ಕೋಲಾರ / ಅಕ್ಟೋಬರ್ 30 : ಶಾಲೆಗಳು ಸಹ ಸಮುದಾಯದ ಒಂದು ಭಾಗ ಆಗಿರುವುದರಿಂದ ಶೈಕ್ಷಣಿಕ ಪ್ರಗತಿಯಲ್ಲಿ ಪಾಲಕರಿಗೂ ಮಹತ್ವದ ಹೊಣೆಗಾರಿಕೆ ಇದೆ. ಮಕ್ಕಳಂತೆ ಸಸಿ ಗಿಡಗಳನ್ನು ಪ್ರೀತಿಸಿ, ಬೆಳೆಸಿ ಎಂದು ಜಿಲ್ಲಾ ವಯಸ್ಕರ ಶಿಕ್ಷಣಾಧಿಕಾರಿ ಸಿ. ಆರ್.ಅಶೋಕ್ ಅಭಿಪ್ರಾಯಪಟ್ಟರು.
ತಾಲ್ಲೂಕಿನ ಹರಟಿ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿಂದು ಏರ್ಪಡಿಸಿದ್ದ ಸಮುದಾಯದತ್ತ ಶಾಲೆ ಕಾರ್ಯಕ್ರಮವನ್ನು ಗಿಡಕ್ಕೆ ನೀರುಣಿಸುವ ಮೂಲಕ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
ಶಾಲೆಯೆಂದರೆ ಕೇವಲ ಶಿಕ್ಷಕರು ಮತ್ತು ಮಕ್ಕಳಿಗμÉ್ಟೀ ಸೀಮಿತವಲ್ಲ. ಎಲ್ಲರ ಶೈಕ್ಷಣಿಕ ಬದುಕು ಆರಂಭವಾಗುವುದೇ ಶಾಲೆಯಿಂದ ಶಾಲೆಗಳೂ ಸಹ ಸಮುದಾಯದ ಒಂದು ಭಾಗವೇ ಆಗಿರುವುದರಿಂದ ಶಾಲೆಯ ಪ್ರಗತಿಗೆ ಸಮುದಾಯದ ಸಕ್ರಿಯ ಪಾಲ್ಗೊಳ್ಳುವಿಕೆ ಅಗತ್ಯವಿದೆ ಎಂದರು.
ಮಕ್ಕಳ ಕಲಿಕೆಯ ಬಗ್ಗೆ ನಿಗಾ ವಹಿಸಬೇಕು. ಎಲ್ಲಾ ಮಕ್ಕಳೂ ತಪ್ಪದೇ ಶಾಲೆಗೆ ಬರುವಂತಾಗಬೇಕು. ಶಾಲೆಗಳಲ್ಲಿನ ಸಮಸ್ಯೆಗಳಿಗೆ ಸ್ಥಳೀಯವಾಗಿ ಪರಿಹಾರ ಕಂಡುಕೊಳ್ಳಬೇಕು ಎಂದು ಜಾಗೃತಿ ಉಂಟುಮಾಡುವತ್ತ ಸಮುದಾಯದತ್ತ ಶಾಲಾ ಕಾರ್ಯಕ್ರಮ ನಡೆಯುತ್ತಿದ್ದು, ಈ ಸಂದರ್ಭದಲ್ಲಿ ಶೈಕ್ಷಣಿಕ ಪ್ರಗತಿಯ ಚಿಂತನ ಮಂಥನಗಳು ನಡೆಯುತ್ತಿರುವುದು ಸುತ್ಯಾರ್ಹ, ಗಿಡ ಮರಗಳನ್ನು ಮಕ್ಕಳಂತೆ ಪ್ರೀತಿಸಿ ಸುಂದರವಾಗಿ ಕಾಣಬೇಕು ಎಂದರು.
ಶಾಲೆಗಳಲ್ಲಿನ ಹಾಜರಾತಿ ಹೆಚ್ಚಿಸಲು ಮಧ್ಯಾಹ್ನದ ಬಿಸಿಯೂಟ, ಕ್ಷೀರಭಾಗ್ಯ, ಮಕ್ಕಳಿಗೆ ಕಬ್ಬಿಣಾಂಶದ ಮಾತ್ರೆ ಸೇರಿದಂತೆ ಹಲವಾರು ಕಾರ್ಯಕ್ರಮಗಳ ಪ್ರಯೋಜನವನ್ನು ವಿದ್ಯಾರ್ಥಿಗಳು ಪಡೆದುಕೊಳ್ಳಬೇಕು. ಈ ರೀತಿಯ ಶಾಲೆಯಲ್ಲಿರುವ ಯೋಜನೆಗಳ ಬಗ್ಗೆ ಮಕ್ಕಳ ಪಾಲಕರು ಅರಿವು ಪಡೆದುಕೊಳ್ಳಲು ಸಮುದಾಯದತ್ತ ಶಾಲಾ ಕಾರ್ಯಕ್ರಮ ಸಹಕಾರಿಯಾಗಿದೆ ಎಂದು ತಿಳಿಸಿದರು.
ಸಮುದಾಯದತ್ತ ಶಾಲಾ ಮೇಲ್ವಿಚಾರಕ ಪ್ರೌಢಶಾಲಾ ಮುಖ್ಯೋಪಾಧ್ಯಾಯ ವೆಂಕಟರಮಣಪ್ಪ ಮಾತನಾಡಿ ಮಕ್ಕಳನ್ನು ಶಾಲೆಗೆ ಕಳುಹಿಸಿದ ಮಾತ್ರಕ್ಕೆ ಪಾಲಕರ ಜವಾಬ್ದಾರಿ ಪೂರ್ಣಗೊಳ್ಳುವುದಿಲ್ಲ. ಪಾಲಕರು ಶಾಲೆಗೆ ಆಗಾಗ್ಗೆ ಬೇಟಿ ನೀಡಿ ಮಕ್ಕಳ ಕಲಿಕೆಯ ಬಗ್ಗೆ ಶಿಕ್ಷಕರೊಂದಿಗೆ ಸಮಾಲೋಚನೆ ಮಾಡುವುದು ಸೂಕ್ತ ಎಂದರು.
ಈ ಸಂದರ್ಭದಲ್ಲಿ ಮುಖ್ಯೋಪಾಧ್ಯಾಯರಾದ ಜಿ.ಶ್ರೀನಿವಾಸ್, ಸಹ ಶಿಕ್ಷಕರಾದ ಪಿ.ಎಂ.ಗೋವಿಂದಪ್ಪ, ಎಂ.ಆರ್.ಮೀನಾ, ಸ್ವಾತಿ ಮತ್ತಿತರರು ಹಾಜರಿದ್ದರು.