ಕೋಲಾರ:- ಸತತ ಏಳು ಬಾರಿ ಸಂಸದನನ್ನಾಗಿ ಆಯ್ಕೆ ಮಾಡಿ ನನ್ನ ಬೆನ್ನಿಗೆ ನಿಂತ ಕೋಲಾರ ಜಿಲ್ಲೆಯ ಜನರ ಇಷ್ಟಾರ್ಥಗಳನ್ನು ರೇಣುಕಾ ಯಲ್ಲಮ್ಮ ತಾಯಿ ನೆರವೇರಿಸಲು ನನಗೆ ರಾಜಕೀಯ ಜನ್ಮ ನೀಡಿದ ಜಿಲ್ಲೆಯಲ್ಲಿ ಉತ್ತಮ ಮಳೆ,ಬೆಳೆಯಾಗಿ ಸಮೃದ್ದಿ ನೆಲಸಲಿ ಎಂದು ರಾಜ್ಯ ಆಹಾರ ಸಚಿವ ಕೆ.ಎಚ್.ಮುನಿಯಪ್ಪ ಪ್ರಾರ್ಥಿಸಿದರು.
ನಗರದ ಪಿಸಿ ಬಡಾವಣೆಯ ರೇಣುಕಾಯಲ್ಲಮ್ಮ ಹೂವಿನ ಕರಗಮಹೋತ್ಸವದ ಹಿನ್ನಲೆಯಲ್ಲಿ ಗುರುವಾರ ಸಂಜೆ ಪ್ರತಿವರ್ಷದಂತೆ ಈ ಬಾರಿಯೂ ದೇವಾಲಯಕ್ಕೆ ಆಗಮಿಸಿ ಪೂಜೆ ಸಲ್ಲಿಸಿದ ನಂತರ ಅವರು ಮಾಧ್ಯಮದೊಂದಿಗೆ ಮಾತನಾಡುತ್ತಿದ್ದರು.
ಕೋಲಾರದಲ್ಲಿ ರೇಣುಕಾ ಯಲ್ಲಮ್ಮ ದೇವಿ ಕರಗ ಹೆಚ್ಚಿನ ಮನ್ನಣೆ ಗಳಿಸಿದೆ, ಈ ತಾಯಿಗೆ ಶಕ್ತಿ ಇದ್ದು, ಈ ಮಾತೆ ಜಿಲ್ಲೆಯನ್ನು ಚೆನ್ನಾಗಿ ಮುನ್ನಡೆಸುತ್ತಾಳೆ, ಆ ತಾಯಿಯ ಕೃಪೆ ಜಿಲ್ಲೆಗೆ ಇರಬೇಕು ಎಂದರು.
ಕೋಲಾರ ಜಿಲ್ಲೆಯ ಜನತೆ ನನ್ನನ್ನ ಏಳು ಬಾರಿ ಸಂಸದರನ್ನಾಗಿ ಆಯ್ಕೆ ಮಾಡಿದ್ದು, ಮತದಾರ ಬಂಧುಗಳನ್ನು ಪ್ರಾಣ ಇರುವ ತನಕ ನಾನು ಮರೆಯುವುದಿಲ್ಲ ನಾನು ಎಲ್ಲೇ ಇರಲಿ ಕೋಲಾರ ಜಿಲ್ಲೆಯ ಕಾರ್ಯಕರ್ತರನ್ನು ಮರೆಯುವುದಿಲ್ಲ ಯಾವುದೇ ರೀತಿಯ ಕಷ್ಟಗಳು ಇದ್ದರೂ ಕೂಡ ನನಗೆ ಕರೆ ಮಾಡಿ ನಾನು ಸ್ಪಂದಿಸುತ್ತೇನೆ ಎಂದು ಭರವಸೆ ನೀಡಿದರು.
ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಬಂದ ಮೇಲೆ ಅಭಿವೃದ್ಧಿ ಕೆಲಸಗಳು ನಡೆಯುತ್ತಿವೆ ಬಡವರಿಗಾಗಿ ಅನೇಕ ಯೋಜನೆಗಳನ್ನು ತಂದಿದ್ದೇವೆ ಅವುಗಳನ್ನು ಸದುಪಯೋಗ ಪಡಿಸಿಕೊಂಡು ಆರ್ಥಿಕತೆಯಲ್ಲಿ ಮುಂದೆ ಬರಬೇಕು ಜಿಲ್ಲೆಯಲ್ಲಿರುವ ಕಾಂಗ್ರೆಸ್ ಕಾರ್ಯಕರ್ತರು ಪಕ್ಷ ಸಂಘಟನೆಯಲ್ಲಿ ತೊಡಗಿಕೊಂಡು ಪಕ್ಷವನ್ನು ಅಧಿಕಾರಕ್ಕೆ ತಂದರೆ ಪಕ್ಷದಲ್ಲಿ ಮುಂದೆ ನಿಮಗೂ ಸಹ ಅಧಿಕಾರ ಸಿಗುತ್ತದೆ ಎಂದರು.
ಜನತೆ ಇಂತಹ ದೇವರ ಕಾರ್ಯಗಳಲ್ಲಿ ಪಾಲ್ಗೊಳ್ಳುವುದರಿಂದ ಉತ್ತಮ ಸೌಹಾರ್ದತೆಯ ವಾತಾವರಣ ನೆಲಸಲು ಸಾಧ್ಯವಾಗುತ್ತದೆ ಎಂದ ಅವರು, ಕೋಲಾರ ಜಿಲ್ಲೆಯ ಜನತೆಯ ಋಣ ತೀರಿಸಲು ಸದಾ ಸಿದ್ದವಾಗಿರುವೆ ಎಂದರು.
ರೇಣುಕಾ ಯಲ್ಲಮ್ಮ ದೇವಿಯ ಆಶೀರ್ವಾದದಿಂದ ರಾಜ್ಯದಲ್ಲಿ ಉತ್ತಮ ಮಳೆ ಮತ್ತು ಬೆಳೆ ಹಾಗೂ ರೈತರಿಗೆ ಉತ್ತಮ ಆರೋಗ್ಯವನ್ನು ಕೊಟ್ಟು ಕಾಪಾಡಲಿ ಎಂದು ತಾಯಿಯಲ್ಲಿ ಬೇಡಿಕೊಳ್ಳುತ್ತಿದ್ದೇನೆ ಎಂದು ತಿಳಿಸಿದರು.
ಇದಕ್ಕೂ ಮೊದಲು ನಗರದ ಅಂಬೇಡ್ಕರ್ ನಗರದಲ್ಲಿ ನಡೆಯುತ್ತಿರುವ ಹೂವಿನ ಕರಗಮಹೋತ್ಸವದಲ್ಲೂ ಪಾಲ್ಗೊಂಡಿದ್ದ ಅವರು, ನಂತರ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಪ್ರಸಾದ್ ಬಾಬು, ಎಸ್ಸಿಘಟಕದ ಜಿಲ್ಲಾಧ್ಯಕ್ಷ ಜಯದೇವ್ ನಿವಾಸಕ್ಕೂ ಹೋಗಿ ಬಂದರು.
ಈ ಸಂದರ್ಭದಲ್ಲಿ ಕಾಂಗ್ರೆಸ್ ಜಿಲ್ಲಾ ಉಪಾಧ್ಯಕ್ಷ ಎಲ್.ಎ.ಮಂಜುನಾಥ್, ಕಾರ್ಯಾಧ್ಯಕ್ಷ ಊರುಬಾಗಿಲು ಶ್ರೀನಿವಾಸ್, ಕಾಂಗ್ರೆಸ್ ಎಸ್ಸಿಘಟಕದ ಅಧ್ಯಕ್ಷ ಕೆ.ಜಯದೇವ್, ಬ್ಲಾಕ್ ಅಧ್ಯಕ್ಷ ಪ್ರಸಾದ್ಬಾಬು,ಎಸ್ಟಿ ಘಟಕದ ಅಧ್ಯಕ್ಷ ನಾಗರಾಜ್, ಮುಖಂಡರಾದ ಸೋಮಶೇಖರ್, ಯಲ್ಲಪ್ಪ, ಜಗನ್ನಾಥ್,ಮಾರ್ಜೇನಹಳ್ಳಿ ಬಾಬು, ನಾರಾಯಣಸ್ವಾಮಿ,ಮುನಿರಾಜು, ಹಾರೋಹಳ್ಳಿ ಶ್ರೀನಿವಾಸ್, ಕಾರ್ಗಿಲ್ ವೆಂಕಟೇಶ್, ದೇವಾಲಯ ಸಮಿತಿ ಅಧ್ಯಕ್ಷ ಕೆ.ಗಣೇಶ್, ಉಪಾಧ್ಯಕ್ಷ ಸಂಪತ್ಕುಮಾರ್, ಖಜಾಂಚಿ ಮಂಜುನಾಥ್, ನಿರ್ದೇಶಕರಾದ ರಮೇಶ್, ಕೆ.ಆರ್ಮುಗಂ, ಕಿಲಾರಿಪೇಟೆ ಮುನಿಕೃಷ್ಣ, ಶಬರಿ, ಅರ್ಚಕರಾದ ಸುರೇಶಾಚಾರ್ಯ ಮತ್ತಿತರರಿದ್ದರು.