

ಕೋಲಾರ : ಹಲವಾರು ವರ್ಷಗಳಿಂದ ಕೋಲಾರ ಜಿಲ್ಲೆಯ ಜನತೆಗೆ ಕುಡಿಯುವ ನೀರನ್ನು ಪೂರೈಸುವ ಮಹತ್ವದ ಯೋಜನೆಯಾದ ಯರಗೊಳ್ ಯೋಜನೆಗೆ ಇಂದು ಮಾನ್ಯ ಮುಖ್ಯಮಂತ್ರಿಗಳಾದ ಸಿದ್ದರಾಮಯ್ಯ ರವರು ಚಾಲನೆ ನೀಡಿದರು.
ನಂತರ ಸಭಿಕರನ್ನುದ್ದೇಶಿ ಮಾತನಾಡಿದ ಅವರು ಕೆ ಸಿ ವ್ಯಾಲಿ, ಹೆಚ್ ಎನ್ ವ್ಯಾಲಿ,ಎತ್ತಿನ ಹೊಳೆ ಸೇರಿದಂತೆ ರಾಜ್ಯದ ಎಲ್ಲ ಕುಡಿಯುವ ನೀರಿನ ಯೋಜನೆಗಳನ್ನು ಈ ಸರ್ಕಾರದ ಅವಧಿಯಲ್ಲಿ ಪೂರ್ಣಗೊಳಿಸಲಾಗುವುದು ಎಂದರು.ಮುಂದಿನ ದಿನಗಳಲ್ಲಿ ಯರಗೊಳ್ ಜಲಾಶಯದ ಕುಡಿಯುವ ನೀರನ್ನು ಕೆ. ಜಿ. ಎಫ್ ತಾಲ್ಲೂಕಿಗೂ ವಿಸ್ತರಣೆ ಮಾಡಲು ಚಿಂತಿಸಲಾಗುತ್ತಿದೆ. ಜಿಲ್ಲೆಯ ಅಪೂರ್ವ ರಮ್ಯ ಸ್ಥಳಗಳಲ್ಲಿ ಇದೂ ಸೇರಲಿದೆ.ಎತ್ತಿನಹೊಳೆ ಕುಡಿಯುವ ನೀರು ಬಂದಲ್ಲಿ ಕೋಲಾರ, ಚಿಕ್ಕಬಳ್ಳಾಪುರ, ತುಮಕೂರು ಹಾಗೂ ಬೆಂಗಳೂರು ಗ್ರಾಮಾಂತರ ಜಿಲ್ಲೆಗಳಿಗೆ ಸಮರ್ಪಕವಾಗಿ ಕುಡಿಯುವ ನೀರು ಒದಗಿಸಬಹುದಾಗಿದೆ ಎಂದು ತಿಳಿಸುತ್ತಾ ಬೆಮೆಲ್ ನಿಂದ ವಾಪಸ್ ಪಡೆಯಲಾದ 914 ಎಕರೆ ಭೂಮಿಯಲ್ಲಿ ಅತ್ಯಾಧುನಿಕ ಟೌನ್ ಶಿಪ್ ನಿರ್ಮಾಣ ಮಾಡಲಾಗುವುದು,ಕೋಲಾರ ಜಿಲ್ಲೆಯಲ್ಲಿ 50 ಎಕರೆಗಳ ಜಾಗದಲ್ಲಿ ಕೋಮುಲ್ ಮೆಗಾ ಗೋಲ್ಡನ್ ಡೈರಿ ಕಾಮಗಾರಿಗೆ ಈಗಾಗಲೇ ಚಾಲನೆ ನೀಡಲಾಗಿದೆ ಎಂದು ತಿಳಿಸಿದರು.
ಜಿಲ್ಲೆಯ ಇತರೆ ಎಲ್ಲ ಇಲಾಖೆಗಳ ಒಟ್ಟು 2197.72 ಕೋಟಿಗಳ ಮೊತ್ತದ ವಿವಿಧ ಕಾಮಗಾರಿಗಳ ಶಂಕುಸ್ಥಾಪನೆ ಹಾಗೂ ಉದ್ಘಾಟನೆ ಮಾಡಲಾಗಿದೆ ಈ ಮೂಲಕ ಜಿಲ್ಲೆಗೆ ಅತೀ ಹೆಚ್ಚು ಅನುದಾನ ಒದಗಿಸಿದ ಸರ್ಕಾರ ಈ ಸರ್ಕಾರವಾಗಿದೆ ಎಂದು ನುಡಿದರು ಇದಕ್ಕೂ ಮುನ್ನ ತುಂಬಿದ ಯರಗೋಳ್ ಜಲಾಶಯಕ್ಕೆ ಮುಖ್ಯಮಂತ್ರಿ ಸಿದ್ದರಾಮಯ್ಯ, ಸಚಿವರಾದ ಬಿ. ಎಸ್ ಸುರೇಶ್ ಸೇರಿದಂತೆ ವಿವಿಧ ಇಲಾಖೆಗಳ ಸಚಿವರು ಬಾಗಿನ ಅರ್ಪಿಸಿದರು.
ಸಮಾರಂಭದಲ್ಲಿ ಸಾರಿಗೆ ಸಚಿವರಾದ ರಾಮಲಿಂಗರೆಡ್ಡಿ, ಕಂದಾಯ ಸಚಿವರಾದ ಕೃಷ್ಣ ಭೈರೇಗೌಡ, ನಾಗರಾಭಿವವೃದ್ಧಿ ಹಾಗೂ ನಗರ ಯೋಜನೆ ಸಚಿವರಾದ ಬಿ. ಎಸ್. ಸುರೇಶ್, ವೈದ್ಯಕೀಯ ಶಿಕ್ಷಣ ಸಚಿವರಾದ ಡಾ. ಎಂ ಸಿ. ಸುಧಾಕರ್, ಸಮಾಜಕಲ್ಯಾಣ ಸಚಿವರಾದ ಹೆಚ್ ಸಿ ಮಹದೇವಪ್ಪ, ಆಹಾರ ಮತ್ತು ನಾಗರಿಕ ಸರಬರಾಜು ಸಚಿವ ಕೆ. ಹೆಚ್ ಮುನಿಯಪ್ಪ, ಇಂಧನ ಸಚಿವರಾದ ಕೆ. ಜೆ ಜಾರ್ಜ್, ಕೋಲಾರ ಸಂಸದ ಎಸ್ ಮುನಿಸ್ವಾಮಿ, ಜಿಲ್ಲೆಯ ಬಂಗಾರಪೇಟೆ ತಾಲ್ಲೂಕು ವಿಧಾನಸಭಾ ಶಾಸಕ ಎಸ್ ಎನ್ ನಾರಾಯಣ ಸ್ವಾಮಿ ಕೆ ಎಂ, ಕೆ ಜಿ ಎಫ್ ತಾಲ್ಲೂಕು ವಿಧಾನಸಭಾ ಶಾಸಕರಾದ ಡಾ. ರೂಪಕಲಾ ಶಶಿಧರ್,ಮಾಲೂರು ತಾಲ್ಲೂಕು ವಿಧಾನಸಭಾ ಶಾಸಕ ಕೆ. ವೈ ನಂಜೇಗೌಡ, ಕೋಲಾರ ತಾಲ್ಲೂಕು ವಿಧಾನಸಭಾ ಶಾಸಕ ಡಾ. ಕೊತ್ತೂರು ಜಿ ಮಂಜುನಾಥ್, ಮುಳಬಾಗಲು ತಾಲ್ಲೂಕು ವಿಧಾನಸಭಾ ಶಾಸಕ ಸಮೃದ್ಧಿ ಮಂಜುನಾಥ್, ಶ್ರೀನಿವಾಸಪುರ ತಾಲ್ಲೂಕು ವಿಧಾನಸಭಾ ಶಾಸಕ ಜಿ.ಕೆ ವೆಂಕಟಾಶಿವಾರೆಡ್ಡಿ ವಿಧಾನ ಪರಿಷತ್ ಶಾಸಕರಾದ ಇಂಚರ ಗೋವಿಂದರಾಜು , ಎಂ ಎಲ್ ಅನಿಲ್ ಕುಮಾರ್ ಸೇರಿದಂತೆ ಮತ್ತಿತರರು ಉಪಸ್ಥಿತರಿದ್ದರು.







