ವರದಿ: ರಮೇಶ್ ವಕ್ವಾಡಿ ಸಂಪಾದಕರು: ಬರ್ನಾಡ್ ಡಿಕೋಸ್ತಾ
ಹಂಗಾರಕಟ್ಟೆ: ಶಾಲೆಯಲ್ಲಿ ಸಂತಸದ ಕಲಿಕೆ, ಗುಣಮಟ್ಟದ ಶಿಕ್ಷಣ ಸೃಜನಶೀಲ ಚಟುವಟಿಕೆಗಳು ನಡೆಯಬೇಕು. ಸೃಷ್ಟಿ ಶೀಲ ವ್ಯಕ್ತಿತ್ವಗಳು ಬೆಳಗಬೇಕು ಎಂದು ಶ್ರೀಮತಿ ವಿಜಯಲಕ್ಷ್ಮಿ ಶೆಟ್ಟಿ ಅಧ್ಯಕ್ಷರು ಗ್ರಾಮ ಪಂಚಾಯತ್ ಆವರ್ಸೆ ಇವರು ಇತ್ತೀಚೆಗೆ ಅಭಿವೃದ್ಧಿ ಸಂಸ್ಥೆ (ರಿ.), ಬಾಳ್ಕುದ್ರು ಹಂಗಾರಕಟ್ಟೆ ಹಾಗೂ ಗ್ರಾಮ ಪಂಚಾಯತ್ ಆವರ್ಸೆ ಮತ್ತು ಸರ್ಕಾರಿ ಪ್ರೌಢಶಾಲೆ ಆವರ್ಸೆ, ಶಾಲಾಭಿವೃದ್ಧಿ ಮೇಲುಸ್ತುವಾರಿ ಸಮಿತಿ ಇದರ ಸಂಯುಕ್ತ ಆಶ್ರಯದಲ್ಲಿ ಆವರ್ಸೆಯಲ್ಲಿ ನಡೆದ ವ್ಯಕ್ತಿತ್ವ ವಿಕಸನ ಮತ್ತು ಜೀವನಮೌಲ್ಯಗಳು ಎಂಬ ಮಾಹಿತಿ ಶಿಬಿರ 2022 ಉದ್ಘಾಟಿಸಿ ಶುಭ ನುಡಿದರು.
ಮುಖ್ಯ ಅತಿಥಿಯಾಗಿ ಶ್ರೀ ಚೇತನ್‍ಕುಮಾರ್ ಶೆಟ್ಟಿ, ಉದ್ಯಮಿ ಇಂಜಿನಿಯರ್ ಬ್ರಹ್ಮಾವರ ಇವರು ಮಾತಾಡಿ ಶಾಲಾ ಪಠ್ಯದೊಂದಿಗೆ ಸಹಪಠ್ಯ ಚಟುವಟಿಕೆಗಳು ಮಕ್ಕಳ ಸರ್ವಾಂಗೀಣ ಅಭಿವೃದ್ಧಿ ಹೊಂದಲು ಸಾಧ್ಯವಾಗುತ್ತದೆ. ಅಕ್ಷರ ಕಲಿಕೆ ಮಾತ್ರ ಶಿಕ್ಷಣವಲ್ಲ ಅಲ್ಲದೆ ಎಳೆವೆಯಲ್ಲಿ ಸಮಗ್ರ ಮಾಹಿತಿಗಳು ಲಭ್ಯವಾದಲ್ಲಿ ಅವರಲ್ಲಿ ಏಕಾಗ್ರತೆ ಹೆಚ್ಚುತ್ತದೆ. ಸಮಯ ಪ್ರಜ್ಞೆ ಮತ್ತು ಸೂಕ್ಷ್ಮತೆ ಬೆಳೆಯುತ್ತದೆ ಎಂದರು.
ಸಭಾದ್ಯಕ್ಷತೆಯನ್ನು ಶ್ರೀ ಶಂಕರ ಕುಲಾಲ್ ಅಧ್ಯಕ್ಷರು ಶಾಲಾಭಿವೃದ್ಧಿ ಮತ್ತು ಮೇಲುಸ್ತುವಾರಿ ಸಮಿತಿ ಸರಕಾರಿ ಪ್ರೌಢಶಾಲೆ ಆವರ್ಸೆ ಇವರು ಮಾತಾಡುತ್ತಾ ಇಂತಹ ಶಿಬಿರಗಳಿಂದ ನೀತಿಯ ಮೌಲ್ಯಗಳು ಅಂತರಂಗದ ನೆಲೆಗಳಾಗುತ್ತವೆ. ಅದೇ ರೀತಿ ಶಾಂತಿ, ಸಹಬಾಳ್ವೆ, ಸಹನೆ ಮನೋಧರ್ಮವಾಗಿ ನೆಲೆಯೂರಬೇಕೆಂಬುದೇ ಮೌಲ್ಯವಾಗಿ ಬೆಳೆಯುತ್ತದೆ. ನಮ್ಮ ಬದುಕಿನಲ್ಲಿ ಅನೇಕ ಅಹಿತಕರ ಘಟನೆಗಳು ಆಗಿಂದಾಗೆ ನಡೆಯುತ್ತಿರುತ್ತದೆ. ಎಲ್ಲದಕ್ಕೂ ಪ್ರತಿಕ್ರಯಿಸುತ್ತಾ ಹೋದರೆ ಸಮಾಜ ಅಲ್ಲೋಲ ಕಲ್ಲೋಲವಾಗುವುದಲ್ಲದೆ ಅಂತರಂಗ ಕದಡಿ ಹೋಗಿ ಉದ್ವಿಗ್ನತೆ ಕೋಪ, ಆರೋಪಗಳು ಮಾತ್ರ ಉಳಿಯುತ್ತದೆ ಎಂದರು.
ಸಭೆಯಲ್ಲಿ ಶ್ರೀ ರಮೇಶ್ ಕುಲಾಲ್ ಮುಖ್ಯ ಶಿಕ್ಷಕರು ಸರಕಾರಿ ಪ್ರೌಢಶಾಲೆ ಆವರ್ಸೆ, ಶ್ರೀ ರಮೇಶ್ ವಕ್ವಾಡಿ ಕಾರ್ಯದರ್ಶಿ ಅಭಿವೃದ್ಧಿ ಸಂಸ್ಥೆ (ರಿ) ಬಾಳ್ಕುದ್ರು ಹಂಗಾರಕಟ್ಟೆ, ಸಂಪನ್ಮೂಲ ವ್ಯಕ್ತಿ ಅಬ್ದುಲ್ ರವೂಫ್ ಮುಖ್ಯ ಶಿಕ್ಷಕರು ಸರಕಾರಿ ಪ್ರೌಢಶಾಲೆ ಹೆಸ್ಕುತ್ತೂರು, ಕುಂದಾಪುರ ವಲಯ ಉಪಸ್ಥಿತರಿದ್ದರು. ಸಭಾ ಕಾರ್ಯಕ್ರಮದ ನಂತರ ಮಕ್ಕಳಿಗೆ ಲಘು ಉಪಾಹಾರ ನೀಡಲಾಯ್ತು
ತದನಂತರ ಸುಮಾರು ಒಂದು ಗಂಟೆಗಳ ಕಾಲ ಸಂವಾದ ಕಾರ್ಯಕ್ರಮವನ್ನು ಅಬ್ದುಲ್ ರವೂಫ್ ನೀಡಿ ಮಾಹಿತಿ ಹಂಚಿಕೊಂಡರು. ಅವರು ಮಾತನಾಡುತ್ತಾ ಅನುಕರಣೆಯಿಂದ ಮಕ್ಕಳು ಬಹಳ ಸಂಗತಿಯನ್ನು ರೂಢಿಸಿಕೊಳ್ಳುತ್ತಾರೆ. ಅಂತಹ ಮಾದರಿಯಾಗಿ ಅನೇಕ ನಿದರ್ಶನಗಳು ನಮಗೆ ಗೋಚರಿಸುತ್ತದೆ ಮತ್ತು ಪುರಾಣದ ಉದಾಹರಣೆಗಳಿಂದ ವ್ಯಕ್ತಿತ್ವದ ಕುರಿತು ಸ್ಪಷ್ಟೀಕರಿಸಿದರೂ ಇಂತಹ ಮಾದರಿಯಿಂದ ಕಲಿಕೆ ಸಾಧ್ಯವಾಗುತ್ತದೆ ಎಂದರು. ಅದೇ ರೀತಿ ಮೌಲ್ಯದ ಮಾದರಿಗಳಾಗಿ ತಾಯಿ-ತಂದೆ, ಚಿಕ್ಕಮ್ಮ-ಚಿಕ್ಕಪ್ಪ, ಅಜ್ಜ-ಅಜ್ಜಿ, ಅತ್ತೆ-ಮಾವ, ಶಿಕ್ಷಕರು, ಊರ ಜನರು ಮನೆಯಲ್ಲಿರುವ ಬೆಕ್ಕು-ನಾಯಿ, ಪ್ರಾಣಿ-ಪಕ್ಷಿ, ಜೀವ-ಜಂತು, ಪ್ರಕೃತಿ ಇಂತಹ ಮಾದರಿಗಳಿಂದ ಮಗು ಮೌಲ್ಯವನ್ನು ರೂಢಿಸಿಕೊಳ್ಳಲು ಪೂರಕವಾಗಿದೆ ಎಂದು ಅಭಿಪ್ರಾಯಪಟ್ಟರು. ಸೃಜನಶೀಲ ಪ್ರಕೃಯೆಯಲ್ಲಿ ಮಗುವೇ ಮೌಲ್ಯದ ಸಂಕೇತವಾಗಿದ್ದು ಆ ಮಗುವಿನೊಳಗಿರುವ ಕೆಲವೊಂದು ಸೂಕ್ತ ಮೌಲ್ಯ ಜಾಗೃತವಾಗಿ ತನ್ನನ್ನು ತಾನು ವಿಸ್ತರಿಸಿಕೊಳ್ಳುತ್ತಾ ಹೋಗುತ್ತದೆ.
ಈ ಕಾರ್ಯಕ್ರಮವನ್ನು ಶಾಲಾ ದೈಹಿಕ ಶಿಕ್ಷಕ ಅಜಾದ್ ಮಹಮದ್ ನಿರೂಪಿಸಿ, ಶ್ರೀ ರಮೇಶ್ ಕುಲಾಲ್ ಮುಖ್ಯ ಶಿಕ್ಷಕರು ಸ್ವಾಗತಿಸಿ, ಶ್ರೀ ರಮೇಶ್ ವಕ್ವಾಡಿ ಪ್ರಾಸ್ತಾವನೆಗೈದರು. ಕು| ಜಯಲಕ್ಷ್ಮೀ ಸೇರಿಗಾರ್ ಕರ್ಜೆ ವಂದಿಸಿದರು. ಸುಮಾರು 153 ವಿದ್ಯಾರ್ಥಿಗಳು ಈ ಮಾಹಿತಿ ಶಿಬಿರದಿಂದ ಪ್ರಯೋಜನ ಪಡೆದರು.