✍🏻 ವಿತೊರಿ ಕಾರ್ಕಳ
“ಈ ಸಲ ಬಾರದಿದ್ದರೆ ನೋಡು ಏನಾಗ್ತದೆ ನಿನ್ನ ಗತಿ’’ ಅಂತ ಬೆದರಿಕೆ ಹಾಕಿ ಕಾರ್ಯಕ್ರಮಕ್ಕೆ ಕರೆಸಿಕೊಳ್ಳುವ, ತಾನು ವಾಚಾಳಿ ಎನ್ನುತ್ತಲೇ, ತೂಕದ ವಾಚ್ಯ ಉಪಯೋಗಿಸಿ ಸುಂದರ ನಿರೂಪಣೆ ಮಾಡುವ ಕಾರ್ಯದರ್ಶಿ, ಕಳೆದ ಸಹಸ್ರಮಾನದ ಕೊನೆಯ ಶತಮಾನದ ದ್ವೀತೀಯಾರ್ಧದ ಜನಜೀವನವನ್ನ, ರೇಡಿಯೋದ ಗೊರಗೊರ ಸದ್ದಿನೊಡನೆ, ಚಿಮಣಿ ಬೆಳಕಲ್ಲಿ ಸಣ್ಣ ಮಕ್ಕಳಂತೆ ವೇದಿಕೆಯಲ್ಲಿ ಮಲಗಿ ಪ್ರಸ್ತುತ ಪಡಿಸುವ ಕಾಲೇಜು ಪ್ರಾಂಶುಪಾಲ – ಈ ಸಂಸ್ಥೆಯ ಆಡಳಿತ ಮಂಡಳಿ ವಿಶ್ವಸ್ಥ, ಸುಮಧುರವಾಗಿ ಹಾಡಿ ಮನರಂಜಿಸುವ ಅಧ್ಯಕ್ಷ, ಎಲ್ಲರನ್ನೂ ಆತ್ಮೀಯವಾಗಿ ಬರಮಾಡಿಕೊಳ್ಳುವ ವಿಶ್ವ ವಿಖ್ಯಾತ ಕಲಾವಿದ, ಕಾಲೇಜಿನ ಮುಖ್ಯಸ್ಥೆ, ಚಾರ್ಟರ್ಡ್ ಎಕೌಂಟೆಂಟ್ ಹೀಗೆ ವಿವಿಧ ಉನ್ನತ ಹುದ್ದೆಗಳನ್ನು ನಿರ್ವಹಿಸುತ್ತಿರುವ, ನಿವೃತ್ತಿಯ ನಂತರ ಈ ಸಂಸ್ಥೆಗೆ ತಮ್ಮ ಸಮಯ, ಹಣ ಮತ್ತು ಆಸಕ್ತಿಯಿಟ್ಟು ದುಡಿಯುತ್ತಿರುವ ಹತ್ತಿಪ್ಪತ್ತು ಜನ, ಒಂದು ಸುಂದರ ಸಂಜೆಗೆ ಸಾಕ್ಷಿಯಾಗಲು ಊರು ಪರವೂರಿನಿಂದ ಆಗಮಿಸಿದ ರಂಗಕರ್ಮಿಗಳು, ಸಾಹಿತಿಗಳು ಹಾಗೂ ಕಲಾಭಿಮಾನಿಗಳು ಸೇರಿ ಜನವರಿ 22 ರ ಆ ಸಂಜೆ ರಂಗೇರಿತು. ಇದು ಉಡುಪಿ ಜಿಲ್ಲೆಯ ಬೆಳ್ಳೆ ತಾಲೂಕಿನ ಪಾಂಬೂರು ಎಂಬ ಹಳ್ಳಿಯಲ್ಲಿದ್ದೂ, ನಾಡಿನ¬ ರಂಗಪಥದಲ್ಲಿ ತನ್ನದೇ ಛಾಪು ಮೂಡಿಸಿರುವ ಪರಿಚಯ ಪ್ರತಿಷ್ಟಾನದ ಸಂಸ್ಥಾಪನಾ ದಿನಾಚರಣೆ ಸಂದರ್ಭ ಕಂಡು ಬಂದ ದೃಶ್ಯ.
ಪರಿಚಯದ ಆಶಯ ಗೀತೆಯೊಡನೆ ಕಾರ್ಯಕ್ರಮ ಶುರು. ಸಶಕ್ತ ಸ್ವಾಗತ, ಉಸ್ತಾದ್ ರಫಿಕ್ ಖಾನ್ ರವರ ಮುಖ್ಯ ಅತಿಥಿ ಭಾಷಣ, ಅವರಿಗೆ ಸನ್ಮಾನ, ಅಲ್ಲಿಗೆ ಸಭಾ ಕಾರ್ಯಕ್ರಮ ಮುಕ್ತಾಯ. ಮತ್ತೆ ಕೆಲ ಸಾಧಕರನ್ನು ಗುರುತಿಸಿ ಅವರಿಗೆ ಮಲ್ಲಿಗೆ ಹೂವಿನ ಗೌರವ. ನಂತರ ವಿಶ್ವಸ್ಥ ಮಂಡಳಿ ಸದಸ್ಯರಿಂದ ಕಿರು ಪ್ರಹಸನ, ಹಾಡುಗಳು ಹಾಗೂ ಮೇಲೆ ಹೇಳಿದ ಕಾಲದ ಹಿಮ್ಮುಖ ಚಲನೆಯ ಪ್ರಸ್ತುತಿ ಮಾಡಿ ಹಿರಿಯರಿಗೆ ನಾಸ್ಟಾಲ್ಜಿಕ್ ಅನುಭೂತಿ, ಕಿರಿಯರಿಗೆ ವಾಕ್-ದೃಶ್ಯದ ಅನುಭವ ನೀಡಿದರು. ಹೌಸಿ ಹೌಸಿಯೂ ನಡೆಯಿತು. ರುಚಿಕಟ್ಟಾದ ಊಟದ ವ್ಯವಸ್ಥೆಯೂ ಇತ್ತು. ಟ್ರಸ್ಟಿಗಳು ಅತ್ತಿಂದಿತ್ತ ಓಡಾಡುತ್ತಾ ಅತಿಥಿ ಸತ್ಕಾರ ಮಾಡುತ್ತಿದ್ದರು.
ಪಾಂಬೂರು ಹೆಸರಲ್ಲಿರುವ ಪಾಂಬು ಎಂದರೆ ಹಾವು. ಪಾಂಬು/ಪಾಮು ಎಂದರೆ ತುಳು, ಮಲಯಾಳಂ, ತಮಿಳು ಮತ್ತು ತೆಲುಗು ಭಾಷೆಗಳಲ್ಲಿ ಹಾವಿಗೆ ಪರ್ಯಾಯ ಶಬ್ದ. ಈ ಊರು ತುಂಬಾ ಹಳೆಯದಂತೆ. ಒಂದಾನೊಂದು ಕಾಲದಲ್ಲಿ ಈ ಊರು ಹರಿಯುವ ಹಾವುಗಳಿಗೆ ಪ್ರಸಿದ್ಧವಂತೆ. ಇಂದು ಈ ಊರು ಸದಾ ಹೊಸತನ ಹರಿಯುವ, ನಾವೀನ್ಯತೆಯೇ ಚಲನಶೀಲವಾಗಿರುವ, ರಂಗ ಚಟುವಟಿಕೆಗಳಿಗೆ ಹೆಸರಾಗಿರುವ ಪರಿಚಯ ಪಾಂಬೂರು ಇದರ ಆಡುಂಬೊಲ.
ಆಧುನಿಕ ಜೀವನ ಶೈಲಿ ಹಳ್ಳಿಗಳಲ್ಲೂ ಏಕತಾನತೆಗೆ ಮತ್ತು ಖಿನ್ನತೆಗೆ ಜನರನ್ನು ದೂಡುತ್ತಿರುವ ಈ ದುರಿತ ಕಾಲದಲ್ಲಿ ಜೀವಾಳ ಹಾಗೂ ಆಪ್ತ ರಂಗಭೂಮಿಯೇ ಈ ಸಮಸ್ಯೆಗೆ ಮದ್ದರೆಯಬಲ್ಲುದು ಎಂಬುದನ್ನು ಅರಿತು ಸಮಾನ ಮನಸ್ಕ ಕಲಾಸಕ್ತರು ಒಗ್ಗೂಡಿ ರೂಪಿಸಿದ ಸಂಸ್ಥೆಯೆ ಪರಿಚಯ. 2012 ರಲ್ಲಿ ಆರಂಭವಾದ ಕಲೆ, ಸಾಹಿತ್ಯ ಮತ್ತು ಸಾಂಸ್ಕೃತಿಕ ಪ್ರತಿಷ್ಟಾನ ಪರಿಚಯ (ರಿ) ಇಂದು ರಂಗ ವೇದಿಕೆಯ ಮೇಲಣ ನೂತನ ಸಜ್ಜಿಕೆಯಂತೆ ಬೆಳೆದಿದೆ. ಕನ್ನಡ, ಕೊಂಕಣಿ, ತುಳುವಿನೊಡನೆ ಹಲವು ಭಾಷೆಯ, ದೇಶೀಯ ರಂಗ ಪ್ರಕಾರಗಳಿಗೆ ವೇದಿಕೆ ನೀಡಿದೆ. ಜನರಿದ್ದೆಡೆ ಜಗತ್ತಿನ ರಂಗಭೂಮಿ ತರುವ ಸಫಲ ಪ್ರಯತ್ನ ನಡೆಯುತ್ತಿದೆ.
ಮೊದಲಿಗೆ ಪಾಂಬೂರು ಪವಿತ್ರ ಶಿಲುಬೆಯ ಇಗರ್ಜಿ ಅಂಗಳದಲ್ಲಿ ಹಾಗೂ ಕಳೆದ ಎರಡು ವರ್ಷಗಳಿಂದ ಕಾರ್ಯದರ್ಶಿ ಪ್ರಕಾಶ್ ನೊರೊನ್ಹಾ ಇವರ ತಾಯಿ ಮೇರಿ ನೊರೊನ್ಹಾ ಇವರು ದಾನ ಕೊಟ್ಟ ಜಾಗದಲ್ಲಿ, ಕಲಾವಿದ ವಿಲ್ಸನ್ ಕಯ್ಯಾರ್ ರಚನಾತ್ಮಕತೆಯಲ್ಲಿ ನಿರ್ಮಿಸಿದ ಸುಂದರ ಬಯಲು ರಂಗ ಮಂದಿರ ರಂಗ ಪರಿಚಯದಲ್ಲಿ ರಂಗ ಚಟುವಟಿಕೆಗಳು ನಡೆಯುತ್ತಿವೆ. ಶಿಸ್ತು, ಅಚ್ಚುಕಟ್ಟು, ಹೊಸತನ ಮತ್ತು ಸಮಯ ಪರಿಪಾಲನೆಗೆ ಪರಿಚಯದ ಕಾರ್ಯಕ್ರಮಗಳು ಸಾಕ್ಷಿಯಾಗಿವೆ. ಡಾ. ವಿನ್ಸೆಂಟ್ ಆಳ್ವಾ, ಅನಿಲ್ ಡೆಸಾ, ಪ್ರಕಾಶ್ ನೊರೊನ್ಹಾ, ಐವನ್ ಪೀಟರ್ ಒಸ್ಟಾ, ಪುಂಡಲೀಕ ಮರಾಠೆ, ಲೂಕಸ್ ಡಿಸೋಜ, ಎಡ್ವರ್ಡ್ ಮಿನೇಜಸ್, ಫ್ರೆಡ್ರಿಕ್ ಪೀಟರ್ ಸಲ್ಡಾನ್ಹಾ, ಇಗ್ನೇಶಿಯಸ್ ಡಿಸೋಜ, ಜೆನಿತ್ ಆಳ್ವಾ, ಮೇಬಲ್ ಮಿನೇಜಸ್, ಸರಿತಾ ಆಳ್ವಾ, ವೈಲೆಟ್ ಕ್ಯಾಸ್ತೆಲಿನೊ, ರಿಚಾರ್ಡ್ ಸಲ್ಡಾನ್ಹಾ, ಅಪೂರ್ವ ಒಸ್ಟಾ, ಪ್ರಿಯಾಂಕಾ ನೊರೊನ್ಹಾ, ಜಾರ್ಜ್ ಅನಿಲ್ ಡಿಸೋಜ, ವಿಲ್ಸನ್ ಕಯ್ಯಾರ್, ಅರುಳ್ ಡಿಸೋಜ, ಪ್ರದೀಪ್ ಕುಮಾರ್ ಹಾಗೂ ಜೊಸಿಲ್ ನೊರೊನ್ಹಾ ಹೀಗೆ ವಿಶ್ವಸ್ತ ಮಂಡಳಿಯಲ್ಲಿ ಸಮಾಜದ ವಿವಿಧ ಕ್ಷೇತ್ರದಿಂದ ಬಂದ ಘಟಾನುಘಟಿ 21 ಜನ ಆಸಕ್ತರು ಇದ್ದಾರೆ. ರಂಗಾಭಿಮಾನಿಗಳಿಂದ ಹಾಗೂ ತಮ್ಮದೇ ಕೈಯಿಂದ ಹಣ ಹಾಕಿ ಕಾರ್ಯಕ್ರಮಗಳನ್ನು ರೂಪಿಸುತ್ತಾರೆ. ಕಲಾವಿದರಿಗೆ ಬೊಗಸೆ ತುಂಬಾ ಆತಿಥ್ಯ ಹಾಗೂ ಖರ್ಚು ವೆಚ್ಚ ಕೊಡುತ್ತಾರೆ. ಇದೇ ಫೆಬ್ರವರಿ 10 ರಿಂದ 16 ರವರೆಗೆ ಸಂಜೆ 6.30 ಕ್ಕೆ ಈ ಸಾಲಿನ ರಂಗ ಹಬ್ಬ ನಡೆಯಲಿದೆ. ಎಂದಿನಂತೆ ಸರ್ಕಾರ ಹಾಗೂ ಸಂಸ್ಕೃತಿ ಇಲಾಖೆಯದ್ದು ದಿವ್ಯ ನಿರ್ಲಕ್ಷ್ಯ, ದಿವ್ಯ ನಿರ್ಲಿಪ್ತತೆ.
ನಾನು 2022 ರಲ್ಲಿ ಪಾಂಬೂರು ಚರ್ಚ್ ವಠಾರದಲ್ಲಿ, ಪರಿಚಯದವರು ಮಾಂಡ್ ಸೊಭಾಣ್ ಗುರಿಕಾರ ಎರಿಕ್ ಒಝೇರಿಯೊ ಗೌರವಾರ್ಥ ಆಯೋಜಿಸಿದ `ಏಕ್ ಸಂಗೀತ್ ಸೊಭಾಣ್’ ಕಾರ್ಯಕ್ರಮದ ನಿರೂಪಣೆ ಮಾಡಿದ್ದೆ. ಅದರ ನಂತರ ಹಲವಾರು ಕಾರ್ಯಕ್ರಮಗಳಿಗೆ ಆಹ್ವಾನವಿದ್ದರೂ ಕಾರ್ಯಬಾಹುಳ್ಯದಿಂದ ತೆರಳಲು ಆಗಿರಲಿಲ್ಲ. “ಇದೇ ಜನವರಿ 22 ರಂದು 13 ಮುಗಿಸಿ 14 ನೇ ಸಾಲಿಗೆ ಪಾದಾರ್ಪಣೆ ಮಾಡುತ್ತಿದ್ದೇವೆ. ಈ ಸಲ ಯಾವುದೇ ನೆವನಗಳು ಬೇಡ. ಸಂಸ್ಥಾಪನಾ ದಿನಾಚರಣೆಗೆ ಬರ್ಬೇಕು. ಈ ಸಲ ಬಾರದಿದ್ದರೆ ಏನಾಗ್ತದೆ ನೋಡು ನಿನ್ನ ಗತಿ’’ ಎಂದು ಪ್ರಕಾಶ್ ಫೊನಾಯಿಸಿ ಪ್ರೀತಿಯಿಂದ ಗುರಾಯಿಸಿದಾಗ ಖಂಡಿತಾ ಹೋಗಲು ಪಣ ತೊಟ್ಟೆ, ಹೊರಟೆ.
ಅಲ್ಲಿ ತಲುಪಿದಾಗ, ಮೇಲೆ ಆಗಸದಲ್ಲಿ ಗುರು, ಶನಿ, ಶುಕ್ರ, ಮಂಗಳ ಗ್ರಹಗಳು ಸಾಲಾಗಿ ಮೆರವಣಿಗೆ ಹೊರಟ ಗಾಢ ನಿಶೆಯಲ್ಲಿ, ಮರ ಗಿಡಗಳ ನಡುವೆ ಹಚ್ಚಿದ ಹೊನಲು ಬೆಳಕಿಗೆ ದಾರಿ ತಪ್ಪಿ ಬಂದ ಜೇನ್ನೊಣಗಳು, ಸೊಡರಿಗೆ ಸುತ್ತಲು ಬಂದು ಬಲಿಯಾಗುವ ಹಾತೆಗಳ ಜಿರ್ರ್ ಶಬ್ದ, ರಂಗಪರಿಚಯದ ನಡುವೆ ಉಳಿದು ಬೆಳೆದ ಕೋಲು ಬಿದಿರುಗಳು ವಾತಾವರಣದಿಂದ ಹೀರಿದ ನೀರನ್ನು ತೊಟ್ಟಿಕ್ಕಿಸಲು ಆರಂಭಿಸಿದ ಹೊತ್ತಲ್ಲಿ, ಪೂಚಂತೆಯವರ ಕರ್ವಾಲೊ ಕಾದಂಬರಿಯ ಕೊನೆಯಲ್ಲಿ ಅನನ್ಯ, ಅನಂತ ಶೂನ್ಯ ಬಯಲು ತೆರೆದುಕೊಂಡು ಅವರೆಲ್ಲಾ ಸಮ್ಮೋಹನಕ್ಕೆ ಒಳಗಾದಂತೆ, ನನಗೂ ಅನೀರ್ವಚನೀಯ ಅನುಭವವಾದದ್ದು ಸುಳ್ಳಲ್ಲ.