ವರದಿ: ಶಬ್ಬೀರ್ ಅಹಮ್ಮದ್, ಶ್ರೀನಿವಾಸಪುರ
ಶ್ರೀನಿವಾಸಪುರ: ರೈತರ ಆರ್ಥಿಕ ಅಭಿವೃದ್ಧಿಯಲ್ಲಿ ಸಾವಯವ ಕೃಷಿ ಮಹತ್ವದ ಪಾತ್ರ ವಹಿಸಿದೆ ಎಂದು ರಾಷ್ಟ್ರೀಯ ಕೃಷಿ ತಜ್ಞ ವಿಜಯ ಕಾಡೇಪುರಿ ಹೇಳಿದರು.
ಪಟ್ಟಣದ ಹೊರ ವಲಯದ ಪುಂಗನೂರು ಕ್ರಾಸ್ ಸಮೀಪ ಸೀತಾ ರಾಮ ಕಲ್ಯಾಣ ಮಂಟಪದಲ್ಲಿ ಧನ್ವಂತರಿ ಲೋಕಸಿರಿ ಸಂಸ್ಥೆ ವತಿಯಿಂದ ಮಂಗಳವಾರ ಏರ್ಪಡಿಸಿದ್ದ ಸುಗ್ಗಿ ಹಬ್ಬ ಹಾಗೂ ಸಾವಯವ ಕೃಷಿ ಅರಿವು ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ಬದಲಾದ ಪರಿಸ್ಥಿತಿಯಲ್ಲಿ ಮಣ್ಣಿನ ಆರೋಗ್ಯ ರಕ್ಷಣೆ ಮಹತ್ವ ಪಡೆದುಕೊಂಡಿದೆ. ರಾಸಾಯನಿಕ ಗೊಬ್ಬರಗಳ ಬಳಕೆಯಿಂದ ಮಣ್ಣು ತನ್ನ ನಿಜವಾದ ಶಕ್ತಿಯನ್ನು ಕಳೆದುಕೊಂಡಿದೆ ಎಂದು ಹೇಳಿದರು.
ಧನ್ವಂತರಿ ಲೋಕಸಿರಿ ಸಂಸ್ಥೆ ಸಾವಯವ ಕೃಷಿಯನ್ನು ಪ್ರೋತ್ಸಾಹಿಸುತ್ತದೆ. ರೈತರಿಗೆ ರಿಯಾಯಿತಿ ದರದಲ್ಲಿ ಕೃಷಿಗೆ ಅಗತ್ಯವಾದ ಸಾವಯವ ಪದಾರ್ಥಗಳನ್ನು ಒದಗಿಸುತ್ತದೆ. ರೈತರು ಸಂಸ್ಥೆಯ ಮಾರ್ಗದರ್ಶನ ಹಾಗೂ ಪ್ರಯೋಜನ ಪಡೆದುಕೊಳ್ಳಬೇಕು. ಹೆಮ್ಮೆಯ ಸಾವಯವ ಕೃಷಿಕರಾಗಬೇಕು. ಜನಾರೋಗ್ಯ ರಕ್ಷಕರಾಗಬೇಕು. ತಮ್ಮ ಆರ್ಥಿಕ ಸ್ಥಿತಿಯನ್ನು ಉತ್ತಮಪಡಿಸಿಕೊಳ್ಳಬೇಕು ಎಂದು ಹೇಳಿದರು.
ಸಂಸ್ಥೆಯ ವ್ಯವಸ್ಥಾಪಕ ನಿರ್ದೇಶಕ ಎಚ್.ಎಸ್.ಲೋಕೇಶ್, ಬಾಬುರೆಡ್ಡಿ, ಜಿ.ಆರ್.ನಾರಾಯಣಸ್ವಾಮಿ, ಶ್ರೀನಾಥರೆಡ್ಡಿ, ಎಂ.ವಿ.ರವಿ, ಎಸ್.ಎಂ.ವೆಂಕಟೇಶ್, ಅಶೋಕ್ ಕುಮಾರ್, ಕೆ.ಎನ್.ಕೃಷ್ಣಪ್ಪ, ವೆಂಕಟೇಶಗೌಡ ಇದ್ದರು