

ಹೊನ್ನಾವರ: ಉತ್ತರಕನ್ನಡಜಿಲ್ಲೆ ಹೊನ್ನಾವರದ ಬಂದರುರಸ್ತೆಯ ಭಗತ್ ಸಿಂಗ್ ಸಂಘ ಆಗಸ್ಟ್ 15ರಂದು ಏರ್ಪಡಿಸಿದ್ದ 77ನೇ ಸ್ವಾತಂತ್ರ್ಯ ದಿನಾಚರಣೆ ಕಾರ್ಯಕ್ರಮದಲ್ಲಿ ಹಿರಿಯ ಪತ್ರಕರ್ತ ಹಾಗೂ ಲೇಖಕ ವಿಶ್ವ ಕುಂದಾಪುರ ಇವರನ್ನು ಸನ್ಮಾನಿಸಲಾಯಿತು.
ಭೂಪಟ ಮತ್ತು ಬಾವುಟದ ಆರಾಧನೆಯಷ್ಟೇ ದೇಶಪ್ರೇಮವಲ್ಲ. ಜನರ ಸಂಕಷ್ಟ ನಿವಾರಣೆಗೆ ದುಡಿಯುವುದು, ಅಂಥ ಕಾರ್ಯಕ್ರಮಗಳನ್ನು ಜಾರಿಗೊಳಿಸುವುದೇ ನಿಜವಾದ ರಾಷ್ಟ್ರ ಪ್ರೇಮಎಂದು ಮುಖ್ಯ ಅತಿಥಿಯಾಗಿ ಮಾತನಾಡಿದ ವಿಶ್ವ ಕುಂದಾಪುರ ಹೇಳಿದರು. ಜಾತಿ-ದೇವರು-ಧರ್ಮದ ಹೆಸರಿನಲ್ಲಿ ಜನರ ನಡುವೆ ದ್ವೇಷಾಗ್ನಿ ಹಚ್ಚುವ ಶಕ್ತಿಗಳ ಬಗ್ಗೆ ಎಚ್ಚರದಿಂದಿರುವುದು ಅಗತ್ಯಎಂದರು.
ಸ್ವಾತಂತ್ರ್ಯ ಹೋರಾಟದಲ್ಲಿ ವಿದ್ಯಾರ್ಥಿಗಳು ಹಾಗೂ ಎಳೆಯ ಚೇತನಗಳು ವಹಿಸಿದ್ದ ಪಾತ್ರವನ್ನು ಸ್ಮರಿಸುವ ವಿಶ್ವ ಕುಂದಾಪುರ ರಚಿತ ಹಾಡನ್ನು ಭಗತ್ ಸಿಂಗ್ ಸಂಘದ ಮುಖ್ಯಸ್ಥ ನಿತ್ಯಾನಂದ ಪಾಲೇಕರ್ ಹಾಗೂ ಮಂಜುನಾಥ ನಾಯ್ಕ ಹಾಡಿ ಸಭಿಕರನ್ನು ಮುದಗೊಳಿಸಿದರು. ಶ್ರೀ ಯದುವೀರ ಸೌಹಾರ್ದ ಸಹಕಾರಿ ಸಂಘದ ಅಧ್ಯಕ್ಷ ಶ್ರೀಕಾಂತ ನಾಯ್ಕ ಧ್ವಜಾರೋಹಣ ನೆರವೇರಿಸಿದರು. ಸಾಮಾಜಿಕ ಹೋರಾಟಗಾರ ಉಮೇಶ್ ಮೇಸ್ತ ಅತಿಥಿಯಾಗಿದ್ದರು. ಹೊನ್ನಾವರ ಪಟ್ಟಣ ಪಂಚಾಯತಿ ಮಾಜಿ ಸದಸ್ಯೆ ಜಮೀಲಾ ಶೇಖ್, ನವೀನ್ ಮೇಸ್ತ, ವಿನಾಯಕ್, ಆಫಾನ್ ಮುಲ್ಲಾ, ಗಣಪತಿ ನಾಯ್ಕ್, ರಾಜೇಶ್ವರ ಪಾಲೇಕರ್ ಮೊದಲಾದವರು ಇದ್ದರು.
ನಾಟಕ ಪ್ರದರ್ಶನ: ಹೊನ್ನಾವರದ ಅರೆಅಂಗಡಿಯಎಸ್.ಎಸ್.ಎಸ್.ಕೆ.ಪಿ. ಇಂಗ್ಲಿಷ್ ಮಾಧ್ಯಮ ಪ್ರೌಢಶಾಲೆಯ ವಿದ್ಯಾರ್ಥಿಗಳು ವಿಶ್ವ ಕುಂದಾಪುರ ರಚಿತ `ನಾವು ಎಳೆಯರು ಸ್ವಾತಂತ್ರ್ಯ ವೀರರು’ ನಾಟಕವನ್ನು ಶಾಲೆಯಲ್ಲಿ ಆಯೋಜಿಸಿದ್ದ 77ನೇ ಸ್ವಾತಂತ್ರ್ಯೋತ್ಸವ ಕಾರ್ಯಕ್ರಮದಲ್ಲಿ ಪ್ರದರ್ಶಿಸಿದರು. ಆರನೇ ತರಗತಿ ಮಕ್ಕಳು ಅಭಿನಯಿಸಿದ ನಾಟಕವನ್ನು ಶಿಕ್ಷಕಿ ದಿವ್ಯಾ ಹೆಗಡೆ ನಿರ್ದೇಶಿಸಿದರು.