ಕುಂದಾಪುರದ ಸಂತ ಮೇರಿಸ್ ಸಂಯುಕ್ತ ಪದವಿ ಪೂರ್ವ ಕಾಲೇಜಿನಲ್ಲಿ ಶನಿವಾರ ಪ್ರಥಮ ಪಿ ಯು ವಿದ್ಯಾರ್ಥಿಗಳ ರಕ್ಷಕ ಶಿಕ್ಷಕ ಸಭೆ ಹಾಗೂ ಸಾಧಕ ವಿದ್ಯಾರ್ಥಿಗಳಿಗೆ ಸನ್ಮಾನ ಕಾರ್ಯಕ್ರಮ ಜರುಗಿತು.
ಕಾರ್ಯಕ್ರಮದಲ್ಲಿ ಸಂತ ಮೇರಿಸ್ ಸಮೂಹ ವಿದ್ಯಾ ಸಂಸ್ಥೆಗಳ ಸಂಚಾಲಕರಾಗಿರುವ ಅತಿ .ವಂ.ಫಾದರ್ ಸ್ಟ್ಯಾನಿ ತಾವ್ರೋರವರು ಅಧ್ಯಕ್ಷತೆ ವಹಿಸಿ ವಿದ್ಯಾರ್ಥಿಗಳು ಪಿ ಯು ಹಂತದಲ್ಲಿ ಚೆನ್ನಾಗಿ ಅಭ್ಯಾಸ ಮಾಡುವದರೊಂದಿಗೆ ಉಲ್ಲಾಸದಿಂದಿರಬೇಕು. ಅಪ್ಪ ಅಮ್ಮ ಗುರು ಹಿರಿಯರನ್ನು ಗೌರವಿಸಬೇಕು.ಎನ್ನುತ್ತಾ ಸಂಸ್ಥೆಯಲ್ಲಿ ಕಲಿತ ಹಳೆ ವಿದ್ಯಾರ್ಥಿಗಳಾದ ವಿನಾರ್ಡ್ ಡಿಕೊಸ್ತಾ ಹಾಗೂ ನವೀನ್ ಕುಮಾರ ಪ್ರಸ್ತುತ CA ಪದವಿ ಪೂರ್ಣಗೊಳಿಸಿ ಉತ್ತಮ ಕಂಪೆನಿಯಲ್ಲಿ ಉದ್ಯೋಗಕ್ಕೆ ಆಯ್ಕೆಯಾಗಿದ್ದ ಅವರನ್ನು ಶಿಕ್ಷಣ ಸನ್ಮಾನಿಸಿ ಅವರ ಪ್ರಯತ್ನಕ್ಕೆ ಶ್ಯಾಘನೆ,ಹಾಗೂ ಅವರ ಪಾಲಕರಿಗೆ ಅಭಿನಂದನೆ ಸಲ್ಲಿಸಿ ಶುಭ ಹಾರೈಸಿದರು. ಅಂತಾರಾಷ್ಟ್ರೀಯ ಮಟ್ಟದಲ್ಲಿ ವಿಜೇತನಾದ ಇನ್ನೋರ್ವ ಚೆಸ್ ಆಟಗಾರ ನಿಶಾಂತ್ ಡಿಸೋಜ ಈತನಿಗೆ ಪುಷ್ಪ, ಪ್ರಶಸ್ತಿ ನೀಡಿ ಗೌರವಿಸಿಲಾಯಿತು.
ಕಾರ್ಯ ಕ್ರಮದ ಕೇಂದ್ರ ಬಿಂದುಗಳಾಗಿ, CA ಪರೀಕ್ಷೆಯನ್ನು ಉತ್ತಮ ಫಲಿತಾಂಶದೊಂದಿಗೆ ಮುಗಿಸಿ ಕಾಲೇಜಿನ ಇತಿಹಾಸದಲ್ಲಿ CA ಪರೀಕ್ಷೆ ಮುಗಿಸಿದವರಲ್ಲಿ ಮೊದಲಿಗರಾಗಿ ಸಂಸ್ಥೆಗೆ ಕೀರ್ತಿ ತಂದ ವಿನಾರ್ಡ್ ಡಿಕೊಸ್ತಾ ಹಾಗೂ ನವೀನ್ ಕುಮಾರ ಸನ್ಮಾನ ಸ್ವೀಕರಿಸಿ ತಮ್ಮ ಅನಿಸಿಕೆಯನ್ನು ವ್ಯಕ್ತಪಡಿಸಿದರು. ತಮ್ಮ ಶಿಕ್ಷಣದಲ್ಲಿ,ಪ್ರಯತ್ನ,ಅಪ್ಪ ಅಮ್ಮಂದಿರ ಪ್ರೋತ್ಸಾಹ,,ಗುರು ಹಿರಿಯರಲ್ಲಿ ಗೌರವ ಇವೆಲ್ಲ ಮುಖ್ಯ ಎನ್ನುತ್ತಾ ತಮ್ಮ ಸಾಧನೆಗೆ ಸಂಸ್ಥೆ, ಸಂಸ್ಥೆಯ ಉಪನ್ಯಾಸಕ ವೃಂದ ಎಲ್ಲರಿಗೂ ಧನ್ಯವಾದಗಳನ್ನು ತಿಳಿಸಿದರು. ಪ್ರತಿಯೊಬ್ಬರೂ ಪ್ರಯತ್ನಿಸಿದರೆ ಏನನ್ನೂ ಬೇಕಾದರೂ ಸಾಧಿಸಬಹುದು ಎಂದು ಕಾಲೇಜಿನಲ್ಲಿಯ ವಿದ್ಯಾರ್ಥಿಗಳಿಗೆ ಉತ್ತೇಜಿಸಿದರು.
ಕಾರ್ಯಕ್ರಮದಲ್ಲಿ ಕಾಲೇಜಿನ ಪ್ರಾಂಶುಪಾಲರಾದ ಶ್ರೀಮತಿ ರೇಶ್ಮಾ ಫೆರ್ನಾಂಡಿಸ್ ರವರು ಎಲ್ಲಾ ಪಾಲಕರಿಗೆ, ಸಾಧಕ ವಿದ್ಯಾರ್ಥಿಗಳಿಗೆ ಶುಭ ಹಾರೈಸಿ, ಪಾಲಕರಿಗೆ ಕಾಲೇಜಿನ ಕೆಲವು ಸಲಹೆ ಸೂಚನೆಗಳನ್ನು ತಿಳಿಸಿದರು.ಉಪ ಪ್ರಾಂಶುಪಾಲರಾದ ಶ್ರೀಮತಿ ಮಂಜುಳಾ ನಾಯರ್ ರವರು ಪ್ರಸ್ತುತ ಶೈಕ್ಷಣಿಕ ವರ್ಷದ ವರದಿಯನ್ನು ವಾಚಿಸಿದರು.
ವಿದ್ಯಾರ್ಥಿಗಳ ಸುಶ್ರಾವ್ಯ ಪ್ರಾರ್ಥನೆಯೊಂದಿಗೆ ಕಾರ್ಯಕ್ರಮ ಪ್ರಾರಂಭವಾಗಿ, ಕಾರ್ಯಕ್ರಮದ ಸಂಯೋಜಕರಾದ ಉಪನ್ಯಾಸಕಿ ಬಿನು ಜಯಚಂದ್ರನ್ ರವರು ಸ್ವಾಗತಿಸಿ, ಭೌತಶಾಸ್ತ್ರ ಉಪನ್ಯಾಸಕರಾದ ಶ್ರೀಮತಿ ಪಲ್ಲವಿ ಕಾರ್ಯಕ್ರಮ ನಿರೂಪಿಸಿದರು.
ಸಾಧಕ ವಿದ್ಯಾರ್ಥಿಗಳ ಪರಿಚಯವನ್ನು ಕನ್ನಡ ಉಪನ್ಯಾಸಕ ನಾಗರಾಜ ಶೆಟ್ಟಿ ನೀಡಿ, ಜೀವಶಾಸ್ತ್ರ ಉಪನ್ಯಾಸಕರಾದ ಪ್ರಫುಲ್ಲ ರವರು ಧನ್ಯವಾದ ಸಮರ್ಪಿಸಿದರು.