“ದೇಶ ಪ್ರೇಮ ನಮ್ಮ ಹೃದಯದಿಂದಲೇ ಸ್ಪುರಿಸಬೇಕು”


ಇಂದಿನ ಸಾಮಾಜಿಕ ವ್ಯವಸ್ಥೆಯಲ್ಲಿ “ದೇಶ ಪ್ರೇಮ”ದ ಸ್ಫೂರ್ತಿ ಕಡಿಮೆಯಾಗುತ್ತಾ ಬರುತ್ತಿದೆಯೋ ಎಂಬ ಕಾಳಜಿ ಸಹಜವಾದರೂ ಆಸಕ್ತ ಪ್ರಜೆಗಳು ತಮ್ಮ ವೃತ್ತಿ ಪ್ರವೃತ್ತಿಯಲ್ಲಿ ನಿಷ್ಠೆ, ಪ್ರಾಮಾಣಿಕತೆ ತೋರಿ ಇತರರಿಗೆ ಮಾದರಿಯಾದರೆ ಸಹಜವಾಗಿ ಅವರಿಂದ ಪ್ರೇರಣೆ ಪಡೆದವರು “ದೇಶ ಪ್ರೇಮಿ”ಗಳಾಗುತ್ತಾರೆ. ನಮ್ಮ ದೇಶದ ಸಂಸ್ಕøತಿ, ಕೌಶಲ್ಯಗಳನ್ನು ನಾಶ ಮಾಡಲು ತುಂಬ ಆಕ್ರಮಣಕಾರರು ಪ್ರಯತ್ನ ಪಟ್ಟರೂ ಆಗಲಿಲ್ಲ. ಅಲೆಕ್ಸಾಂಡರ್ ಕಥೆ ಅದಕ್ಕೆ ತಕ್ಕ ಉದಾಹರಣೆ. ಆದರೆ ನಮ್ಮ ಆಡಳಿತ ವ್ಯವಸ್ಥೆ ಆಕ್ರಮಣಗಾರರನ್ನು ಪರಿಚಯಿಸಿದಷ್ಟು ನಮ್ಮ ದೇಶಕ್ಕಾಗಿ ಹೋರಾಡಿದವರನ್ನು ಮಕ್ಕಳಿಗೆ ಪರಿಚಯಿಸಲಿಲ್ಲ. ನಮ್ಮದೇ ಪರಿಸರದ ಸ್ವಾತಂತ್ರ್ಯ ಹೋರಾಟಗಾರರ ಬಗ್ಗೆ ನಮಗೆ ತಿಳಿದಿಲ್ಲ. ದೇಶ ಪ್ರೇಮ ನಮ್ಮ ಹೃದಯದಿಂದಲೇ ಸ್ಪುರಿಸಬೇಕೇ ಹೊರತು ಯಾರ ಒತ್ತಡದಿಂದಲ್ಲ. ಎಂದು ಸ್ವರಾಜ್ಯ 75 ಸಂಘಟನೆಯ ಸ್ಥಾಪಕ ಪ್ರದೀಪ್ ಪೂಜಾರಿ ಬಸ್ರೂರು ಹೇಳಿದರು.
ರೋಟರಿ ಕುಂದಾಪುರ ದಕ್ಷಿಣ ಏರ್ಪಡಿಸಿದ “ದೇಶ ಪ್ರೇಮ” ಕಾರ್ಯಕ್ರಮದಲ್ಲಿ ಮುಖ್ಯ ಉಪನ್ಯಾಸಕರಾಗಿ ಅವರು ಮಾತನಾಡುತ್ತಿದ್ದರು.
ನಮ್ಮ ಜಿಲ್ಲೆಯಲ್ಲಿ ನೂರಾರು ಮಂದಿ ಸ್ವಾತಂತ್ರ್ಯ ಹೋರಾಟಗಾರರಿದ್ದು 56 ಸ್ವಾತಂತ್ರ್ಯ ಹೋರಾಟಗಾರರ ಮನೆಗೆ ಭೇಟಿ ನೀಡಿದ್ದೇವೆ. 24 ಮನೆಗಳಿಗೆ “ಸ್ವಾತಂತ್ರ್ಯ ಹೋರಾಟಗಾರರ ಮನೆ” ಎಂದು ನಾಮ ಫಲಕ ಹಾಕಿದ್ದೇವೆ. ಆದರೆ ನಾವು ಮಾಡಿದ ಶೋಧನೆ, ವಿಷಯ ಸಂಗ್ರಹ, ಶ್ರಮಕ್ಕೆ ನಿರೀಕ್ಷಿತ ಬೆಂಬಲ ಸಂಬಂಧಪಟ್ಟವರಿಂದ ಸಿಗದಿರುವುದು ಬೇಸರವೆನಿಸುತ್ತದೆ” ಎಂದು ಅವರು ಹೇಳಿದರು.
ರೋಟರಿ ಕುಂದಾಪುರ ದಕ್ಷಿಣದ ವತಿಯಿಂದ ರೋಟರಿ ಮಾಜಿ ಜಿಲ್ಲಾ ಗವರ್ನರ್ ಎಸ್. ಸದಾನಂದ ಚಾತ್ರ ಅವರು ಪ್ರದೀಪ್ ಪೂಜಾರಿ ಬಸ್ರೂರು ಅವರನ್ನು ಗೌರವಿಸಿದರು.
ರೋಟರಿ ಕುಂದಾಪುರ ದಕ್ಷಿಣದ ಅಧ್ಯಕ್ಷ ಸತ್ಯನಾರಾಯಣ ಪುರಾಣಿಕ್ ಅಧ್ಯಕ್ಷತೆ ವಹಿಸಿದ್ದರು. ಯು.ಎಸ್.ಶೆಣೈ ಅತಿಥಿಯನ್ನು ಪರಿಚಯಿಸಿದರು. ಡಾ. ವಿಶ್ವೇಶ್ವರ, ಕೆ.ಪಿ.ಭಟ್, ಶ್ರೀಮತಿ ಶೋಭಾ ಭಟ್, ಮಹೇಂದ್ರ ಶೆಟ್ಟಿ ವಿಚಾರ ವಿನಿಮಯದಲ್ಲಿ ಪಾಲ್ಗೊಂಡರು. ಕಾರ್ಯದರ್ಶಿ ಸಚಿನ್ ನಕ್ಕತ್ತಾಯ ಸ್ವಾಗತಿಸಿದರು. ಡಾ| ಉತ್ತಮ ಕುಮಾರ್ ಶೆಟ್ಟಿ ವಂದಿಸಿದರು.