಎಂದು ನುಡಿದರು.
ಮುಖ್ಯ ಅತಿಥಿಯಾಗಿ ಶ್ರೀಮತಿ ದೀಪಾ ಶೆಟ್ಟಿ ಸಮೂಹ ಸಂಪನ್ಮೂಲ ವ್ಯಕ್ತಿ ಕೊಕ್ಕರ್ಣೆ ಇವರು ಮಾತನಾಡಿ ಮಕ್ಕಳಲ್ಲಿ ಮೌಲ್ಯವನ್ನು ಕಾರ್ಯರೂಪಕ್ಕೆ ತರುವ ರೀತಿ ಬೇರೆ ಬೇರೆಯಾಗಿದ್ದರೂ ಸಾರ್ವತ್ರಿಕ ಮೌಲ್ಯ ಒಂದೇ ಆಗಿರುತ್ತದೆ. ಅದೇ ರೀತಿ ನೀತಿಯ ವಿಚಾರಕ್ಕೆ ಬಂದರೆ ಮೌಲ್ಯಗಳೇ ನೀತಿಯ ಅಂತರಂಗದ ನೆಲೆಗಳಾಗಿರುತ್ತದೆ. ಅದು ಆಪ್ತ ಸಮಾಜದ ನಿರ್ಮಾಣಕ್ಕೆ ಪೂರಕ ಆಗಿರುತ್ತದೆ ಎಂದು ಹೇಳಿದರು. ಮಕ್ಕಳಿಗೆ ಮಾದರಿಗಳನ್ನು ಬೇರೆ ಬೇರೆ ವ್ಯಕ್ತಿಗಳನ್ನು ಪರಿಚಯಿಸುವುದಕ್ಕಿಂತ ನಮ್ಮ ಸುತ್ತ-ಮುತ್ತ ಇರುವ ಹಿರಿಯರು, ಕೃಷಿಕರು, ಸಾಧಕರು, ಶಿಕ್ಷಕರು, ಕಲಾವಿದರು ಮತ್ತು ಅನುಭವಿಗಳನ್ನು ಪರಿಚಯಿಸುವುದು ನಮ್ಮೆಲ್ಲರ ಆದ್ಯತೆಯಾಗಿರಬೇಕೆಂದರು.
ಸಭೆಯಲ್ಲಿ ಶ್ರೀ ಸಂತೋಷ ಹೆಗ್ಡೆ ಮಾಜಿ ಅಧ್ಯಕ್ಷರು, ಗ್ರಾಮ ಪಂಚಾಯತ್ ನಾಲ್ಕೂರು, ಮುಖ್ಯ ಶಿಕ್ಷಕ ಶ್ರೀ ಕೃಷ್ಣ ನಾಯ್ಕ, ಕೆ. ಶ್ರೀ ರಮೇಶ್ ವಕ್ವಾಡಿ, ಕಾರ್ಯದರ್ಶಿ ಅಭಿವೃದ್ಧಿ ಸಂಸ್ಥೆ (ರಿ.), ಬಾಳ್ಕುದ್ರು ಹಂಗಾರಕಟ್ಟೆ, ಅಬ್ದುಲ್ ರವೂಫ್ ಸಂಪನ್ಮೂಲ ವ್ಯಕ್ತಿ, ಶ್ರೀ ವಿಜಯ ನಾಯ್ಕ ಅಧ್ಯಕ್ಷರು ಗ್ರಾಮ ಪಂಚಾಯತ್ ನಾಲ್ಕೂರು ಹಾಗೂ ಶ್ರೀ ಪ್ರಸಾದ್ ಹೆಗ್ಡೆ ಅಧ್ಯಕ್ಷರು ಶಾಲಾಭಿವೃದ್ಧಿ ಮತ್ತು ಮೇಲುಸ್ತುವಾರಿ ಸಮಿತಿ ಸರಕಾರಿ ಪ್ರೌಢಶಾಲೆ, ನಾಲ್ಕೂರು ಹಾಗೂ ಎಲ್ಲಾ ಅಧ್ಯಾಪಕ ವೃಂದದವರು ಉಪಸ್ಥಿತರಿದ್ದರು.
ಈ ಕಾರ್ಯಕ್ರಮವನ್ನು ಕು|| ಅನಿಶಾ, ಪೇತ್ರಿ ನಿರೂಪಿಸಿ, ಶ್ರೀ ಕೃಷ್ಣ ನಾಯ್ಕ ಕೆ. ಮುಖ್ಯ ಶಿಕ್ಷಕರು ಸ್ವಾಗತಿಸಿ, ಶ್ರೀ ರಮೇಶ್ ವಕ್ವಾಡಿ ಪ್ರಾಸ್ತಾವನೆ ಮಾಡಿದರು. ಸಭಾ ಕಾರ್ಯಕ್ರಮದ ನಂತರ ಅಬ್ದುಲ್ ರವೂಫ್ “ವ್ಯಕ್ತಿತ್ವ ವಿಕಸನ ಮತ್ತು ಜೀವನ ಮೌಲ್ಯಗಳ ಕುರಿತು ಉಪನ್ಯಾಸ ನೀಡಿ ಸಂವಾದ ನಡೆಸಿಕೊಟ್ಟರು ಸುಮಾರು 73 ವಿದ್ಯಾರ್ಥಿಗಳು ಈ ಮಾಹಿತಿ ಶಿಬಿರದಿಂದ ಪ್ರಯೋಜನ ಪಡೆದರು.