ಶ್ರೀನಿವಾಸಪುರ: ಪ್ರತಿಯೊಬ್ಬರೂ ಸಂವಿಧಾನಕ್ಕೆ ಬದ್ಧರಾಗಿ ನಡೆದುಕೊಂಡಾಗ ಮಾತ್ರ ಸಮಾಜದಲ್ಲಿ ಶಾಂತಿ ಸುವ್ಯವಸ್ಥೆ ನೆಲೆಸಲು ಸಾಧ್ಯವಾಗುತ್ತದೆ ಎಂದು ಶಾಸಕ ಕೆ.ಆರ್.ರಮೇಶ್ ಕುಮಾರ್ ಹೇಳಿದರು.
ತಾಲ್ಲೂಕಿನ ಬತ್ತಲಗುಟ್ಟಪಲ್ಲಿ ಗ್ರಾಮದಲ್ಲಿ ಮಂಗಳವಾರ ಏರ್ಪಡಿಸಿದ್ದ ಸಮಾರಂಭದಲ್ಲಿ, ರೂ.10 ಲಕ್ಷ ವೆಚ್ಚದಲ್ಲಿ ನಿರ್ಮಿಸಲಾಗಿರುವ ಡಾ. ಬಿ.ಆರ್.ಅಂಬೇಡ್ಕರ್ ಭವನ ಉದ್ಘಾಟಿಸಿ ಮಾತನಾಡಿದ ಅವರು, ದೇಶದಲ್ಲಿನ ವಿವಿಧ ಸಮುದಾಯಗಳ ಮಧ್ಯೆ ಸಾಮರಸ್ಯ ನೆಲೆಗೊಳ್ಳಲು ಅಂಬೇಡ್ಕರ್ ಅವರ ಕೊಡುಗೆ ಅಪಾರ ಎಂದು ಹೇಳಿದರು.
ಡಾ. ಬಿ.ಆರ್.ಅಂಬೇಡ್ಕರ್ ಅವರು ಸಂವಿಧಾನದಲ್ಲಿ ಎಲ್ಲರಿಗೂ ಸಮಾನ ಅವಕಾಶ ಹಾಗೂ ಜೀವಿಸುವ ಹಕ್ಕು ಕಲ್ಪಿಸಿದ ಪರಿಣಾಮಗಾಗಿ, ಸಾಮಾಜಿಕ ಸಂಬಂಧ ಬಿಗಿಯಾಗಿ ಹೆಣೆದುಕೊಂಡಿದೆ. ಸಂವಿಧಾನದ ಆಶಯ ಸಂಪೂರ್ಣ ಸಾಕಾರಗೊಂಡಾಗ ಮಾತ್ರ ಬದುಕು ಹಸನಾಗಲು ಸಾಧ್ಯ ಎಂದು ಅಭಿಪ್ರಾಯಪಟ್ಟರು.
ಅಂಬೇಡ್ಕರ್ ಅವರ ಬದುಕು ಹಾಗೂ ಬರಹದ ಬಗ್ಗೆ ಯುವ ಸಮುದಾಯ ಆಸಕ್ತಿ ತಳೆಯಬೇಕು. ಕಷ್ಟಗಳ ಸರಮಾಲೆ ಹೊತ್ತು ಬದುಕಿದ ಅವರು, ಕೊನೆ ವರೆಗೆ ಸಮಾಜದ ಒಳಿತನ್ನೇ ಬಯಸಿದರು. ತಾವು ನಂಬಿದ ತತ್ವಕ್ಕೆ ಬದ್ಧರಾಗಿ ನಡೆದುಕೊಂಡರು. ಜಗತ್ತಿಗೆ ಒಂದು ಮಾದರಿಯಾಗಿ ಉಳಿದರು ಎಂದು ಹೇಳಿದರು.
ಮುಖಂಡರಾದ ಎಂ.ಜಿ.ಶಂಕರಪ್ಪ, ರಾಮಪ್ಪ, ಬಿ.ವಿ.ನಾಗರಾಜ್, ಚಂದ್ರಪ್ಪ, ಬಿ.ಕೆ.ನರಸಿಂಹಪ್ಪ, ಶಿವಣ್ಣ, ಭರತ್ ಮತ್ತಿತರರು ಇದ್ದರು.