ಪಾಂಬೂರು ಮಾನಸ:ಆಟಿಸಂ ಸಮಸ್ಯೆಯ ಮಕ್ಕಳಿಗೆ ಕಾಳಜಿ ಪ್ರೀತಿ ತೋರಿದಾಗ ಸಮಾಜದ ಆಸ್ತಿಯಾಗಬಲ್ಲರು – ಬಿಷಪ್‌ ಜೆರಾಲ್ಡ್‌ ಲೋಬೊ 

JANANUDI.COM NETWORK

ಉಡುಪಿ:  “ಆಟಿಸಂ ರೋಗ ಚಿಕ್ಕ ಮಕ್ಕಳಲ್ಲಿ ಕಂಡುಬರುವಂತಹ ಅಸ್ವಸ್ಥತೆಯಾಗಿದ್ದು ತಮ್ಮ ಮಕ್ಕಳಿಗೆ ಅಂತಹ ಸಮಸ್ಯೆ ಇದೆ ಎಂದು ತಿಳಿದಾಗ ಪೋಷಕರು ವಿಶೇಷ ಪ್ರೀತಿ ವಾತ್ಸಲ್ಯ ಮತ್ತು ಕಾಳಜಿ ವಹಿಸಿ ಅಕ್ಕರೆಯಿಂದ ಪಾಲನೆ ಮಾಡಿದಾಗ ಅಂತಹ ಮಕ್ಕಳು ಸಮಾಜದ ಆಸ್ತಿಯಾಗುವುದರಲ್ಲಿ ಇನ್ನೊಂದು ಮಾತಿಲ್ಲ”  ಎಂದು ಉಡುಪಿ ಧರ್ಮಪ್ರಾಂತ್ಯದ ಧರ್ಮಾಧ್ಯಕ್ಷರಾದ ಅತಿ ವಂ|ಡಾ|ಜೆರಾಲ್ಡ್‌ ಐಸಾಕ್‌ ಲೋಬೊ ಹೇಳಿದರು.

ಅವರು ಮಂಗಳವಾರ ಪಾಂಬೂರು ಮಾನಸ ವಿಶೇಷ ಮಕ್ಕಳ ಶಾಲೆಯ ರಜತಮಹೋತ್ಸವದ ಪ್ರಯುಕ್ತ ನಿರ್ಮಿಸಲಾದ ಕಟ್ಟಡ ಹಾಗೂ ಆಟಿಸಂ ತರಬೇತಿ ಕೇಂದ್ರದ ಕಟ್ಟಡದ ಉದ್ಘಾಟನೆ ಮತ್ತು ಆಶೀರ್ವಚನ ನೆರವೇರಿಸಿ ಮಾತನಾಡಿದರು.   

“ಭಾರತವೊಂದರಲ್ಲಿ ಸುಮಾರು 5 ಮಿಲಿಯನ್‌ ಮಂದಿ ವಾರ್ಷಿಕವಾಗಿ ಈ ಆಟಿಸಂ ರೋಗದಿಂದ ಬಳಲುತ್ತಿದ್ದು, ಆಟಿಸಂ ಸಮಸ್ಯೆ ಇರುವ ಮಕ್ಕಳನ್ನುಆರಂಭಿಕ ಹಂತದಲ್ಲಿ ಗುರುತಿಸಿ ಪರಿಪೂರಣ ಚಿಕಿತ್ಸೆ ನೀಡಬೇಕು. ಈ ರೋಗವನ್ನು ಪೂರ್ಣವಾಗಿ ಗುಣಪಡಿಸಲು ಸಾಧ್ಯವಿಲ್ಲದೆ ಹೋದರೂ ಸಾಕಷ್ಟು ಪ್ರೋತ್ಸಾಹ ಮತ್ತು ಸಹಕಾರ ನೀಡಿದ್ದಲ್ಲಿ ಅಂತಹ ಮಕ್ಕಳಿನ ಪ್ರತಿಭೆಯನ್ನು ಸೂಕ್ತವಾಗಿ ಬಳಸಿಕೊಂಡು ಸಮಾಜಕ್ಕೆ ಈ ರೀತಿಯ ಮಕ್ಕಳು ಹೊರೆಯಾಗದೆ ಬದಲಾಗಿ ಆಸ್ತಿಯಾಗಲು ಸಾಧ್ಯವಿದೆ.ತಮ್ಮ ಮಕ್ಕಳಿಗೆ ಆಟಿಸಂ ಇದೆ ಎಂದು ತಿಳಿದಾಗ ಹೆತ್ತವರು ವಿಶೇಷ ಪ್ರೀತಿ ವಾತ್ಸಲ್ಯ ಮತ್ತು ಕಾಳಜಿ ವಹಿಸಬೇಕು. ಅಂತಹ ಮಕ್ಕಳನ್ನು ಯಾವುದೇ ಕಾರಣಕ್ಕೂ ದೂಷಿಸಬಾರದು ಮತ್ತು ಇತರ ಮಕ್ಕಳ ಜೊತೆ ಹೋಲಿಸಬಾರದು. ನಿರಂತರವಾಗಿ ಅಂತಹ ಮಕ್ಕಳಿಗೆ ಪ್ರೀತಿ ವಿಶ್ವಾಸ ತೋರಿಸಿ ವಿಶೇಷ ಶಿಕ್ಷಣ ಮತ್ತು ತರಬೇತಿ ನೀಡಿ ಅವರ ಆತ್ಮವಿಶ್ವಾಸ ವೃದ್ಧಿಸುವಂತೆ ಮಾಡಬೇಕು ಎಂದು ಅವರು ಹೇಳಿದರು.      

ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದ ಕಾಪು ಶಾಸಕ ಲಾಲಾಜಿ ಆರ್‌ ಮೆಂಡನ್‌ ಮಾತನಾಡಿ ‘ವಿಶೇಷ ಮಕ್ಕಳು ಸಮಾಜಕ್ಕೆ ಹೊರೆಯಾಗದಂತೆ ಅವರ ಪ್ರತಿಭೆಗೆ ಪ್ರೋತ್ಸಾಹ ನೀಡಿದಾಗ ಅವರು ಹೆಚ್ಚಿನ ಸಾಧನೆ ಮಾಡಲು ಸಾಧ್ಯವಿದ್ದು ಅಂತಹ ಮಕ್ಕಳನ್ನು ಗುರುತಿಸಿ ಸಮಾಜದ ಮುಖ್ಯವಾಹಿನಿಯಲ್ಲಿ ಎಲ್ಲರೊಂದಿಗೆ ಬೆರೆಯುವ ಅವಕಾಶ ಮಾಡಿಕೊಡಬೇಕು’  ಎಂದರು.   

ಕಾರ್ಯಕ್ರಮದಲ್ಲಿ ಸಂತ ಫಿಲೋಮಿನಾ ಕಾಲೇಜಿನ ನಿವೃತ್ತ ಪ್ರಾಂಶುಪಾಲರಾದ ವಂ|ಝೇವಿಯರ್‌ ಗೋಮ್ಸ್‌, ವಿಶೇಷ ಮಕ್ಕಳ ಜಿಲ್ಲಾ ಮಟ್ಟದ ತರಬೇತಿ ಅಧಿಕಾರಿ ರತ್ನಾ, ಕಥೊಲಿಕ್‌ ಸಭಾ ಮಂಗಳೂರು ಪ್ರದೇಶ ಅಧ್ಯಕ್ಷರಾದ ಸ್ಟ್ಯಾನಿ ಲೋಬೊ, ಉಡುಪಿ ಪ್ರದೇಶ ಅಧ್ಯಕ್ಷರಾದ ಮೇರಿ ಡಿʼಸೋಜಾ, ಆಧ್ಯಾತ್ಮಿಕ ನಿರ್ದೇಶಕ ವಂ|ಫರ್ಡಿನಾಂಡ್‌ ಗೊನ್ಸಾಲ್ವಿಸ್‌, ಮಾನಸ ಸಂಸ್ಥೆ ರಜತಮಹೋತ್ಸವ ಸಮಿತಿಯ ಸಂಚಾಲಕರಾದ ಎಲ್‌ ರೋಯ್‌ ಕಿರಣ್‌ ಕ್ರಾಸ್ಟೊ, ಪ್ರಾಂಶುಪಾಲರಾದ ಸಿಸ್ಟರ್‌ ಅನ್ಸಿಲ್ಲಾ ಫೆರ್ನಾಂಡಿಸ್‌, ಕಥೊಲಿಕ್‌ ಸಭಾ ಮುಂಬೈ ಇದರ ಅಧ್ಯಕ್ಷರಾದ ರಫಾಯೆಲ್‌ ಡಿʼಸೋಜಾ ಉಪಸ್ಥಿತರಿದ್ದರು.   

ಮಾನಸ ಸಂಸ್ಥೆ ಅಧ್ಯಕ್ಷರಾದ ಹೆನ್ರಿ ಮಿನೇಜಸ್‌ ಸ್ವಾಗತಿಸಿ ಕಾರ್ಯದರ್ಶಿ ಜೊಸೇಫ್‌ ನೊರೊನ್ಹಾ ವಂದಿಸಿದರು. ಅನಿತಾ ಡಿʼಸೋಜಾ ಶಂಕರಪುರ ಕಾರ್ಯಕ್ರಮ ನಿರೂಪಿಸಿದರು.