“ಸಮಾಜಕ್ಕೆ ನಮ್ಮ ಕೊಡುಗೆ”-ವಿಚಾರ ಸಂಕಿರಣ


“ಪ್ರತಿಯೊಬ್ಬ ಪ್ರಜೆಯು ತನ್ನ ವೃತ್ತಿ ಪ್ರವೃತ್ತಿಯಲ್ಲಿ ಸಮಾಜಕ್ಕೆ ಅನುಕೂಲವಾಗುವ ಸಹಕಾರ ನೀಡಿದರೆ ಸಮಾಜದ ಅಭಿವೃದ್ಧಿಗೆ ಆತ ಕೊಡುಗೆ ನೀಡಿದಂತಾಗುತ್ತದೆ. ಇದರಿಂದ ಸರಕಾರದ ಸಹಾಯ ನಿರೀಕ್ಷೆ ಮಾಡದೇ ಆರೋಗ್ಯಕರ ಸಮಾಜ ನಿರ್ಮಾಣ ಸಾಧ್ಯವಾಗುತ್ತದೆ” ಎಂದು ರೋಟರಿ ಕುಂದಾಪುರ ದಕ್ಷಿಣದ ಅಧ್ಯಕ್ಷ ಸತ್ಯನಾರಾಯಣ ಪುರಾಣಿಕ ಹೇಳಿದರು.
ರೋಟರಿ ಕುಂದಾಪುರ ದಕ್ಷಿಣದ ವತಿಯಿಂದ ಏರ್ಪಡಿಸಲಾದ “ಸಮಾಜಕ್ಕೆ ನಮ್ಮ ಕೊಡುಗೆ” ವಿಚಾರ ಸಂಕಿರಣದಲ್ಲಿ ಅಧ್ಯಕ್ಷತೆ ವಹಿಸಿ ಅವರು ಮಾತನಾಡುತ್ತಿದ್ದರು.
“ಆರ್ಥಿಕ, ಸಾಮಾಜಿಕ ತೊಂದರೆ ಗೊಳಗಾದವರಿಗೆ ಸಹಾಯ ಮಾಡುವು ದರೊಂದಿಗೆ ಅಸಹಾಯಕ ಜೀವನ ನಡೆಸುವವರಿಗೆ ಮುನ್ನಡೆಯಲು ಮಾರ್ಗದರ್ಶನ ಮಾಡಿದರೆ ಅದೇ ದೊಡ್ಡ ಕೊಡುಗೆಯಾಗುತ್ತದೆ” ಎಂದು ಹಲವು ಘಟನೆಗಳನ್ನು ಉದಾಹರಿಸಿ ಅವರು ಹೇಳಿದರು.
ಕೆನರಾ ಬ್ಯಾಂಕಿನ ನಿವೃತ್ತ ಪ್ರಬಂಧಕ ಕೆ.ಪಿ.ಭಟ್ ಪ್ರಾಸ್ತಾವಿಕವಾಗಿ ಮಾತನಾಡಿ, “ವೈಯಕ್ತಿಕವಾಗಿಯೂ, ಸಂಘ ಸಂಸ್ಥೆಗಳ ಮೂಲಕವೂ ಅರ್ಹರನ್ನು ಗುರುತಿಸಿ ಸಹಾಯ ಮಾಡಿದಾಗ, ಸಹಾಯ ಪಡೆದವರು ಏಳಿಗೆ ಹೊಂದಿದಾಗ ಸಂತಸವಾಗುತ್ತದೆ” ಎಂದರು.
ಸಿಂಡಿಕೇಟ್ ಬ್ಯಾಂಕ್ ನಿವೃತ್ತ ಹಿರಿಯ ಪ್ರಬಂಧಕ ವಾಸುದೇವ ಕಾರಂತ ಮಾತನಾಡಿ, “ನಮ್ಮ ವೃತ್ತಿಯಲ್ಲಿ ಜನರಿಗೆ ಸಹಾಯ ಮಾಡಲು ಸಾಕಷ್ಟು ಅವಕಾಶವಿರುವಾಗ ಈ ಅವಕಾಶ ಸದ್ಬಳಕೆ ಮಾಡಿಕೊಂಡಾಗ ಪ್ರಯೋಜನ ಪಡೆದವರ ಪ್ರಗತಿ ಮನಸ್ಸಿಗೆ ತೃಪ್ತಿ ನೀಡುತ್ತದೆ. ಪ್ರತಿಯೊಬ್ಬ ಗ್ರಾಹಕ ವೃತ್ತಿ ವ್ಯವಹಾರದಲ್ಲಿ ಯಶಸ್ಸು ಸಾಧಿಸಿದರೆ ಸಮಾಜ ಬೆಳೆದಂತೆ” ಎಂದರು.
ಉದ್ಯಮಿ ಕೆ.ಕೆ. ಕಾಂಚನ್ ಮಾತನಾಡಿ, “ಬದುಕಿನ ಬಾಲ್ಯ ಬಹಳ ಸಂಕಟಮಯವಾಗಿದ್ದರೂ ಛಲದಿಂದ ಮುನ್ನಡೆಯುವ ಪ್ರೇರಣೆ ನಮ್ಮಲ್ಲಿ ಮೂಡಬೇಕು. ಯುವ ಜನಾಂಗ ವಿದ್ಯೆಯೊಂದಿಗೆ ಜೀವನ ಮೌಲ್ಯ ಅರಿಯುವಂತೆ ನಾವು ನಡೆಸಿದ ಪ್ರಯತ್ನ ಯಶಸ್ವಿಯಾದರೆ ಸಮಾಜ ಆರೋಗ್ಯ ಪೂರ್ಣವಾಗಿ ಬೆಳೆಯುತ್ತದೆ. ದುಶ್ಚಟಗಳಿಂದ ಯುವಕರು ದೂರವಿರುವಂತೆ ಮಾರ್ಗದರ್ಶನ ಮಾಡುವುದು ಸಮಾಜ ಸುಸ್ಥಿತಿಯಿಂದ ಬೆಳೆಯುವಂತೆ ಮಾಡುವ ಕೊಡುಗೆ” ಎಂದರು.
“ಕುಂದಪ್ರಭ” ಅಧ್ಯಕ್ಷ ಯು. ಎಸ್. ಶೆಣೈ ಮಾತನಾಡಿ, “ಕುಂದಾಪುರ ಸೇರಿದಂತೆ ಕರಾವಳಿಯಲ್ಲಿ ವಿವಿಧ ಕ್ಷೇತ್ರದಲ್ಲಿ ಅದ್ಬುತ ಅಭಿವೃದ್ಧಿ ಕಾರ್ಯ ನಡೆಯಲು ಸಮಾಜದ ಗಣ್ಯರ, ತಜ್ಞರ ಕೊಡುಗೆ ದೊಡ್ಡದು. ಅವರಿಂದ ಪ್ರೇರಿತರಾಗಿ ಸರಕಾರ ಪೂರಕ ನೆರವು ಒದಗಿಸಿದ, ಅಭಿವೃದ್ಧಿ ನಡೆಸಿದ ಉದಾಹರಣೆಗಳು ಇವೆ. ಸಾವಿರಾರು ಯುವಕರು ದಾನಿಗಳ, ಸಂಘ ಸಂಸ್ಥೆಗಳ ನೆರವಿನಿಂದಲೇ ದೇಶ ವಿದೇಶಗಳಲ್ಲಿ ಸಾಧನೆ ಮಾಡುತ್ತಿದ್ದಾರೆ. ಫಲಾಪೇಕ್ಷೆ ಇಲ್ಲದೇ ನಡೆಸುವ ಸಮಾಜ ಸೇವೆಗೆ ಹೆಚ್ಚು ಗೌರವ ದೊರೆಯುತ್ತದೆ” ಎಂದರು.
ಉತ್ತಮ ಹೋವಿಯೋ, ಕ್ಲಿನಿಕ್‍ನ ಮುಖ್ಯಸ್ಥ ಡಾ. ಉತ್ತಮ ಕುಮಾರ್ ಶೆಟ್ಟಿ ಮಾತನಾಡಿ, “ನನ್ನ ವೈದ್ಯಕೀಯ ವೃತ್ತಿಯೊಂದಿಗೆ ಪರಿಸರ ಉಳಿವು ಹಾಗೂ ಉತ್ತಮ ತಳಿಗಳ ಸಸ್ಯಗಳನ್ನು ಬೆಳೆಸಿ ಸಾರ್ವಜನಿಕವಾಗಿ ಕೊಡುಗೆಯಾಗಿ ನೀಡಿದ್ದರಿಂದ ಬಹಳಷ್ಟು ಫಲಪ್ರದ ಫಲಿತಾಂಶ ಕಂಡಿದ್ದೇನೆ. ಸಮಾಜದ ಅಭಿವೃದ್ಧಿಯಲ್ಲಿ ಇಂತಹ ಪ್ರಯತ್ನಗಳು ಮೌಲ್ಯಯುತವಾದುವು” ಎಂದರು.
ಉದ್ಯಮಿ ಸಚಿನ್ ನಕ್ಕತ್ತಾಯ, “ಉದ್ಯೋಗ ಸೃಷ್ಠಿ ಸಮಾಜಕ್ಕೆ ನೀಡುವ ಮಹತ್ವದ ಕೊಡುಗೆ. ಊರ ಪರವೂರ ನೂರಾರು ಮಂದಿಗೆ ಉದ್ಯೋಗ ಅವರ ಮಕ್ಕಳಿಗೆ ವಿದ್ಯೆ ನಾವು ನೀಡಿದ್ದೇವೆ. ಉದ್ಯೋಗಾವಕಾಶ ಕಲ್ಪಿಸುವುದು ಇಂದಿನ ದಿನ ಬಹಳ ಅಗತ್ಯವಾದುದು.” ಎಂದರು.
ಶ್ರೀಮತಿ ಶೋಭಾ ಭಟ್, ಶ್ರೀನಿವಾಸ ಶೇಟ್, ರಾಘವೇಂದ್ರ ಶೇಟ್ ಚರ್ಚೆಯಲ್ಲಿ ಪಾಲ್ಗೊಂಡರು.
ಗೋಷ್ಠಿ ನಿರ್ವಹಿಸಿದ ಬಿಎಸ್‍ಎನ್‍ಎಲ್ ನಿವೃತ್ತ ಅಧಿಕಾರಿ ಶ್ರೀಮತಿ ಸುರೇಖಾ ಪುರಾಣಿಕ ಮಾತನಾಡಿ, “ಕುಟುಂಬ ನಿರ್ವಹಣೆಗೆ ತೊಂದರೆ ಇರುವ ಮಹಿಳೆಯರಿಗೆ ಸಹಾಯ ಮಾಡಿದರೆ, ಒಬ್ಬ ಆರ್ಥಿಕವಾಗಿ ಅನುಕೂಲವಿರುವ ಪ್ರಜೆ, ಅರ್ಹ ಇನ್ನೊಬ್ಬ ವ್ಯಕ್ತಿಗೆ ಉದ್ಯೋಗ ದೊರಕುವಂತೆ ಮಾಡಿದರೆ ಅದೇ ಪುಣ್ಯದ ಕಾರ್ಯ” ಎಂದು ತಿಳಿಸಿ ವಿಚಾರ ಸಂಕಿರಣದಲ್ಲಿ ಭಾಗವಹಿಸಿದವರಿಗೆ ವಂದನೆ ಸಲ್ಲಿಸಿದರು.