ವರದಿ: ಶಬ್ಬೀರ್ ಅಹ್ಮದ್, ಶ್ರೀನಿವಾಸಪುರ
ಶ್ರೀನಿವಾಸಪುರ: ಸಾರ್ವಜನಿಕರು ರಂಜಾನ್ ಸಂದರ್ಭದಲ್ಲಿ ಶಾಂತಿ ಸುವ್ಯವಸ್ಥೆ ಪಾಲಿಸಬೇಕು. ಯಾವುದೇ ಕಾರಣಕ್ಕೂ ಶಾಂತಿ ಕದಡುವ ಕೃತ್ಯಕ್ಕೆ ಕೈ ಹಾಕಬಾರದು ಎಂದು ಪೊಲೀಸ್ ಇನ್ಸ್‍ಪೆಕ್ಟರ್ ಸಿ.ಜಿ.ನಾರಾಯಣಸ್ವಾಮಿ ಹೇಳಿದರು.
ಪಟ್ಟಣದ ಪೊಲೀಸ್ ಠಾಣೆಯಲ್ಲಿ ರಂಜಾನ್ ಆಚರಣೆಗೆ ಸಂಬಂಧಿಸಿದಂತೆ ಶನಿವಾರ ಏರ್ಪಡಿಸಿದ್ದ ಶಾಂತಿ ಸಭೆಯಲ್ಲಿ ಮಾತನಾಡಿ, ಜನರು ಕೋಮು ಸೌಹಾರ್ದ ಕಾಪಾಡಲು ಸಹಕರಿಸಬೇಕು. ಹಬ್ಬದ ಆಚರಣೆ ಸಂದರ್ಭದಲ್ಲಿ ಯಾವುದೇ ಕಾನೂನು ಬಾಹಿರ ಚಟುವಟಿಕೆ ಕಂಡುಬಂದರೂ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದು ಹೇಳಿದರು.
ಪಟ್ಟಣ ಮತ್ತು ಪಟ್ಟಣದ ಹೊರ ವಲಯದಲ್ಲಿ ಒಂದು ಸಮುದಾಯಕ್ಕೆ ಸೇರಿದ ಯುವಕರು ಹಾಗೂ ಬಾಲಕರು ಬೈಕ್ ವೀಲಿಂಗ್ ಮಾಡುತ್ತಿರುವ ಬಗ್ಗೆ ದೂರುಗಳು ಬಂದಿವೆ. ಬೈಕ್ ವೀಲಿಂಗ್ ಕಾನೂನು ಬಾಹಿರ ಕೃತ್ಯವಾಗಿದ್ದು, ಅಪಾಯಕಾರಿಯಾಗಿದೆ. ಆದ್ದರಿಂದ ಹಿರಿಯರು ವೀಲಿಂಗ್ ಮಾಡುವ ಹುಡುಗರಿಗೆ ಬುದ್ಧಿ ಹೇಳಬೇಕು. ಇಲ್ಲವಾದರೆ ಅಂಥವರ ವಿರುದ್ಧ ಪ್ರಕರಣ ದಾಖಲಿಸಲಾಗುವುದು ಎಂದು ಹೇಳಿದರು.
ಪೊಲೀಸ್ ಸಬ್ ಇನ್ಸ್‍ಪೆಕ್ಟರ್ ಚಂದ್ರಶೇಖರ್, ಪುರಸಭಾಧ್ಯಕ್ಷೆ ಲಲಿತಾ ಶ್ರೀನಿವಾಸ್, ಉಪಾಧ್ಯಕ್ಷೆ ಆಯಿಷಾ ನಯಾಜ್, ಮುಖಂಡರಾದ ಏಜಾಜ್ ಅಹ್ಮದ್, ರಸೂಲ್, ಜಾವಿದ್ ಇದ್ದರು.