ಶ್ರೀನಿವಾಸಪುರ: ಜನರು ಅಧಿಕಾರಿಗಳ ಗ್ರಾಮ ವಾಸ್ತವ್ಯ ಕಾರ್ಯಕ್ರಮದ ಪ್ರಯೋಜನ ಪಡೆದುಕೊಳ್ಳಬೇಕು. ಸ್ಥಳದಲ್ಲಿಯೇ ತಮ್ಮ ಸಮಸ್ಯೆಗಳಿಗೆ ಪರಿಹಾರ ಪಡೆದುಕೊಳ್ಳಬೇಕು ಎಂದು ತಹಶೀಲ್ದಾರ್ ಶಿರಿನ್ ತಾಜ್ ಹೇಳಿದರು.
ತಾಲ್ಲೂಕಿನ ಆನೆಪಲ್ಲಿ ಗ್ರಾಮದಲ್ಲಿ ತಾಲ್ಲೂಕು ಆಡಳಿತದ ವತಿಯಿಂದ ಶನಿವಾರ ಏರ್ಪಡಿಸಿದ್ದ ಅಧಿಕಾರಿಗಳ ಗ್ರಾಮ ವಾಸ್ತವ್ಯ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು, ಪಹಣಿ, ದಾನಪತ್ರ, ಪಿಂಚಣಿ, ವಿಭಾಗ ಪತ್ರ, ಪೌತಿ ಖಾತೆ ಮುಂತಾದ ವಿಷಯಗಳಲ್ಲಿ ಯಾವುದೇ ಸಮಸ್ಯೆ ಇದ್ದಲ್ಲಿ ಸರಿಪಡಿಸಲಾಗುವುದು. ಎಲ್ಲ ಸರಿಯಿದ್ದಲ್ಲಿ ಸ್ಥಳದಲ್ಲಿಯೇ ಮಾಡಿಕೊಡಲಾಗುವುದು ಎಂದು ಹೇಳಿದರು.
ಗ್ರಾಮದಲ್ಲಿ 62 ಕುಟುಂಬಗಳಿದ್ದು, 330 ಮತದಾರರಿದ್ದಾರೆ. ಸರ್ಕಾರದ ಸೌಲಭ್ಯ ಕಲ್ಪಿಸುವುದು ಕಾರ್ಯಕ್ರಮದ ಉದ್ದೇಶವಾಗಿದೆ. ಎಲ್ಲ ಸೌಲಭ್ಯ ಅರ್ಹ ಫಲಾನುಭವಿಗಳಿಗೆ ತಲುಪುವಂತೆ ನೋಡಿಕೊಳ್ಳಲಾಗುವುದು. ಸರ್ವೆ ನಂಬರ್ 28ರಲ್ಲಿ 10 ಗುಂಟೆ ಜಾಗದಲ್ಲಿ ಸ್ಮಶಾನ ನಿರ್ಮಿಸಲಾಗುವುದು. ಶುದ್ಧ ಕುಡಿಯುವ ನೀರು ಘಟಕ ಸ್ಥಾಪಿಸಲಾಗುವುದು ಎಂದು ಹೇಳಿದರು.
ಸಭೆಯಲ್ಲಿ ವಿವಿಧ ಸಮಸ್ಯೆಗಳಿಗೆ ಸಂಬಂಧಿಸಿದಂತೆ 17 ಅರ್ಜಿ ಸ್ವೀಕರಿಸಲಾಯಿತು. 35 ಆಧಾರ್ ಕಾರ್ಡ್ ನೀಡಲಾಯಿತು. 10 ಪಹಣಿ ನೀಡಲಾಯಿತು. 7 ಮಂದಿಗೆ ಪಿಂಚಣಿ ನೀಡಲಾಯಿತು.
ಉಪ ತಹಶೀಲ್ದಾರ್ ಕೆ.ಎಲ್.ಜಯರಾಂ, ಶಿರಸ್ತೇದಾರರಾದ ಬಲರಾಮಚಂದ್ರೇಗೌಡ, ಮನೋಹರಮಾನೆ, ಕಂದಾಯ ಅಧಿಕಾರಿ ಸಂಕರರೆಡ್ಡಿ, ಗ್ರಾಮ ಲೆಕ್ಕಾಧಿಕಾರಿಗಳಾದ ಅಮರೀಶ್, ನಂದ್ಯಪ್ಪ, ಸಿಕಂದರ್, ಶಿವಪ್ರಕಾಶ್, ಮುರಳಿಧರ್, ವಿವಿಧ ಇಲಾಖೆಗಳ ಮುಖ್ಯಸ್ಥರಾದ ಎಂ.ಶ್ರೀನಿವಾಸ್, ಮಂಜುನಾಥ್, ಹನುಮೇಗೌಡ, ರಾಜಣ್ಣ, ತಿಪ್ಪಣ್ಣ ಇದ್ದರು.