ಅವರೆಕಾಯಿ ವಹಿವಾಟನ್ನು ಪಟ್ಟಣದಿಂದ ಕೃಷಿ ಉತ್ಪನ್ನ ಮಾರುಕಟ್ಟೆಗೆ ಸ್ಥಳಾಂತರಿಸಿ ಮಾರುಕಟ್ಟೆಯಲ್ಲಿ ಮೂಲಭೂತ ಸೌಕರ್ಯಗಳನ್ನು ಒದಗಿಸಬೇಕು- ರೈತ ಸಂಘ

ಶ್ರೀನಿವಾಸಪುರ; ಜ.9: ಅವರೆಕಾಯಿ ವಹಿವಾಟನ್ನು ಪಟ್ಟಣದಿಂದ ಕೃಷಿ ಉತ್ಪನ್ನ ಮಾರುಕಟ್ಟೆಗೆ ಸ್ಥಳಾಂತರಿಸಿ ಮಾರುಕಟ್ಟೆಯಲ್ಲಿ ಮೂಲಭೂತ ಸೌಕರ್ಯಗಳನ್ನು ಒದಗಿಸಬೇಕೆಂದು ಜ.12ರಂದು ಅವರೇಕಾಯಿ ಸಮೇತ ತಾಲೂಕು ಕಚೇರಿ ಮುತ್ತಿಗೆ ಹಾಕಲು ರೈತಸಂಘದ ಸಭೆಯಲ್ಲಿ ತೀರ್ಮಾನಿಸಲಾಯಿತು.
ಪಟ್ಟಣದ ಪ್ರವಾಸಿ ಮಂದಿರದಲ್ಲಿ ನಡೆದ ರೈತಸಂಘದ ಸಭೆಯಲ್ಲಿ ಮಾತನಾಡಿದ ರಾಜ್ಯ ಸಂಚಾಲಕ ಬಂಗವಾದಿ ನಾಗರಾಜಗೌಡ, ಕೃಷಿ ಮಾರುಕಟ್ಟೆಯಲ್ಲಿ ವಹಿವಾಟು ನಡೆಸಲು ಪರವಾನಗಿ ಪಡೆದ ಮಂಡಿ ಮಾಲೀಕರು ನಿಯಮಗಳನ್ನು ಉಲ್ಲಂಘನೆ ಮಾಡಿ ಪ್ರತಿ ವರ್ಷ ಪಟ್ಟಣದಲ್ಲಿ ಅವರೇಕಾಯಿ ವಹಿವಾಟನ್ನು ನಡೆಸುವ ಮುಖಾಂತರ ವಾಹನ ಸಂಚಾರಕ್ಕೆ ಅಡಚಣೆ ಹಾಗೂ ಕೃಷಿ ಉತ್ಪನ್ನ ಮಾರುಕಟ್ಟೆಗೆ ಬರುವ ಶುಲ್ಕಕ್ಕೆ ಕತ್ತರಿ ಹಾಕುತ್ತಿದ್ದಾರೆ ಎಂದು ಮಂಡಿ ಮಾಲೀಕರ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.
ಪ್ರತಿ ವರ್ಷ ಅವರೇಕಾಯಿ ಅವಕದ ಸಮಯದಲ್ಲಿ ಪಟ್ಟಣದಲ್ಲಿ ವಹಿವಾಟು ನಡೆಸುವ ಮುಖಾಂತರ ತಮ್ಮ ಹಿಟ್ಲರ್ ಧೋರಣೆಯನ್ನು ಅಧಿಕಾರಿಗಳ ಮೇಲೆ ಪ್ರದರ್ಶಿಸುತ್ತಿದ್ದಾರೆ. ಪರವಾನಗಿ ಪಡೆಯುವಾಗ ಯಾವುದೇ ವಹಿವಾಟು ಮಾರುಕಟ್ಟೆಯಲ್ಲೇ ನಡೆಸುವ ಒಪ್ಪಂದಕ್ಕೆ ಸಹಿ ಹಾಕಿ ಆ ನಂತರ ಅಧಿಕಾರಿಗಳನ್ನು ಗುಲಾಮರನ್ನಾಗಿ ಮಾಡಿಕೊಂಡು ತರಕಾರಿ, ಅವರೆಕಾಯಿ ವಹಿವಾಟನ್ನು ನಗರದಲ್ಲಿ ನಡೆಸುತ್ತಿದ್ದರೂ ಕ್ರಮಕೈಗೊಳ್ಳಬೇಕಾದ ಅಧಿಕಾರಿಗಳು ಇದ್ದೂ ಇಲ್ಲದಂತಾಗಿದ್ದಾರೆ ಎಂದು ಅವ್ಯವಸ್ಥೆ ವಿರುದ್ಧ ಕಿಡಿಕಾರಿದರು.
ಪ್ರತಿದಿನ ನೂರಾರು ಟನ್ ಅವರೆಕಾಯಿ ತುಂಬಿಕೊಂಡು ಬರುವ ಟ್ರಾಕ್ಟರ್, ಟೆಂಪೋ ಮತ್ತಿತರ ವಾಹನಗಳಿಂದ ಅಧಿಕ ಟ್ರಾಫಿಕ್ ಸಂಚಾರ ಹೆಚ್ಚಾಗಿ ತುರ್ತು ಪರಿಸ್ಥಿತಿಯಲ್ಲಿ ಬರುವ ಆಂಬ್ಯುಲೆನ್ಸ್ ಮತ್ತಿತರ ವಾಹನಗಳಿಗೆ ಅವರೆಕಾಯಿ ವ್ಯಾಪಾರಸ್ಥರಿಂದ ತೊಂದರೆಯಾಗುತ್ತಿದ್ದು, ಕ್ರಮ ಕೈಗೊಳ್ಳದೆ ಇರುವುದಕ್ಕೆ ಬೇಸರ ವ್ಯಕ್ತಪಡಿಸಿದರು.
ತಾಲ್ಲೂಕು ಅಧ್ಯಕ್ಷ ತೆರ್ನಹಳ್ಳಿ ಆಂಜಿನಪ್ಪ ಮಾತನಾಡಿ, ರೈತರ ಅಭಿವೃದ್ಧಿಗಾಗಿ ಹಾಗೂ ರೈತರು ಬೆಳೆದ ಬೆಳೆ ಮಾರುಕಟ್ಟೆಯಲ್ಲಿ ಮಾರಾಟಕ್ಕೆ ಇರುವ ಜಾಗವನ್ನು ಸದುಪಯೋಗಪಡಿಸಿಕೊಳ್ಳದೆ ಮಂಡಿ ಮಾಲೀಕರು ರೈತರಿಗೆ ವಂಚನೆ ಮಾಡಲು ನಗರದಲ್ಲಿ ವಹಿವಾಟು ನಡೆಸಿ ತೂಕ ಹಾಗೂ ಬೆಲೆಯಲ್ಲೂ ಮೋಸ ಮಾಡಿ ಕಾನೂನು ಬಾಹಿರ 10ರೂಪಾಯಿ ಮೀಟರ್ ಬಡ್ಡಿ ದಂಧೆಯಂತೆ ಕಮೀಷನ್ ಕೊಳ್ಳೆ ಹೊಡೆಯುತ್ತಿದ್ದಾರೆಂದು ಆರೋಪ ಮಾಡಿದರು.
ಇನ್ನೇನು ಕೆಲವೇ ತಿಂಗಳುಗಳಲ್ಲಿ ಮಾವು ಹಾಗೂ ಟೊಮೇಟೊ ಅವಕ ಮಾರುಕಟ್ಟೆಗೆ ಬರುತ್ತಿದ್ದು, ಮುಂಜಾಗೃತವಾಗಿ ಮಾವು, ಟೊಮೇಟೊ ಬೆಳೆಗಾರರಿಗೆ ಹಾಗೂ ದಲ್ಲಾಳರಿಗೆ ತೊಂದರೆಯಾಗದ ರೀತಿ ಮಾರುಕಟ್ಟೆಯಲ್ಲಿ ಶೌಚಾಲಯ, ಕುಡಿಯುವ ನೀರಿನ ವ್ಯವಸ್ಥೆ, ಗುಣಮಟ್ಟದ ಊಟ ದೊರೆಯುವಂತೆ ಜಾಗೃತಿ ವಹಿಸುವಂತೆ ಜ.12ರ ಗುರುವಾರದಂದು ಅವರೆಕಾಯಿ ಸಮೇತ ತಾಲ್ಲೂಕು ಆಡಳಿತ ಕಚೇರಿ ಮುತ್ತಿಗೆ ಹಾಕುವ ನಿರ್ಧಾರವನ್ನು ಸಭೆಯಲ್ಲಿ ತೀರ್ಮಾನಿಸಲಾಯಿತು.
ಸಭೆಯಲ್ಲಿ ರೈತಸಂಘದ ರಾಜ್ಯ ಉಪಾಧ್ಯಕ್ಷ ಕೆ.ನಾರಾಯಣಗೌಡ, ಜಿಲ್ಲಾಧ್ಯಕ್ಷ ಈಕಂಬಳ್ಳಿ ಮಂಜುನಾಥ್, ಆಲವಾಟ ಶಿವ, ಮಹಿಳಾ ಜಿಲ್ಲಾಧ್ಯಕ್ಷೆ ಎ.ನಳಿನಿಗೌಡ, ಕೋಟೆ ಮಂಜುಳಮ್ಮ, ಶ್ರೀನಿವಾಸ್, ವೆಂಕಟ್, ಶೇಷಾದ್ರಿ, ಸಹದೇವಣ್ಣ, ಷೇಕ್ ಷಫೀಉಲ್ಲಾ, ವೆಂಕಟೇಶ್, ಯಾರಂಘಟ್ಟ ಗಿರೀಶ್, ಹೆಬ್ಬಣಿ ಆನಂದರೆಡ್ಡಿ, ಶ್ರೀಕಾಂತ್ ಮುಂತಾದವರು ಇದ್ದರು.