ಕೋಲಾರ:- ಶಿಕ್ಷಣ ಇಲಾಖೆ ಆಯುಕ್ತರು ಹಠಕ್ಕೆ ಬಿದ್ದು ಇಂದು ನಡೆಸಲು ಮುಂದಾದ ಹೆಚ್ಚುವರಿ ಶಿಕ್ಷಕರ ಕೌನ್ಸಿಲಿಂಗ್ ಮುಂದೂಡಿಸುವಲ್ಲಿ ರಾಜ್ಯ ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ಷಡಕ್ಷರಿ ಯಶಸ್ವಿಯಾಗಿದ್ದು, ಕಡೆಗೂ ಕೌನ್ಸಿಲಿಂಗ್ಅನ್ನು ಮುಂದಿನ ಆದೇಶದವರೆಗೂ ಮುಂದೂಡುವಂತೆ ಶಿಕ್ಷಣ ಸಚಿವರೇ ಆದೇಶ ಹೊರಡಿಸಿದ್ದಾರೆ ಎಂದು ಜಿಲ್ಲಾ ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ಜಿ.ಸುರೇಶ್ಬಾಬು ತಿಳಿಸಿದ್ದಾರೆ.
ರಾಜ್ಯಾದ್ಯಂತ ಇಂದು ಆರಂಭವಾದ ಹೆಚ್ಚುವರಿ ಶಿಕ್ಷಕರ ಕೌನ್ಸಿಲಿಂಗ್ಗೆ ಸಂಬಂಧಿಸಿದಂತೆ ಹೆಚ್ಚುವರಿ ಶಿಕ್ಷಕರನ್ನು ಗುರುತಿಸುವಲ್ಲಿ ಅವೈಜ್ಞಾನಿಕ ಕ್ರಮ ಅನುಸರಿಸಲಾಗಿದೆ, ಶಾಲೆಗಳಲ್ಲಿನ ಮಕ್ಕಳ ಹಾಜರಾತಿ ಸಂಖ್ಯೆಯನ್ನು ಕಳೆದ ವರ್ಷದ ದಾಖಲೆಗಳಂತೆ ಪಡೆಯಲಾಗಿದ್ದು, ಅನೇಕ ಶಿಕ್ಷಕರಿಗೆ ಅನ್ಯಾಯವಾಗುತ್ತದೆ ಎಂಬ ಆತಂಕವಿದ್ದ ಹಿನ್ನಲೆಯಲ್ಲಿ ಕೌನ್ಸಿಲಿಂಗ್ ರದ್ದುಪಡಿಸಲು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹಾಗೂ ಶಿಕ್ಷಣ ಸಚಿವ ನಾಗೇಶ್ ಅವರಿಗೆ ಷಡಕ್ಷರಿ ಮನವಿ ಮಾಡಿದ್ದರು.
ಈ ನಡುವೆ ಸಭಾಪತಿ ಬಸವರಾಜಹೊರಟ್ಟಿಯವರೂ ಸಹಾ ಶಿಕ್ಷಣ ಇಲಾಖೆ ಅಧಿಕಾರಿಗಳೊಂದಿಗೆ ಸಭೆ ನಡೆಸಿದ್ದರು. ಜತೆಗೆ ರಾಜ್ಯ ಸರ್ಕಾರಿ ನೌಕರರ ಸಂಘ ನಿರಂತರವಾಗಿ ಶಿಕ್ಷಣ ಸಚಿವರೊಂದಿಗೆ ಸಂಪರ್ಕದಲ್ಲಿದ್ದು, ಷಡಕ್ಷರಿ ಅವರು ಇಂದು ಮುಖ್ಯಮಂತ್ರಿಗಳ ಗಮನಕ್ಕೂ ತಂದಿದ್ದರು ಎಂದು ತಿಳಿಸಿದ್ದಾರೆ.
ಈ ನಡುವೆ ಹೊಂದಾಣಿಕೆ, ಮುಂಬಡ್ತಿಯಲ್ಲಿನ ಗೊಂದಲಗಳೆಲ್ಲವನ್ನು ಸರಿಪಡಿಸಿದ ನಂತರ ಕೌನ್ಸಿಲಿಂಗ್ ಪ್ರಕ್ರಿಯೆ ಆರಂಭಿಸುವಂತೆ ರಾಜ್ಯ ನೌಕರರ ಸಂಘದ ಅಧ್ಯಕ್ಷರು ಶಿಕ್ಷಣ ಸಚಿವರಿಗೆ ಮನವಿ ಮಾಡಿದ್ದಾರೆ.
ವಿರೋಧದ ನಡುವೆ
ಶಿಕ್ಷಕರ ಕೌನ್ಸಿಲಿಂಗ್
ಶಿಕ್ಷಕರು ಮತ್ತು ಸಂಘಟನೆಗಳ ತೀವ್ರ ವಿರೋಧದ ನಡುವೆಯೂ ಇಂದು ರಾಜ್ಯದ ಎಲ್ಲಾ ಡಿಡಿಪಿಐ ಕಚೇರಿಗಳಲ್ಲಿ ಹೆಚ್ಚುವರಿ ಶಿಕ್ಷಕರ ಕೌನ್ಸಿಲಿಂಗ್ ಆರಂಭಗೊಂಡಿತಾದರೂ, ಮಧ್ಯಾಹ್ನದ ವೇಳೆಗೆ ಶಿಕ್ಷಣ ಸಚಿವರ ಸೂಚನೆಯಂತೆ ಮುಂದಿನ ಆದೇಶದವರೆಗೂ ರದ್ದುಗೊಳಿಸಲು ಶಿಕ್ಷಣ ಇಲಾಖೆ ಆದೇಶ ಹೊರಡಿಸಿತು.
ಶಿಕ್ಷಣ ಇಲಾಖೆ ಆಯುಕ್ತರು ಶಿಕ್ಷಕ ಸಂಘಟನೆಗಳ ಯಾವ ಒತ್ತಾಯವನ್ನೂ ಪರಿಗಣಿಸದೇ ಜ.24 ರಂದು ಹೆಚ್ಚುವರಿ ಶಿಕ್ಷಕರ ಸ್ಥಳ ನಿಯುಕ್ತಿಕೌನ್ಸಿಲಿಂಗ್ಸೂಚಿಸಿದ್ದರ ಹಿನ್ನಲೆಯಲ್ಲಿ ಕೋಲಾರ ಸೇರಿದಂತೆ ರಾಜ್ಯದ ಎಲ್ಲಾ ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ ಕಚೇರಿಗಳ ಮುಂದೆ ಶಿಕ್ಷಕರು ಹೆಚ್ಚಿನ ಸಂಖ್ಯೆಯಲ್ಲಿ ಜಮಾಯಿಸಿದ್ದರು.
ಫೆಬ್ರವರಿ 28ಕ್ಕೆ ನಿವೃತ್ತಿಯಾಗುವ ಶಿಕ್ಷಕರನ್ನೂ ಸಹಾ ಹೆಚ್ಚುವರಿ ಎಂದು ಪರಿಗಣಿಸಿ ಸ್ಥಳ ನಿಯುಕ್ತಿ ಕೌನ್ಸಿಲಿಂಗ್ಗೆ ಕರೆದಿದ್ದು, ಅಮಾನವೀಯ ವರ್ತನೆ ಎಂದೇ ಆರೋಪಿಸಲಾಗಿತ್ತು ಜತೆಗೆ ಕಳೆದ ವರ್ಷ ಮಕ್ಕಳ ಹಾಜರಾತಿಯನ್ನು ಪರಿಗಣಿಸಿ ಇದೀಗ ಹೆಚ್ಚುವರಿ ಎಂದು ಪರಿಗಣಿಸಿರುವ ಇಲಾಖೆಯ ನೀತಿಯೂ ಟೀಕೆಗೆ ಒಳಗಾಗಿತ್ತು.
ಕೌನ್ಸಿಲಿಂಗ್ ರದ್ದು
ಶಿಕ್ಷಕರ ಹರ್ಷ
ಬೆಳಗ್ಗೆ ಆರಂಭದಲ್ಲಿ ಪ್ರಾಥಮಿಕ ಶಾಲಾ ಮುಖ್ಯಶಿಕ್ಷಕರ ಹೆಚ್ಚುವರಿ ಕೌನ್ಸಿಲಿಂಗ್ ನಡೆದಿದ್ದು, ಅದನ್ನೂ ರದ್ದುಗೊಳಿಸಲು ಈಗ ಆದೇಶಿಸಲಾಗಿದೆ, ಒಟ್ಟಾರೆ ಸ್ಥಳ ನಿಯುಕ್ತಿಗಾಗಿ ಆತಂಕದಿಂದ ಕಾಯುತ್ತಿದ್ದ ಶಿಕ್ಷಕರು ಕೌನ್ಸಿಲಿಂಗ್ ರದ್ದಾದ ಸುದ್ದಿ ಹೊರ ಬೀಳುತ್ತಿದ್ದಂತೆ ಹರ್ಷ ವ್ಯಕ್ತಪಡಿಸಿದರು.
ಇನ್ನಾದರೂ ಗೊಂದಲಗಳನ್ನು ಸರಿಪಡಿಸಿ ನಂತರ ಸ್ಥಳ ನಿಯುಕ್ತಿಕೌನ್ಸಿಲಿಂಗ್ ನಡೆಸಲಿ ಎಂದು ಅನೇಕ ಶಿಕ್ಷಕರು,ಶಿಕ್ಷಕ ಮುಖಂಡರು ಒತ್ತಾಯಿಸಿದರು.
ಇಂದಿನ ಕೌನ್ಸಿಲಿಂಗ್ ನೇತೃತ್ವವನ್ನು ಡಿಡಿಪಿಐಕೃಷ್ಣಮೂರ್ತಿ, ಶಿಕ್ಷಣಾಧಿಕಾರಿ ಸಿ.ಆರ್.ಅಶೋಕ್,ಬಿಇಒಗಳಾದ ಕನ್ನಯ್ಯ, ಉಮಾದೇವಿ, ಗಂಗರಾಮಯ್ಯ,ಚಂದ್ರಕಲಾ, ಚಂದ್ರಶೇಖರ್, ಸುಕನ್ಯಾ, ವಿಷಯ ಪರಿವೀಕ್ಷಕರಾದ ಶಶಿವಧನ, ಶಂಕರೇಗೌಡ, ಗಾಯತ್ರಿ,ವೆಂಕಟೇಶಪ್ಪ, ಕಚೇರಿ ಅಧೀಕ್ಷಕರಾದ ಗೋವಿಂದಗೌಡ, ಮಂಜುನಾಥರೆಡ್ಡಿ ಇಲಾಖೆಯ ಲಕ್ಷ್ಮಣ್, ಚಿರಂಜೀವಿ,,ವೇಣು ಮತ್ತಿತರರು ವಹಿಸಿದ್ದರು.