ಪಾತೂರು ಗ್ರಾಮ – ಜೀವ ವಿಮೆ ಮಾಡಿಸಲು, ಗ್ರಾಮಕ್ಕೆ ಬಂದ ಅಪರಿಚಿತ ವ್ಯಕ್ತಿಗೆ ಹಣ ನೀಡಿ ಮಹಿಳೆಯರು ಮೋಸಹೋಗಿರುವ ಘಟನೆ

ಶ್ರೀನಿವಾಸಪುರ: ತಾಲ್ಲೂಕಿನ ಪಾತೂರು ಗ್ರಾಮದ ಮಹಿಳೆಯರು ಜೀವ ವಿಮೆ ಮಾಡಿಸಲು, ಗ್ರಾಮಕ್ಕೆ ಬಂದ ಅಪರಿಚಿತ ವ್ಯಕ್ತಿಗೆ ಹಣ ನೀಡಿ ಮೋಸಹೋಗಿರುವ ಘಟನೆ ನಡೆದಿದೆ.
ಅ.11 ರಂದು ಗ್ರಾಮಕ್ಕೆ ಬಂದ ಅಪರಿಚಿತ ವ್ಯಕ್ತಿಯೊಬ್ಬ ತಾನು ತಮಿಳುನಾಡಿನ ಶಿವಗುಣ, ಚಿಂತಾಮಣಿಯಲ್ಲಿ ಟಿಎಂಎಫ್ ಫೈನಾನ್ಸ್ ಎಂಬ ಸಂಸ್ಥೆ ನಡೆಸುತ್ತಿದ್ದೇನೆ. ಟಿಎಂಎಫ್ ಮೂಲಕ ಜೀವ ವಿಮೆ ಮಾಡಿಸುತ್ತೇನೆ. 10 ಮಂದಿ ಮಹಿಳೆಯರು ಗುಂಪಾಗಿ ರೂ.1 ಲಕ್ಷ ಜೀವ ವಿಮೆ ಪಡೆಯಲು ತಲಾ ರೂ.2600 ಹಾಗೂ ರೂ.50 ಸಾವಿರ ಜೀವ ವಿಮೆ ಪಡೆಯಲು ರೂ.1300 ಕಟ್ಟಬೇಕು ಎಂದು ಹೇಳಿದ. ಅಪರಿಚಿತನ ಮಾತನ್ನು ನಂಬಿ 10 ಮಂದಿ ಮಹಿಳೆಯರು ತಲಾ ರೂ.1300 ನೀಡಿದೆವು ಎಂದು ಮೋಸಹೋದ ಮಹಿಳೆಯರ ಪರವಾಗಿ ಚಂದ್ರಕಳಾ ಎಂಬುವವರು ಗೌನಿಪಲ್ಲಿ ಪೊಲೀಸರಿಗೆ ನೀಡಿರುವ ದೂರಿನಲ್ಲಿ ತಿಳಿಸಿದ್ದಾರೆ.
ಅ.13 ರಂದು ಚಿಂತಾಮಣಿಯ ಟಿಎಂಎಫ್ ಸಂಸ್ಥೆಗೆ ಬರುವಂತೆ ಹೇಳಿ, ಮೊಬೈಲ್ ನಂಬರ್ ನೀಡಿ ಹೋದ. ಅವನು ಹೇಳಿದಂತೆ ಅ.13 ರಂದು ಚಿಂತಾಮಣಿಗೆ ಹೋಗಿ ವಿಚಾರಿಸಿದಾಗ, ಆ ಹೆಸರಿನ ಯಾವುದೇ ಸಂಸ್ಥೆ ಇಲ್ಲವೆಂಬ ವಿಚಾರ ತಿಳಿಯಿತು. ಅವನು ನೀಡಿದ್ದ ಮೊಬೈಲ್ ನಂಬರ್‍ಗೆ ಕರೆ ಮಾಡಿದಾಗ ಫೋನ್ ಸ್ವಿಚ್ ಆಫ್ ಆಗಿತ್ತು ಎಂದು ದೂರಿನಲ್ಲಿ ವಿವರಿಸಿದ್ದಾರೆ.