ಸಂತ ಅಂತೋನಿಯವರನ್ನು ಗೌರವಿಸುವ ಹಾಗೂ ಕ್ರೈಸ್ತ ಸಮುದಾಯದಲ್ಲಿ ಭಕ್ತಿ ಮತ್ತು ಏಕತೆಯನ್ನು ಸಾರುವ ವಾರ್ಷಿಕ ಹಬ್ಬದ ಪೂರ್ವ ತಯಾರಿಯಾಗಿ 9 ದಿನಗಳ ನೊವೇನಗಳು ನಡೆದವು . 28ರಂದು ಪರಮ ಪ್ರಸಾದವನ್ನು ವಿಶೇಷವಾಗಿ ಆರಾಧಿಸಲಾಯಿತು . 30 ರಂದು ಸಂತ ಅಂತೋನೀಯವರ ಪ್ರತಿಭೆಯನ್ನು ಮೆರವಣಿಗೆಯಲ್ಲಿ ಗೌರವಿಸಲಾಯಿತು. ಈ ಸಂದರ್ಭದಲ್ಲಿ ಕ್ರೈಸ್ತ ಸಮುದಾಯದವರು ಉರಿಯುತ್ತಿರುವ ಮೇಣದ ಬತ್ತಿ ಹಿಡಿದು ಭಕ್ತಿಯಿಂದ ನಡೆದರು . ಪಿಯುಸ್ ನಗರ ಚರ್ಚಿನ ಧರ್ಮಗುರುಗಳು ಫಾ. ಆಲ್ಬರ್ಟ್ ಭಕ್ತಿಯ ಆಚರಣೆಗಳ ಮುಂದಾಳತ್ವ ವಹಿಸಿದ್ದರು. ವಿವಿಧ ಇಗರ್ಜಿಯ ಹಲವಾರು ಧರ್ಮಗುರುಗಳು ಸಹಕರಿಸಿದರು.
ಜನವರಿ 31 ರಂದು ಬೆಳಿಗ್ಗೆ 9:30ಕ್ಕೆ ವಿವಿಧ ಹಂತಗಳಲ್ಲಿ ಸಹಕರಿಸಿದವರಿಗೆ ಗೌರವ ಸ್ಮರಣೆಯಾಗಿ ಮೇಣದಬತ್ತಿ ಹಂಚಲಾಯಿತು. ಬಳಿಕ ಪವಿತ್ರ ಬಲಿ ಪೂಜೆ ನೆರವೇರಿತು, ಪ್ರಧಾನ ಗುರುಗಳಾಗಿ ಉಡುಪಿ ಧರ್ಮ ಪ್ರಾಂತ್ಯದ ಮೊನ್ಸಿಂಜೊರ್ ರೆ.ಫಾ.ಫರ್ಡಿನಾಂಡ್ ಗೊನ್ಸಾಲ್ವಿಸ್ ಬಲಿ ಪೂಜೆಯ ನೇತ್ರತ್ವವನ್ನು ವಹಿಸಿದರು. ಕುಂದಾಪುರ ವಲಯ ಪ್ರಧಾನ ಧರ್ಮಗುರು ಅ|ವಂ|ಸ್ಟ್ಯಾನಿ ತಾವ್ರೊ ಹಾಗೂ ಬೇರೆ ಬೇರೆ ಚರ್ಚಿನ ಧರ್ಮ ಗುರುಗಳು ಉಪಸ್ಥಿತರಿದ್ದರು. ಶ್ರೀಮತಿ ಮತ್ತು ಶ್ರೀ ರೋಬರ್ಟ್ ಗೊನ್ಸಾಲ್ವಿಸ್ ಕುಟುಂಬ ಸಂತ ಅಂತೋನಿಯವರಿಂದ ಪಡೆದ ವರಗಳಿಗೆ ಹರಕೆ ಸಲ್ಲಿಸಿ ಹಬ್ಬವನ್ನು ಆಚರಿಸಿದರು. ಹಲವಾರು ಕಡೆಗಳಿಂದ ಭಕ್ತಾದಿಗಳು ಸಂಭ್ರಮದಲ್ಲಿ ಪಾಲ್ಗೊಂಡರು. ಪಡುಕೋಣೆ ಚರ್ಚಿನ ಧರ್ಮಗುರುಗಳು ಫಾ. ಫ್ರಾನ್ಸಿಸ್ ಕರ್ನೇಲಿಯೊ ಪಾಲನಾ ಮಂಡಳಿ ಜೊತೆ ಎಲ್ಲಾ ದಿನಗಳ ಕಾರ್ಯಕ್ರಮಗಳನ್ನು ಆಯೋಜಿಸಿದ್ದರು.