ಜನರು ಜನಪರವಲ್ಲದ ಸರ್ಕಾರದ ವಿರುದ್ಧ ದನಿಯೆತ್ತಬೇಕು : ಪಿ.ಆರ್.ಸೂರ್ಯನಾರಾಯಣ

ಶ್ರೀನಿವಾಸಪುರ: ಜನರು ಜನಪರವಲ್ಲದ ಸರ್ಕಾರದ ವಿರುದ್ಧ ದನಿಯೆತ್ತಬೇಕು ಎಂದು ಕರ್ನಾಟಕ ಪ್ರಾಂತ ರೈತ ಸಂಘದ ರಾಜ್ಯ ಘಟಕದ ಉಪಾಧ್ಯಕ್ಷ ಪಿ.ಆರ್.ಸೂರ್ಯನಾರಾಯಣ ಹೇಳಿದರು.
ಪಟ್ಟಣದಲ್ಲಿ ಕರ್ನಾಟಕ ಪ್ರಾಂತ ರೈತ ಸಂಘದ ವತಿಯಿಂದ ಶನಿವಾರ ಏರ್ಪಡಿಸಿದ್ದ ಸ್ವಾತಂತ್ರ್ಯ, ಪ್ರಜಾಪ್ರಭುತ್ವ ಹಾಗೂ ಸಂವಿಧಾನದ ರಕ್ಷಣೆಗಾಗಿ ಪ್ರಚಾರಾಂದೊನ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದ ಅವರು, ಕೇಂದ್ರ ಸರ್ಕಾರ ಶ್ರೀಮಂತರ ಪರವಾಗಿದೆ. ರೈತರು, ಕಾರ್ಮಿಕರು ಹಾಗೂ ಕೂಲಿಕಾರರ ಬಗ್ಗೆ ಕಾಳಜಿ ಇಲ್ಲ ಎಂದು ಹೇಳಿದರು.
ದೇಶದ ಸ್ವಾಂತಂತ್ರ್ಯ ಮತ್ತು ಪ್ರಜಾಪ್ರಭುತ್ವ ವ್ಯವಸ್ಥೆ ಉಳಿಯಬೇಕಾದರೆ ಪ್ರಜೆಗಳು ಎಚ್ಚೆತ್ತುಕೊಳ್ಳಬೇಕು. ದೇಶ ಕ್ಷೇಮಕ್ಕಾಗಿ ಒಗ್ಗೂಡಬೇಕು. ಸಂವಿಧಾನ ರಕ್ಷಣೆಯಿಂದ ಮಾತ್ರ ದೇಶದಲ್ಲಿ ಪ್ರಜಾಪ್ರಭುತ್ವ ವ್ಯವಸ್ಥೆ ಉಳಿಯಲು ಸಾಧ್ಯ ಎಂದು ಹೇಳಿದರು.
ಕರ್ನಾಟಕ ಪ್ರಾಂತ ರೈತ ಸಂಘದ ಜಿಲ್ಲಾ ಘಟಕದ ಕಾರ್ಯದರ್ಶಿ ಪಾತಕೋಟ ನವೀನ್ ಕುಮಾರ್ ಮಾತನಾಡಿ, ಕೇಂದ್ರ ಸರ್ಕಾರ ಕಾರ್ಮಿಕರ ಕೆಲಸಕ್ಕೆ ಭದ್ರತೆ ನೀಡಿ, ಅವರ ಮೂಲಭೂತ ಹಕ್ಕುಗಳ ರಕ್ಷಣೆ ಮಾಡಬೇಕು. ಪಿಂಚಣಿ ಸೌಲಭ್ಯ ಕಲ್ಪಿಸಲು ಕಾರ್ಮಿಕ ನೀತಿಯನ್ನು ಗಟ್ಟಿಗೊಳಿಸಬೇಕು. ಆದರೆ ಇರುವ 29 ಕಾನೂನುಗಳನ್ನು 4 ಸಂಹಿತೆಗಳನ್ನಾಗಿ ತಂದು, ಇಡೀ ಕಾರ್ಮಿಕ ವರ್ಗವನ್ನು ಕಾನೂನುಬದ್ಧ ಗುಲಾಮರನ್ನಾಗಿಸಲು ಹೊರಟಿದೆ ಎಂದು ಹೇಳಿದರು.
ಆಹಾರ, ಆರೋಗ್ಯ, ಶಿಕ್ಷಣದ ಭಾಗವಾಗಿ ಬಂದಿರುವ ಅಂಗನವಾಡಿ, ಬಿಸಿಯೂಟ, ಆಶಾ, ಪೋಷಣ್ ಅಭಿಯಾನ ಹಾಗೂ ಸಂಜೀವಿನಿ ಯೋಜನೆಯಡಿ ದೇಶದಲ್ಲಿ ಸುಮಾರು 1 ಕೋಟಿಗೂ ಹೆಚ್ಚು ಮಂದಿ ದುಡಿಯುತ್ತಿದ್ದಾರೆ. ಆದರೆ ಅವರು ಶಾಸನಾತ್ಮಕವಾಗಿ ಸೌಲಭ್ಯ ವಂಚಿತರಾಗಿದ್ದಾರೆ ಎಂದು ಹೇಳಿದರು.