“ಗೃಹರಕ್ಷಕ ದಳದ ಸಿಬ್ಬಂದಿಗಳಾಗಿ ನಾವು ಪ್ರಾಮಾಣಿಕತೆಯಿಂದ ನಿಸ್ವಾರ್ಥ ಸೇವೆ ಸಲ್ಲಿಸುತ್ತಿದ್ದೇವೆ. ನಮಗೆ ಕಾಯಂ ಸೇವೆಗೆ ನೇಮಕ ಮಾಡುವುದಿಲ್ಲ. ಅಗತ್ಯವಿದ್ದಾಗ ಕರೆಯುತ್ತಾರೆ. ಸೇವೆ ಮಾಡಿದ ದಿನಗಳ ಲೆಕ್ಕದಲ್ಲಿ ವೇತನ ಸಿಗುತ್ತದೆ. ಸರಕಾರದ ಮುಂದೆ ನಮ್ಮ ಬೇಡಿಕೆಗಳು ಹಲವು ಇದ್ದರೂ ಯಾವುದೂ ಕಾರ್ಯಗತವಾಗಿಲ್ಲ. ಆರೋಗ್ಯ, ಚಿಕಿತ್ಸೆ ಸೌಲಭ್ಯವಾಗಲಿ, ನಿವೃತ್ತಿ ವೇತನವಾಗಲಿ ನಮಗೆ ದೊರೆಯುವುದಿಲ್ಲ. ಆದರೆ ಪೊಲೀಸ್ ಇಲಾಖೆ, ಅಗ್ನಿಶಾಮಕ ಇಲಾಖೆ ಅಧಿಕಾರಿಗಳು ನಮಗೆ ಗೌರವ ನೀಡುತ್ತಾರೆ. ಸಮಾಜಕ್ಕಾಗಿ ಸೇವೆಗೈಯುವುದೇ ನಮಗಿರುವ ತೃಪ್ತಿ” ಎಂದು ಕುಂದಾಪುರ ಗೃಹರಕ್ಷಕ ದಳದ ಪ್ರಭಾರ ಘಟಕಾಧಿಕಾರಿ ಭಾಸ್ಕರ ಮೆಂಡನ್ ತಿಳಿಸಿದರು.
ರೋಟರಿ ಕುಂದಾಪುರ ದಕ್ಷಿಣದ ವತಿಯಿಂದ ನಡೆದ “ಹೋಂ ಗಾರ್ಡ್ಗಳೊಂದಿಗೆ ಸಂವಾದ ಹಾಗೂ ಸನ್ಮಾನ ಕಾರ್ಯಕ್ರಮದಲ್ಲಿ ಪ್ರಧಾನ ಅತಿಥಿಯಾಗಿ ಅವರು ಮಾತನಾಡಿದರು.
“ಎಷ್ಟೋ ಸಮಯ ಜೀವದ ಹಂಗು ತೊರೆದು ನಾವು ಸೇವೆ ಸಲ್ಲಿಸಿದ್ದೇವೆ. ಸಾರ್ವಜನಿಕ ಜೀವ ಹಾಗೂ ಸೊತ್ತು ಕಾಪಾಡಲು ಅಪಾಯ ಎದುರಿಸಿದ್ದೇವೆ. ಮೇಲಾಧಿಕಾರಿಗಳ ಆದೇಶದಂತೆ ಹಲವು ಸಂದರ್ಭಗಳಲ್ಲಿ ನಿದ್ದೆ, ಊಟೋಪಚಾರ ಇಲ್ಲದೇ ಕಾರ್ಯ ನಿರ್ವಹಿಸಿದ್ದೇವೆ. ಗೃಹರಕ್ಷಕರಿಗೆ ಸರಕಾರದ ಅಗತ್ಯ ಸವಲತ್ತು ಸಿಕ್ಕಿದರೆ ಇನ್ನಷ್ಟು ಉತ್ಸಾಹದಿಂದ ಕೆಲಸ ಮಾಡಲು ಸಾಧ್ಯ” ಎಂದರು.
ಗೃಹರಕ್ಷಕರಾದ ಭಾಸ್ಕರ ಮೆಂಡನ್, ಜಗನ್ನಾಥ ಖಾರ್ವಿ, ಸದಾಶಿವ ಗೋಪಾಡಿ, ಸಂಜೀವ ಎಸ್. ಕೋಡಿಯವರನ್ನು ರೋಟರಿ ಕುಂದಾಪುರ ದಕ್ಷಿಣದ ಪರವಾಗಿ ಡಾ. ವಿಶ್ವೇಶ್ವರ, ಕೆ.ಕೆ.ಕಾಂಚನ್, ಸೀತಾರಾಮ ನಕ್ಕತ್ತಾಯ, ಯು.ಎಸ್.ಶೆಣೈ ಸನ್ಮಾನಿಸಿ ಗೌರವಿಸಿದರು.
“ನಮಗೆ ವರ್ಷಕ್ಕೆ ನಾಲ್ಕು ತಿಂಗಳು ಕೆಲಸ ಸಿಗಬಹುದು. ನಾವು ಬೇರೆ ಬೇರೆ ವೃತ್ತಿಯಲ್ಲಿದ್ದು ಕರೆ ಬಂದಾಗ ಹೋಗುತ್ತೇವೆ. ಮೀನುಗಾರಿಕೆ, ರಿಕ್ಷಾ ಚಾಲನೆ, ಅಂಗಡಿ ವ್ಯವಹಾರ, ವಾಚ್ಮೆನ್ ಮುಂತಾದ ಕೆಲಸ ಮಾಡಿಕೊಂಡಿರುತ್ತೇವೆ. ಕುಂದಾಪುರದಲ್ಲಿ 44 ಮಂದಿ ಇದ್ದು ಒಟ್ಟಾರೆ ಉಡುಪಿ ಜಿಲ್ಲೆಯಲ್ಲಿ 350 ಮಂದಿ ಸೇವೆ ಸಲ್ಲಿಸುತ್ತಿದ್ದೇವೆ. ಪೊಲೀಸರು ಮತ್ತು ನಮ್ಮ ಬೆಲ್ಟ್, ಹ್ಯಾಟ್, ಬ್ಯಾಡ್ಜ್ ಎಲ್ಲ ಬೇರೆ ಇರುವುದರಿಂದ ಗುರುತಿಸಲು ಸಾಧ್ಯ. ನಮಗೆ ಪೊಲೀಸರಂತೆ ಕ್ರಮಕೈಗೊಳ್ಳುವ ಅಧಿಕಾರವಿಲ್ಲ” ಎಂದು ಸಂವಾದದಲ್ಲಿ ಗೃಹರಕ್ಷಕರು ಹೇಳಿದರು.
ಉಮೇಶ್ ಮಾಸ್ಟರ್, ಕೆ.ಪಿ.ಭಟ್, ಡಾ. ಉತ್ತಮ್ ಕುಮಾರ್ ಶೆಟ್ಟಿ, ಮನೋಹರ್, ಸತ್ಯನಾರಾಯಣ ಪುರಾಣಿಕ, ಶ್ರೀನಿವಾಸ್ ಶೇಟ್, ನಂದಾ ನಾಯಕ್ ಸಂವಾದದಲ್ಲಿ ಪಾಲ್ಗೊಂಡರು.
ರೋಟರಿ ಕುಂದಾಪುರ ದಕ್ಷಿಣದ ಅಧ್ಯಕ್ಷ ಸುರೇಶ ಮಲ್ಯ ಅಧ್ಯಕ್ಷತೆ ವಹಿಸಿ ಸ್ವಾಗತಿಸಿದರು. ಕಾರ್ಯದರ್ಶಿ ಕೆ. ರಮಾನಂದ ಕಾರಂತ್ ಗೃಹ ಕಾರ್ಯಕ್ರಮದ ಉದ್ದೇಶ ವಿವರಿಸಿದರು. ಕೆ.ಕೆ.ಕಾಂಚನ್ ಗೃಹರಕ್ಷಕರನ್ನು ಪರಿಚಯಿಸಿದರು.
ಲೊಯ್ ಕಾರ್ವೆಲ್ಲೋ ವಂದಿಸಿದರು.