ಕೋಲಾರ : ಕೋಲಾರ ಜಿಲ್ಲೆಯ ವ್ಯಾಪ್ತಿಗೆ ಸಂಬಂಧಿಸಿದ ಬಾಲ ಹಾಗೂ ಕಿಶೋರ ಕಾರ್ಮಿಕ (ನಿಷೇಧ ಮತ್ತು ನಿಯಂತ್ರಣ) ಕಾಯ್ದೆ 1986ರ ಕರ್ನಾಟಕ ನಿಯಮಗಳು 2ಸಿ ರಲ್ಲಿ ಒಬ್ಬ ಕಲಾವಿದನಾಗಿ ಕೆಲಸ ಮಾಡಬೇಕಾದ ಮಗು (1) ಕಲಂ 3ರ ನಿಬಂಧನೆಗಳ ವಿಷಯದಲ್ಲಿ ಮೇಲ್ಕಂಡ ಪರಿಸ್ಥಿತಿಗಳಿಗೆ/ನಿಯಮಗಳಿಗೆ ಒಳಪಟ್ಟಂತೆ ಮಗುವನ್ನು ಕಲಾವಿದನಾಗಿ ನಟನಾ ಕೆಲಸ ಮಾಡಲು ಇಚ್ಚಿಸಿದ್ದಲ್ಲಿ ಇನ್ನು ಮುಂದೆ ಕಡ್ಡಾಯವಾಗಿ ಜಿಲ್ಲಾಧಿಕಾರಿಗಳ ಅನುಮತಿಯನ್ನು ಪಡೆಯಬೇಕಾಗಿರುತ್ತದೆ.
ಬಾಲ ಹಾಗೂ ಕಿಶೋರಕಾರ್ಮಿಕ (ನಿಷೇಧ ಮತ್ತು ನಿಯಂತ್ರಣ) ಕಾಯ್ದೆ 1986ರ ತಿದ್ದುಪಡಿ ಕಾಯ್ದೆ 2016 ರನ್ವಯ ಮಕ್ಕಳ ಶಿಕ್ಷಣದ ಹಕ್ಕಿಗೆ ಮಾರಕವಾಗದಂತೆ ಬಾಲ ನಟ/ನಟಿಯಾಗಿ ನಟನಾ ಕೆಲಸ ನಿರ್ವಹಿಸುವ ಚಟುವಟಿಕೆಗಳನ್ನು ಹೊರತುಪಡಿಸಿ, ಕಾಯ್ದೆಯ ಎಲ್ಲಾ ಉದ್ಯೋಗ ಮತ್ತು ಪ್ರಕ್ರಿಯೆಯಲ್ಲಿ 14 ವರ್ಷಕ್ಕಿಂತ ಕಡಿಮೆ ವಯಸ್ಸಿನ ಮಕ್ಕಳನ್ನು ಕೆಲಸಕ್ಕೆ ನಿಯೋಜಿಸಿಕೊಳ್ಳುವುದನ್ನು ಸಂಪೂರ್ಣವಾಗಿ ನಿಷೇಧಿಸಿದೆ.
ಕಾಯ್ದೆಯು 14-18ರ ವಯಸ್ಸಿನ ಕಿಶೋರ ಕಾರ್ಮಿಕರನ್ನು ಅಪಾಯಕಾರಿ ಉದ್ದಿಮೆಗಳಲ್ಲಿ ಕಿಶೋರಾವಸ್ಥೆಯ ಮಕ್ಕಳನ್ನು ಕೆಲಸಕ್ಕೆ ನಿಯೋಜಿಸಿಕೊಳ್ಳುವುದನ್ನು ಸಂಪೂರ್ಣವಾಗಿ ನಿಷೇಧಿಸಿದೆ.
ಮಕ್ಕಳನ್ನು ಕೆಲಸಕ್ಕೆ ನಿಯೋಜಿಸಿಕೊಂಡಲ್ಲಿ ತಪ್ಪಿತಸ್ಥ ಮಾಲೀಕರಿಗೆ 06 ತಿಂಗಳಿಂದ 02 ವರ್ಷಗಳವರೆಗೆ ಜೈಲು ಶಿಕ್ಷೆ ಹಾಗೂ ರೂ.20,000/- ರಿಂದ ರೂ.50,000/-ರವರೆಗೆ ದಂಡ ಅಥವಾ ಎರಡನ್ನೂ ವಿಧಿಸಲು ಅವಕಾಶವಿರುತ್ತದೆ. ಪುನರಾವರ್ತಿತ ಅಪರಾಧಕ್ಕೆ 01 ವರ್ಷದಿಂದ 03 ವರ್ಷಗಳವರೆಗೆ ಜೈಲು ಶಿಕ್ಷೆ ವಿಧಿಸಲು ಅವಕಾಶವಿರುತ್ತದೆ.
ಬಾಲ ಹಾಗೂ ಕಿಶೋರ (ನಿಷೇಧ ಮತ್ತು ನಿಯಂತ್ರಣ) ಕಾಯ್ದೆ 1986ರ ಕರ್ನಾಟಕ ನಿಯಮಗಳು 2ಸಿ ರಲ್ಲಿ ಒಬ್ಬ ಕಲಾವಿದನಾಗಿ ಕೆಲಸ ಮಾಡಬೇಕಾದ ಮಗು (01) ಕಲಂ 3ರ ನಿಬಂಧನೆಗಳನ್ವಯ ಈ ಕೆಳಗಿನ ಪರಿಸ್ಥಿತಿಗಳಿಗೆ/ನಿಯಮಗಳಿಗೆ ಒಳಪಟ್ಟಂತೆ ಮಗು ಕಲಾವಿದನಾಗಿ ಕೆಲಸ ಮಾಡಲು ಅನುಮತಿಸಬಹುದು.
ಬಾಲ ನಟ/ನಟಿಯಾಗಿ ನಟನಾ ಕೆಲಸ ಮಾಡಲು ಇರುವ ಕಾನೂನಾತ್ಮಕ ಅಂಶಗಳು- ಯಾವುದೇ ಮಗುವನ್ನು ಒಂದು ದಿನದಲ್ಲಿ 5 ಗಂಟೆಗಳಿಗಿಂತ ಹೆಚ್ಚಿನ ಅವಧಿಗೆ ನಟನಾ ಕೆಲಸಕ್ಕೆ ನಿಯೋಜಿಸುವಂತಿಲ್ಲ ಮತ್ತು ವಿಶ್ರಾಂತಿ ಇಲ್ಲದೆ 3 ಗಂಟೆಗಳಿಗಿಂತ ಹೆಚ್ಚು ಕೆಲಸ ಮಾಡಿಸುವಂತಿಲ್ಲ.
ಶ್ರವಣ ಮತ್ತು ದೃಶ್ಯ ಮಾದ್ಯಮದ ಯಾವುದೇ ನಿರ್ಮಾಪಕರು ನಿರ್ಮಿಸಿದ ಅಥವಾ ಯಾವುದೇ ವಾಣಿಜ್ಯ ಪರಕಾರ್ಯಕ್ರಮದಲ್ಲಿ ಮಗು ಭಾಗವಹಿಸುವುದಿದ್ದರೆ ಆ ಚಟುವಟಿಕೆ ನಡೆಯುವ ಪ್ರದೇಶದ ಜಿಲ್ಲಾ ದಂಢಾಧಿಕಾರಿಗಳ ಪೂರ್ವಾನುಮತಿ ಪಡೆದು ಭಾಗವಹಿಸುವಂತೆ ಮಾಡುವುದು ಮತ್ತು ಈ ಚಟುವಟಿಕೆ ಪ್ರಾರಂಭಿಸುವ ಪೂರ್ವದಲ್ಲಿ ನಮೂನೆ ‘ಸಿ’ ಯಲ್ಲಿ ಜಿಲ್ಲಾದಂಡಾಧಿಕಾರಿಗೆ ಮುಚ್ಚಳಿಗೆ ಪತ್ರ ಸಲ್ಲಿಸುವುದು ಮತ್ತು ಭಾಗವಹಿಸುವ ಮಕ್ಕಳ ಪಟ್ಟಿ ಪೋಷಕರ ಅಥವಾ ಪಾಲಕರ ಒಪ್ಪಿಗೆ ಪತ್ರ ಸಲ್ಲಿಸುವುದು.
ಮಗುವಿನ ಸಂರಕ್ಷತೆಗೆ ಸಂಬಂಧಿಸಿದಂತೆ, ನಿರ್ಮಾಪಕರ ಅಥವಾ ಸಮಾರಂಭದ ಆಯೋಜಕರ ಹೆಸರುಗಳನ್ನು ಒದಗಿಸುವುದು. ಮಕ್ಕಳನ್ನು ಬಳಸಿ ಸಂಪೂರ್ಣ ಚಿತ್ರೀಕರಣ ಮಾಡುವ ಸಂದರ್ಭದಲ್ಲಿ ಮಕ್ಕಳ ದುರುಪಯೋಗ ಪ್ರಕರಣ, ನಿರ್ಲಕ್ಷ್ಯ ಅಥವಾ ಶೋಷಣೆ ನಡೆಯದಂತೆ ಸೂಕ್ತ ಮುಂಜಾಗ್ರತ ಕ್ರಮಗಳನ್ನು ಕೈಗೊಂಡಿರಬೇಕೆಂದು ಚಲನಚಿತ್ರಗಳ ಅಥವಾ ದೂರದರ್ಶನದ ಪ್ರದರ್ಶನದ ಹಕ್ಕು ನಿರಾಕರಣೆಗೆ ಒಳಪಟ್ಟಿದೆ ಎಂಬುದನ್ನು ನಿರ್ಮಾಪಕರಿಗೆ ಖಚಿತ ಪಡಿಸುವುದು.
ಮಕ್ಕಳ ಶೈಕ್ಷಣಿಕ ಹಿತ ದೃಷ್ಟಿಯಿಂದ ಇಂಥದೊಂದು ನಿರ್ಧಾರ ಮಾಡಿದ್ದು, ಬಾಲ ನಟರು, ನಟಿಯರ ಪಾತ್ರಕ್ಕಾಗಿ ಮಕ್ಕಳನ್ನು ಬಳಸಿಕೊರ್ಳಳಲು ಇಚ್ಚಿಸುವ ಸಿನಿಮಾ ನಿರ್ದೇಶಕರು, ನಿರ್ಮಾಪಕರು, ಆಯೋಜಕರು ಜಿಲ್ಲಾಧಿಕಾರಿಗಳಿಂದ ಅನುಮತಿ ಪತ್ರ ಪಡೆಯುವುದು ಕಡ್ಡಾಯ. ಮುಂದಿನ ದಿನಗಳಲ್ಲಿ ಮಕ್ಕಳನ್ನು ಚಿತ್ರಕತೆಗೆ ಜಿಲ್ಲಾಧಿಕಾರಿ ಅನುಮತಿ ಇಲ್ಲದೆ ಬಳಸಿಕೊಂಡಿದ್ದೇ ಆದಲ್ಲಿ ಕಾನೂನು ಉಲ್ಲಂಘನೆಯಾಗುತ್ತದೆ. ಕಾನೂನು ಉಲ್ಲಂಘಿಸುವ ಸಿನಿಮಾ ಹಾಗೂ ಧಾರಾವಾಹಿ ಜವಾಬ್ದಾರಿ ಹೊತ್ತ ಆಯೋಜಕರು, ನಿರ್ಮಾಪಕರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲಾಗುತ್ತದೆ.
ಹೆಚ್ಚಿನ ಮಾಹಿತಿಗಾಗಿ ಸಂಬಂಧಪಟ್ಟ ಕಾರ್ಮಿಕ ಅಧಿಕಾರಿಗಳ ಕಛೇರಿ ಹಾಗೂ ಜಿಲ್ಲಾ ಬಾಲ ಕಾರ್ಮಿಕ ಯೋಜನೆಯ ಕಛೇರಿಯನ್ನು ಸಂಪರ್ಕಿಸಬಹುದು ಎಂದು ಜಿಲ್ಲಾ ಬಾಲ ಕಾರ್ಮಿಕ ಯೋಜನೆಯ ಅಧ್ಯಕ್ಷರು ಹಾಗೂ ಜಿಲ್ಲಾಧಿಕಾರಿಗಳಾದ ಅಕ್ರಂ ಪಾಷ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ