ಕೋಲಾರ:- ದಸರಾ ಮುಕ್ತಾಯದ ಹಿಂದಿನ ದಿನವಾದ ಆಯುಧಪೂಜೆಗಾಗಿ ನಗರದಲ್ಲಿ ಹಬ್ಬದ ವ್ಯಾಪಾರ ಜೋರಾಗೇ ನಡೆದಿದ್ದು, ಜನರಲ್ಲಿ ಹಬ್ಬ ಆಚರಣೆಯ ಉತ್ಸಾಹ ಎಲ್ಲೇ ಮೀರಿದೆ, ಹೂ,ಹಣ್ಣು,ಬುದುಗುಂಬಳದ ಬೆಲೆ ಗಗನಕ್ಕೇರಿ ಗ್ರಾಹಕನ ಜೇಬು ಕಚ್ಚುತ್ತಿದ್ದರೆ, ಕಳೆದೊಂದು ತಿಂಗಳಿಂದ ಹೂವಿನ ದರ ಕುಸಿತದಿಂದ ಕಂಗೆಟ್ಟಿದ್ದ ರೈತರಿಗೆ ಖುಷಿ ತಂದಿದೆ.
ಆಯುಧಪೂಜೆ ಹಿನ್ನಲೆಯಲ್ಲಿ ನಗರ ಹಾಗೂ ಗ್ರಾಮೀಣ ಜನತೆ ತಮ್ಮ ಮನೆಗಳ ಸ್ವಚ್ಚತೆಯ ಜತೆಗೆ ತಾವು ಬಳಸುವ ವಾಹನ,ಉಪಕರಣಗಳಿಗೆ, ವರ್ಷವಿಡೀ ಉದ್ಯೋಗ ನೀಡುವ ಅಂಗಡಿ,ಸಂಸ್ಥೆಗಳಲ್ಲಿ ವಿಶೇಷ ಪೂಜೆ ಸಲ್ಲಿಸುವ ಸಂಪ್ರದಾಯ ಈ ಬಾರಿಯೂ ನಡೆದಿದ್ದು, ಹೂವಿನ ಮಾರುಕಟ್ಟೆಯಲ್ಲಿ ಜನಸಂದಣಿ ಕಂಡು ಬಂತು.
ಪ್ರತಿ ಮನೆಯಲ್ಲೂ ಬಳಸುವ ವಾಹನ, ಉಪಕರಣಗಳು, ಅಂಗಡಿ, ಕಚೇರಿಗಳಲ್ಲಿ ವಿಶೇಷ ಪೂಜೆ ನಡೆಯುವುದರಿಂದ ಹೂವಿನ ಬೆಲೆ ಈ ಸಂದರ್ಭದಲ್ಲಿ ಗಗನಮುಖಿಯಾಗಿದೆ, ಕಳೆದೊಂದು ತಿಂಗಳಿಂದ ನೆಲಕಚ್ಚಿದ್ದ ಹೂವಿನ ಬೆಲೆ ಏರಿಕೆ ಬೆಳೆಗಾರರಲ್ಲಿ ಸಂತಸಕ್ಕೆ ಕಾರಣವಾಗಿದೆ.
ಕನಕದಷ್ಟೇ ಬೆಲೆ
ಕನಕಾಂಬರ
ಹೂವಿನ ಮಾರುಕಟ್ಟೆಯಲ್ಲಿ ಜನಜಂಗುಳಿ ಕಂಡು ಬಂದಿದ್ದು, ಹೂವಿನ ಬೆಲೆ ಗಗನಮುಖಿಯಾಗಿದೆ, ಕನಕಾಂಬರ ಹೂ ಕನಕದ ರೀತಿ ಬೆಲೆ ಏರಿಸಿಕೊಂಡಿದ್ದು, ಪ್ರತಿಕೆಜಿಗೆ 1200 ಸಾವಿರದವರೆಗೂ ಮಾರಾಟವಾಗುತ್ತಿದೆ. ಉಳಿದಂತೆ ಮಲ್ಲಿಗೆ ಹೂ ಕೆಜಿಗೆ 1000ರೂ, ರೋಸ್,ಸೇವಂತಿ-250ರಿಂದ 300 ರೂ, ಇನ್ನು ಚೆಂಡು ಹೂ ಕೆಜಿಗೆ 60ರೂಗಳಿಂದ 80 ರೂ ಇದೆ.
ಈ ನಡುವೆ ಆಯುಧಪೂಜೆಯ ಬಲಿ ಪೂಜೆಗೆ ಅತ್ಯಗತ್ಯವಾಗಿರುವ ಬೂದುಗುಂಬಳ ನಗರದ ಹಳೆ ಬಸ್ ನಿಲ್ದಾಣ, ತರಕಾರಿ ಮಾರುಕಟ್ಟೆ ಸಮೀಪ ರಾಶಿಗಟ್ಟಲೇ ಬಂದಿದೆ ಆದರೆ ಬೆಲೆ ಮಾತ್ರ ಭಯ ಮೂಡಿಸುತ್ತದೆ. ಗಾತ್ರವಾರು ಬೂದುಗುಂಬಳ 100 ರೂಗಳಿಂದ 300 ರೂಗಳವರೆಗೂ ಮಾರಾಟವಾಗುತ್ತಿದೆ.
ನಗರದ ರಂಗಮಂದಿರದ ಮುಂಭಾಗ ರಾಶಿಗಟ್ಟಲೇ ಬೂದುಗುಂಬಳ ಕಾಯಿಗಳು, ಬಾಳೆ ಕಂಬಗಳು ಕಂಡು ಬಂದವು. ಇಲ್ಲಿಯೂ ವ್ಯಾಪಾರ ಜೋರಾಗೇ ನಡೆದಿದ್ದು, ಬಾಳೆ ಗಿಡ ಜತೆ 50 ರೂಗಳಿಂದ 100ರೂವರೆಗೂ ತನ್ನ ಬೆಲೆಯನ್ನು ಏರಿಸಿಕೊಂಡು ನಾಗರೀಕರ ಜೇಬಿಗೆ ಕತ್ತರಿ ಹಾಕಲು ಸಿದ್ದವಾಗಿದೆ.
ಕೆಲವು ನಾಗರೀಕರು ಕಳೆದ ಮೂರ್ನಾಲ್ಕು ದಿನಗಳ ಹಿಂದೆಯೇ ಹೂ ಖರೀದಿಸಿ ಫ್ರೀಡ್ಜ್ನಲ್ಲಿ ಸಂಗ್ರಹಿಸಿದ್ದಾರೆ ಆದರೂ ಇತರೆ ಮಧ್ಯಮ,ಬಡ ಜನತೆ ಇಷ್ಟೊಂದು ಬೆಲೆ ಏರಿಕೆಯ ನಡುವೆಯೂ ಹೂ ಖರೀದಿಯಲ್ಲಿ ತೊಡಗಿದ್ದರು.
ಸರ್ಕಾರಿ ಕಚೇರಿಗಳಲ್ಲಿ
ಆಯುಧಪೂಜೆ ಸಂಭ್ರಮ
ಸರ್ಕಾರಿ ಕಚೇರಿಗಳಲ್ಲಿ ಆಯುಧಪೂಜೆ, ವಿಜಯಧಶಮಿಗೆ ಎರಡು ದಿನ ರಜೆಯಿದ್ದ ಕಾರಣ ನಗರದ ಅನೇಕ ಕಚೇರಿಗಳಲ್ಲಿ ಗುರುವಾರವೇ ಪೂಜೆ ಮುಗಿಸಲಾಗಿದೆ.
ಜಿಲ್ಲಾಧಿಕಾರಿಗಳ ಕಚೇರಿ, ಸರ್ವೇ, ಭೂದಾಖಲೆಗಳ ಇಲಾಖೆ, ಡಿಡಿಪಿಐ ಕಚೇರಿ, ಗ್ರಂಥಾಲಯ ಸೇರಿದಂತೆ ವಿವಿಧ ಕಚೇರಿಗಳಲ್ಲಿ ವಾಹನಗಳು, ಉಪಕರಣಗಳನ್ನು ತೊಳೆದು ಹೂಗಳಿಂದ ಅಲಂಕರಿಸಿ ಪೂಜಿಸಿದ್ದು ಕಂಡು ಬಂತು.
ಗ್ಯಾರೇಜ್ಗಳಲ್ಲಿ
ಬ್ಯುಸಿಯೋ ಬ್ಯುಸಿ
ನಾಳೆ ತಮ್ಮ ವಾಹನಗಳಿಗೆ ಪೂಜೆ ಮಾಡಲು ನಾಗರೀಕರು ಇಂದೇ ಸಿದ್ದತೆ ನಡೆಸಿದ್ದು ಕಂಡು ಬಂತು, ವಾಹನಗಳನ್ನು ತೊಳೆಯುವ ಗ್ಯಾರೇಜ್ಗಳು ತುಂಬಿ ತುಳುಕುತ್ತಿದ್ದು, ಕಾರು,ದ್ವಿಚಕ್ರವಾಹನಗಳ ಸಾಲು ನಗರದ ಗ್ಯಾರೇಜ್ಗಳ ಮುಂದೆ ಕಂಡು ಬಂತು ಒಟ್ಟಾರೆ ಆಯುಧಪೂಜೆ,ವಿಜಯದಶಮಿ ಸಂಭ್ರಮ ಇಡೀ ಜಿಲ್ಲೆಯಲ್ಲಿ ಮನೆ ಮಾಡಿದ್ದು, ಗ್ರಾಮೀಣ ಭಾಗದಲ್ಲೂ ಎತ್ತಿನಗಾಡಿ,ಟ್ರಾಕ್ಟರ್,ಕೃಷಿ ಉಪಕರಣಗಳಿಗೆ ಪೂಜೆ ಮಾಡುವ ಸಂಪ್ರದಾಯವನ್ನು ಸಂಭ್ರಮದಿಂದ ಆಚರಿಸಲು ಸಿದ್ದತೆ ನಡೆಸಲಾಗಿದೆ.