ಪರಿವರ್ತನಾ ಪರ್ವ ಮಾಸ ಪತ್ರಿಕೆ ಬಿಡುಗಡೆ ಜನರಿಂದ ದೂರವಾಗುತ್ತಿರುವ ಮಾಧ್ಯಮಗಳು-ಮೋಹನ್ ವಿಷಾದ

ವರದಿ: ಶಬ್ಬೀರ್ ಅಹಮ್ಮದ್, ಶ್ರೀನಿವಾಸಪುರ

ಕೋಲಾರ:- ಜನಸಾಮಾನ್ಯರ ಧ್ವನಿಯಾಗಬೇಕಾಗಿದ್ದ ಪತ್ರಿಕೆಗಳು ಜನರಿಂದಲೇ ದೂರವಾಗುತ್ತಿವೆಯೆಂದು ಹಿರಿಯ ಪತ್ರಕರ್ತ ಜಿ.ಎನ್.ಮೋಹನ್ ವಿಷಾದಿಸಿದರು.
ನಗರದ ಪತ್ರಕರ್ತರ ಭವನದಲ್ಲಿ ಪರಿವರ್ತನಾ ಪರ್ವ ಪತ್ರಿಕೆಯನ್ನು ಬಿಡುಗಡೆಗೊಳಿಸಿ ಮಾತನಾಡಿದ ಅವರು, ಮಾಧ್ಯಮಗಳು ಜನರಿಗೆ ಬೇಕಾದುದಲ್ಲ ಎಂಬ ಭಾವನೆ ಹುಟ್ಟಿಸುತ್ತಿವೆ, ಇಂತ ಸಂದರ್ಭದಲ್ಲಿ ಮಾಧ್ಯಮಗಳು ಮಾತನಾಡದ್ದನ್ನು ಮಾತನಾಡುವ ಪರ್ಯಾಯ ಮಾಧ್ಯಗಳು ಬೇಕಾಗಿವೆಯೆಂದರು.
ಅಮಿತ್‍ಷಾ ಪಾಲ್ಗೊಂಡಿದ್ದ ಕಾರ್ಯಕ್ರಮದಲ್ಲಿ ಕನ್ನಡವನ್ನು ನಿರ್ಲಕ್ಷಿಸಲಾಗಿತ್ತು, ಆದರೆ, ಯಾವ ಮಾಧ್ಯಮವೂ ಇದನ್ನು ಪ್ರಶ್ನಿಸಲಿಲ್ಲ, ಸಾಮಾಜಿಕ ಜಾಲ ತಾಣದ ಮೂಲಕವೇ ಇದನ್ನು ಜನರು ಪ್ರಶ್ನೆ ಮಾಡಿದ್ದು ಪರ್ಯಾಯ ಮಾಧ್ಯಮದ ಶಕ್ತಿಯಾಗಿತ್ತು ಎಂದರು.
ಸಮಾಜದಲ್ಲಿ ಪ್ರಶ್ನೆ ಮಾಡುವುದನ್ನೇ ತಪ್ಪು ಎಂಬು ಬಿಂಬಿಸುವ ಹುನ್ನಾರ ನಡೆಯುತ್ತಿದೆ, ಪ್ರಶ್ನೆ ಮಾಡದಿದ್ದರೆ ನಮಗೆ ನಾವೇ ಮೋಸ ಮಾಡಿಕೊಂಡಂತೆ, ಏಕೆಂದರೆ, ಸುಳ್ಳುಗಳನ್ನೇ ಸತ್ಯವೆಂದು ಬಿಂಬಿಸುವ ಕೆಲಸ ಮಾಧ್ಯಮಗಳಿಂದ ಆಗುತ್ತಿದೆ, ದೆಹಲಿ ರೈತರ ಹೋರಾಟ ಮಾಧ್ಯಮಗಳಲ್ಲಿ ಬಾರದಿರುವುದೇ ಇದಕ್ಕೆ ಸಾಕ್ಷಿಯಾಗಿದೆಯೆಂದರು.
ಪ್ರಜಾಪ್ರಭುತ್ವದ ರಕ್ಷಣೆಗೆ ಮಾಧ್ಯಮ ಬೇಕು ಆದರೆ, ಮಾಧ್ಯಮದೊಳಗೆ ಪ್ರಜಾಪ್ರಭುತ್ವವನ್ನು ರಕ್ಷಿಸುವವರು ಯಾರು ಎಂದು ಮಾರ್ಮಿಕವಾಗಿ ಪ್ರಶ್ನಿಸಿದ ಅವರು, ಮಾಧ್ಯಮದ ಗದ್ದಲದ ಸಂತೆಯಲ್ಲಿ ಗಾಡಾಂಧಕಾರದ ಪುಟ್ಟ ಹಣತೆಯಂತೆ ಸಣ್ಣ ಪತ್ರಿಕೆಗಳು ಕೆಲಸ ಮಾಡಬೇಕಾಗಿದೆ. ಪರಿವರ್ತನೆ ದಾರಿದೀಪವಾಗಲಿ, ಮಾಧ್ಯಮ ಪ್ರವೇಶಿಸುವವರು ನಿತ್ಯ ವಿದ್ಯಾರ್ಥಿಗಳಾಗಿ ಕಲಿಯುತ್ತಿರಬೇಕೆಂದರು.
ಕರ್ನಾಟಕ ಜಾನಪದ ವಿಶ್ವವಿದ್ಯಾಲಯದ ಅಧ್ಯಾಪಕ ಡಾ.ಮಲ್ಲಿಕಾರ್ಜುನ ಬಿ.ಮಾನ್ಪಡೆ ಮಾತನಾಡಿ, ಪತ್ರಿಕೆಗಳು ಸೈದ್ದಾಂತಿಕ ಜಾಗೃತಿ ಮೂಡಿಸುವಂತಿರಬೇಕು ಆದರೆ, ಇತ್ತೀಚಿಗೆ ಆಡಳಿತದಲ್ಲಿರುವವರ ಓಲೈಕೆಗೆ ಒತ್ತು ನೀಡುತ್ತಿವೆ, ಈ ಕೆಟ್ಟ ವ್ಯವಸ್ಥೆಯನ್ನು ಸರಿಪಡಿಸುವ ಸರಿ ತಪ್ಪು ತಿಳಿಸುವ ಧ್ಯೇಯ ಪರಿವರ್ತನಾ ಪರ್ವದಾಗಲಿ ಎಂದರು.
ಕೋಲಾರ ಚಿಕ್ಕಬಳ್ಳಾಪುರ ಪತ್ರಕರ್ತರ ವಿವಿಧೋದ್ದೇಶ ಸಹಕಾರ ಸಂಘದ ಅಧ್ಯಕ್ಷ ಕೆ.ಎಸ್.ಗಣೇಶ್ ಅಧ್ಯಕ್ಷತೆವಹಿಸಿದ್ದರು, ಕೋಲಾರ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ವಿ.ಮುನಿರಾಜು, ಸಹಾಯಕ ಪ್ರಾಧ್ಯಾಪಕಿ ಡಾ.ಎಚ್.ಎನ್.ಪುಷ್ಪಲತಾ, ಕಸಾಪ ನಿಕಟಪೂರ್ವ ಅಧ್ಯಕ್ಷ ಜೆ.ಜಿ.ನಾಗರಾಜ್, ಪತ್ರಿಕೆಯ ಗೌರವ ಸಂಪಾದಕ ಛತ್ರಕೋಡಿಹಳ್ಳಿ ಸುರೇಶ್, ಕಾಂಗ್ರೆಸ್ ಮುಖಂಡ ಬೆಳಮಾರನಹಳ್ಳಿ ಮುನಿವೆಂಕಟಪ್ಪ, ಪತ್ರಿಕೆ ಸಂಪಾದಕ ವಿ.ರಾಜೇಂದ್ರ ಇತರರು ಉಪಸ್ಥಿತರಿದ್ದರು.
ಕೋಟಿಗಾನಹಳ್ಳಿ ಎಂ.ಗೌತಮಿ ನಿರೂಪಿಸಿ, ನಂಬಿಗಾನಹಳ್ಳಿ ನಾರಾಯಣಸ್ವಾಮಿ ಸ್ವಾಗತಿಸಿ, ಸುನಿಲ್‍ಕುಮಾರ್ ಮುಳ್ಳಹಳ್ಳಿ ವಂದಿಸಿದರು.