ಕೋಲಾರ:- ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರಕ್ಕೆ ಜನರ ಜೀವನದ ಕುರಿತು ಕಾಳಜಿ ಇರುವುದು ನಿಜವೇ ಆದರೆ ಎನ್ಹೆಚ್-75 ರಲ್ಲಿನ ಬೆತ್ತನಿ ಸಮೀಪ ತಮ್ಮ ಬದುಕು ಕಟ್ಟಿಕೊಳ್ಳಲು ಶಾಹಿ ಗಾರ್ಮೆಂಟ್ಸ್ಗೆ ಹೋಗುವ ಸಾವಿರಾರು ಮಹಿಳಾ ಕಾರ್ಮಿಕರಿಗೆ ರಸ್ತೆ ದಾಟಲು ಪಾದಚಾರಿ ಮೇಲ್ಸೇತುವೆ ನಿರ್ಮಿಸಿ ಜವಾಬ್ದಾರಿ ಪ್ರದರ್ಶಿಸಲಿ ಮತ್ತು ಜಿಲ್ಲಾಡಳಿತ ಈ ತಾಯಂದಿರ ಜೀವಕ್ಕೆ ಸಂಚಕಾರ ಬರುವ ಮುನ್ನಾ ಎಚ್ಚೆತ್ತುಕೊಳ್ಳಲಿ ಎಂಬುದು ಸಾರ್ವಜನಿಕರ ಆಗ್ರಹವಾಗಿದೆ.
ನಿತ್ಯ ಸಾವಿರಾರು ವಾಹನಗಳು ಸಂಚರಿಸುವ ರಾಷ್ಟ್ರೀಯ ಹೆದ್ದಾರಿ-75 ರಲ್ಲಿ ರಸ್ತೆ ಸುರಕ್ಷಾ ಕ್ರಮಗಳನ್ನು ಕೈಗೊಳ್ಳುವಲ್ಲಿ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ವೈಫಲ್ಯದಿಂದಾಗಿ ಅನೇಕರು ಜೀವ ಕಳೆದುಕೊಂಡಿರುವುದು, ನಿತ್ಯ ಒಂದಿಲ್ಲೊಂದು ಅಪಘಾತಗಳಿಂದ ಸಂಕಷ್ಟಕ್ಕೆ ಗುರಿಯಾಗುತ್ತಿರುವುದು ಸತ್ಯ ಸಂಗತಿ.
ಟೋಲ್ ಸಂಗ್ರಹವೊಂದೇ ತಮ್ಮ ಗುರಿ ಎಂಬಂತೆ ಕೆಲಸಮಾಡುವ ಈ ಪ್ರಾಧಿಕಾರ ಇಂದಿಗೂ ಸೇವಾ ರಸ್ತೆ ಪೂರ್ಣ ಪ್ರಮಾಣದಲ್ಲಿ ನಿರ್ಮಿಸುವಲ್ಲಿ ವಿಫಲವಾಗಿದೆ. ಈ ನಡುವೆ ರಸ್ತೆಯಲ್ಲಿ ಅಗತ್ಯವಿರುವೆಡೆ ಪಾದಚಾರಿ ಮೇಲ್ಸೇತುವೆ ಅಥವಾ ಅಂಡರ್ ಪಾಸ್ ನಿರ್ಮಿಸಿ ಜನರ ಅಮೂಲ್ಯ ಜೀವ ಉಳಿಸುವ ಕಾಯಕದಲ್ಲೂ ಎಡವಿದೆ.
ಶಾಹಿ ಗಾರ್ಮೆಂಟ್ಸ್ಗೆ ಸಾವಿರಾರು ಮಂದಿ
ನಗರ ಹೊರವಲಯದ ಬೆತ್ತನಿ ಸಮೀಪ ಹೆದ್ದಾರಿಗೆ ಹೊಂದಿಕೊಂಡಂತೆ ಸುಮಾರು 20 ವರ್ಷಗಳಿಂದ ಶಾಹಿ ಎಕ್ಸ್ಪೋರ್ಟ್ ಎಂಬ ಕಂಪನಿ ಕೆಲಸ ಮಾಡುತ್ತಿದೆ, ಇಲ್ಲಿಗೆ ನಗರ ಹಾಗೂ ವಿವಿಧೆಡೆಗಳಿಂದ ಸಾವಿರಾರು ಮಹಿಳಾ ಕಾರ್ಮಿಕರು ತಮ್ಮ ಬದುಕು ಕಟ್ಟಿಕೊಳ್ಳಲು ಬಂದು ಕಾರ್ಮಿಕರಾಗಿ ದುಡಿಯುತ್ತಿದ್ದಾರೆ.
ಕುಟುಂಬ ನಿರ್ವಹಣೆಗಾಗಿ, ಹೆತ್ತ ಮಕ್ಕಳಿಗೆ ಉತ್ತಮ ಶಿಕ್ಷಣ ಕೊಡಿಸುವ ತವಕದೊಂದಿಗೆ ಅನೇಕ ತಾಯಂದಿರು ಇಲ್ಲಿ ಕೆಲಸ ಮಾಡುತ್ತಿದ್ದು, ನಿತ್ಯ ಗಾರ್ಮೆಂಟ್ಸ್ಗೆ ಬರುವಾಗ ಮತ್ತು ಹೋಗುವಾಗ ರಸ್ತೆ ದಾಟಲು ತಮ್ಮ ಜೀವ ಕೈಯಲ್ಲಿಡಿದು ಸಾಗುತ್ತಿದ್ದಾರೆ.
ಇದು ರಾಷ್ಟ್ರೀಯ ಹೆದ್ದಾರಿಯಾಗಿದ್ದು, ವಾಹನಗಳು ಕನಿಷ್ಟ ಗಂಟೆಗೆ 100 ಕಿಮೀಗಿಂತಲೂ ಹೆಚ್ಚಿನ ವೇಗದಲ್ಲಿ ಸಂಚರಿಸುತ್ತವೆ, ಇಂತಹ ಅತಿ ವೇಗದ ವಾಹನಗಳಿಂದ ತಮ್ಮ ಜೀವ ಉಳಿಸಿಕೊಳ್ಳಲು ಪರದಾಡುತ್ತಾ ರಸ್ತೆ ದಾಟುವ ಈ ಮಹಿಳೆಯರ ಬದುಕಿಗೆ ಭದ್ರತೆ ಇಲ್ಲವಾಗಿದೆ.
ಕೆಲಸಕ್ಕೆ ಬಾರದ ಕಡೆಗಳಲ್ಲಿ ಒತ್ತಡಗಳಿಗೆ ಮಣಿದು ಪಾದಚಾರಿ ಮೇಲ್ಸೇತುವೆ ನಿರ್ಮಿಸಿರುವ ಹೆದ್ದಾರಿ ಪ್ರಾಧಿಕಾರಕ್ಕೆ ಸಾವಿರಾರು ಮಹಿಳೆಯರ ಜೀವ ರಕ್ಷಣೆಗಾಗಿ ಶಾಹಿ ಗಾರ್ಮೆಂಟ್ಸ್ ಮುಂದೆ ಒಂದು ಮೇಲ್ಸೇತುವೆ ನಿರ್ಮಿಸಬೇಕು ಎಂಬ ಪರಿಜ್ಞಾನವೇ ಇಲ್ಲದಂತಾಗಿದೆ.
ಈ ಕುರಿತು ಪತ್ರಿಕೆಗಳು ಗಮನ ಸೆಳೆದಿವೆ, ಶಾಹಿ ಕಂಪನಿಯ ಮಾನವ ಸಂಪನ್ಮೂಲ ವಿಭಾಗದ ವ್ಯವಸ್ಥಾಪಕ ಬೈರೇಗೌಡ ಅವರನ್ನು ಈ ಕುರಿತು ಪ್ರಶ್ನಿಸಿದರೆ ತಮ್ಮ ಕಂಫನಿ ಕಡೆಯಿಂದ ತಮ್ಮ ಕಾರ್ಮಿಕರ ರಕ್ಷಣೆಗಾಗಿ ಈಗಾಗಲೇ ನಾವು ಹೆದ್ದಾರಿ ಪ್ರಾಧಿಕಾರಕ್ಕೆ ಪಾದಚಾರಿ ಮೇಲ್ಸೇತುವೆ ನಿರ್ಮಾಣಕ್ಕೆ ಮನವಿ ನೀಡಿದ್ದೇವೆ, ಸೇತುವೆ ನಿರ್ಮಾಣ ಮಾಡಿಕೊಡುವ ಭರವಸೆ ನೀಡಿದ್ದಾರೆ ಎನ್ನುತ್ತಾರೆ.
ಹೆದ್ದಾರಿಯಲ್ಲಿ ಈಗಾಗಲೇ ಕೊಂಡರಾಜನಹಳ್ಳಿ ಸಮೀಪ ನಿರ್ಮಿಸಿರುವ ಮೇಲ್ಸೇತುವೆಯನ್ನು ಜನತೆ ಬಳಸಿಕೊಂಡ ನಿದರ್ಶನಗಳೇ ಇಲ್ಲ, ಯಾವೊಬ್ಬ ಪಾದಚಾರಿಯೂ ಅದರ ಮೇಲೆ ಓಡಾಡಿದ್ದನ್ನು ಕಾಣಲಿಲ್ಲ.
ಬದುಕು ಕಟ್ಟಿಕೊಳ್ಳಲು ದುಡಿಮೆಗೆ ಬರುವ ಮಹಿಳೆಯರ ಅಮೂಲ್ಯ ಜೀವಕ್ಕೆ ಕುತ್ತು ಬರುವ ಮುನ್ನಾ ಪ್ರಾಧಿಕಾರ ಎಚ್ಚೆತ್ತುಕೊಳ್ಳಲಿ, ಚುಂಚುದೇನಹಳ್ಳಿ ಸಮೀಪ ಅಪಘಾತಗಳಾಗಿ ಜೀವಗಳು ಬಲಿಯಾದ ನಂತರ ಅಂಡರ್ ಪಾಸ್ ನಿರ್ಮಾಣ ಮಾಡಿ ಮಧ್ಯೆ ರಸ್ತೆ ಬಂದ್ ಮಾಡಿದಂತೆ ಶಾಹಿ ಗಾರ್ಮೆಂಟ್ಸ್ ಬಳಿ ಮಾಡುವುದು ಬೇಡ ಅವಘಢಗಳು ಸಂಭವಿಸುವ ಮುನ್ನವೇ ಪಾದಚಾರಿ ಮೇಲ್ಸೇತುವೆ ನಿರ್ಮಿಸುವ ಸಾಮಾಜಿಕ ಜವಾಬ್ದಾರಿ ಮೆರೆಯಲಿ ಎಂಬುದು ಈ ಭಾಗದ ಸಾರ್ವಜನಿಕರ ಆಗ್ರಹವಾಗಿದೆ.
ಈ ನಿಟ್ಟಿನಲ್ಲಿ ರಸ್ತೆ ಸುರಕ್ಷತಾ ಪ್ರಾಧಿಕಾರದ ಅಧ್ಯಕ್ಷರೂ ಆಗಿರುವ ಜಿಲ್ಲಾಧಿಕಾರಿಗಳು ಇತ್ತ ಗಮನಹರಿಸುವ ಮೂಲಕ ಸಾವಿರಾರು ಮಹಿಳೆಯರು ತಮ್ಮ ಬದುಕುಕಟ್ಟಿಕೊಳ್ಳಲು ನಿರ್ಭಯವಾಗಿ ಸಾಗಲು ಅನುವು ಮಾಡಿಕೊಡಬೇಕಾಗಿದೆ.