ಉಡುಪಿ ಧರ್ಮಪ್ರಾಂತ್ಯದ ಪಾಲನಾ ಕೇಂದ್ರ ʼಅನುಗ್ರಹʼ ಉದ್ಘಾಟನೆ

JANANUDI.COM NETWORK

ಉಡುಪಿ, ಜ.13: ಉಡುಪಿ ಧರ್ಮಪ್ರಾಂತ್ಯದ ಮಹತ್ವಾಕಾಂಕ್ಷಿ ಯೋಜನೆಯಾದ ಪಾಲನಾ ಕೇಂದ್ರ ಅನುಗ್ರಹ ಇದರ ಉದ್ಘಾಟನೆ ಮತ್ತು ಆಶೀರ್ವಚನ ಸಮಾರಂಭ ಗುರುವಾರ ಅಂಬಾಗಿಲು ಸಮೀಪದ ಕಕ್ಕುಂಜೆ ಬಳಿ ನೆರವೇರಿತು.
ಎಜುಕೇರ್‌ ಸಂಸ್ಥೆಯ ಆಧ್ಯಾತ್ಮಿಕ ನಿರ್ದೇಶಕರು, ಉಡುಪಿ ಜಿಲ್ಲೆಯ ಹಿಂದಿನ ಎಪಿಸ್ಕೋಪಲ್‌ ವಿಕಾರ್‌ ಆಗಿರುವ ವಂ|ಡಾ| ವಲೇರಿಯನ್‌ ಡಿʼಸೋಜಾ ಅವರು ಪಾಲನಾ ಕೇಂದ್ರವನ್ನು ಉದ್ಘಾಟಿಸಿದರು. ಬೆಂಗಳೂರು ಮಹಾಧರ್ಮಾಧ್ಯಕ್ಷ ವಂ|ಡಾ|ಪೀಟರ್‌ ಮಚಾದೊ ಪಾಲನಾ ಕೇಂದ್ರದ ಆಶೀರ್ವಚವನ್ನು ನೆರವೇರಿಸಿದರು.
ಈ ವೇಳೆ ಉಪಸ್ಥಿತರಿದ್ದ ಉಡುಪಿ ಶಾಸಕ ರಘುಪತಿ ಭಟ್‌ ಮಾತನಾಡಿ, ಉಡುಪಿ ಧರ್ಮಪ್ರಾಂತ್ಯದ ಉಗಮವಾಗಿ ನೂತನ ಧರ್ಮಾಧ್ಯಕ್ಷರನ್ನು ಸ್ವಾಗತಿಸುವ ವೇಳೆ ಹಾಗೂ ಇಂದು ಹತ್ತು ವರ್ಷಗಳ ಬಳಿಕ ಮತ್ತೆ ಪಾಲನಾ ಕೇಂದ್ರದ ಉದ್ಘಾಟನೆಯ ಸಮಯದಲ್ಲಿ ಕ್ಷೇತ್ರದ ಶಾಸಕನಾಗಿ ಎರಡೂ ಕಾರ್ಯಕ್ರಮದಲ್ಲಿ ಭಾಗವಹಿಸುವ ಅವಕಾಶ ಸಿಕ್ಕಿರುವುದು ನನ್ನ ಭಾಗ್ಯವಾಗಿದೆ. ಕಥೊಲಿಕ ಸಮುದಾಯ ಉಡುಪಿ ಹಾಗೂ ಮಂಗಳೂರು ಜಿಲ್ಲೆಗಳಲ್ಲಿ ಶಿಕ್ಷಣ ಮತ್ತು ಆರೋಗ್ಯಕ್ಕೆ ಹೆಚ್ಚಿನ ಒತ್ತು ನೀಡಿರುವುದು ಶ್ಲಾಘನಾರ್ಹವಾದ ಸಂಗತಿಯಾಗಿದೆ. ಹತ್ತು ವರ್ಷಗಳ ಕನಸಿನ ಯೋಜನೆಯಾದ ಪಾಲನಾ ಕೇಂದ್ರದ ಮೂಲಕ ಉಡುಪಿ ಜಿಲ್ಲೆಯಲ್ಲಿ ಇನ್ನೂ ಹೆಚ್ಚಿನ ಸೇವೆ ಸಮುದಾಯದ ಮೂಲಕ ಲಭಿಸಲಿ ಎಂದು ಶುಭ ಹಾರೈಸಿದರು.
ಈ ವೇಳೆ ಪಾಲನಾ ಕೇಂದ್ರಕ್ಕೆ ಅಗತ್ಯವಾದ ಎಲ್ಲಾ ರೀತಿಯ ಸಹಕಾರ ಮತ್ತು ಸರಕಾರಿ ವ್ಯವಸ್ಥೆಯಲ್ಲಿ ಆಗಬೇಕಾದ ಕೆಲಸಗಳನ್ನು ತ್ವರಿಗತಿಯಲ್ಲಿ ಪೊರೈಸಲು ಸಹಕಾರ ನೀಡಿದ ಶಾಸಕ ರಘುಪತಿ ಭಟ್‌ ಅವರನ್ನು ಉಡುಪಿ ಧರ್ಮಾಧ್ಯಕ್ಷರಾದ ವಂ|ಡಾ|ಜೆರಾಲ್ಡ್‌ ಐಸಾಕ್‌ ಲೋಬೊ ಅವರು ಸನ್ಮಾನಿಸಿದರು.
ಆಶೀರ್ವಚನ ಕಾರ್ಯಕ್ರಮದ ಬಳಿಕ ನಡೆದ ಸಭಾ ಕಾರ್ಯಕ್ರಮದ ಅಧ್ಯಕ್ಷತೆಯನ್ನು ಬೆಂಗಳೂರು ಮಹಾಧರ್ಮಾಧ್ಯಕ್ಷ ವಂ|ಡಾ|ಪೀಟರ್‌ ಮಚಾದೊ ವಹಿಸಿದ್ದರು.
ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಆಗಮಿಸಿದ ಭೋಪಾಲ್‌ ಧರ್ಮಪ್ರಾಂತ್ಯದ ನಿವೃತ್ತ ಮಹಾಧರ್ಮಾಧ್ಯಕ್ಷರಾದ ವಂ|ಡಾ| ಲಿಯೋ ಕರ್ನೆಲಿಯೋ ಅವರು ಮಾತನಾಡಿ ಅನುಗ್ರಹ ಪಾಲನಾ ಕೇಂದ್ರ ಸಂತೆಕಟ್ಟೆ ಪರಿಸರದ ಕಕ್ಕುಂಜೆ ವಾರ್ಡಿಗೆ ಒಂದು ದೇವರು ನೀಡಿದ ವರದಂತೆ ಭಾಸವಾಗುತ್ತಿದೆ. ಇಂದಿನಿಂದ ಕಕ್ಕುಂಜೆ ವಾರ್ಡ್‌ ಜಗತ್ತಿನ ಭೂಪಟದಲ್ಲಿ ಗುರುತಿಸುವಂತಹ ಒಂದು ಸುಂದರವಾದ ಪಾಲನಾ ಕೇಂದ್ರವನ್ನು ಹೊಂದಿರುವುದು ನಿಜವಾಗಿಯೂ ಸಂತೋಷದ ವಿಚಾರವಾಗಿದೆ. ಉಡುಪಿ ಧರ್ಮಪ್ರಾಂತ್ಯದಲ್ಲಿ ಕಳೆದ ಹತ್ತು ವರ್ಷಗಳಲ್ಲಿ ಅತ್ಯುತ್ತಮವಾದ ಪ್ರಗತಿಯಾಗಿದ್ದು ಇದಕ್ಕೆ ಧರ್ಮಪ್ರಾಂತ್ಯದ ಧರ್ಮಗುರುಗಳು, ಧರ್ಮಭಗಿನಿಯರು ಮತ್ತು ಜನತೆಯ ಸಹಕಾರ ಕಾರಣವಾಗಿದ್ದು ಇನ್ನಷ್ಟು ಪ್ರಗತಿ ಹೊಂದಲಿ ಎಂದು ಶುಭಹಾರೈಸಿದರು.
ಇದೇ ವೇಳೆ ಮುಖ್ಯ ಅತಿಥಿಗಳಾಗಿ ಆಗಮಿಸಿದ ಮಾಜಿ ಸಚಿವ ವಿನಯ್‌ ಕುಮಾರ್‌ ಸೊರಕೆ ಮಾತನಾಡಿ ಉಡುಪಿ ಧರ್ಮಪ್ರಾಂತ್ಯದ ಧರ್ಮಾಧ್ಯಕ್ಷರ ಕನಸು ಇಂದು ಪಾಲನಾ ಕೇಂದ್ರ ಉದ್ಘಾಟನೆಯಾಗುವುದರೊಂದಿಗೆ ನನಸಾಗಿದೆ. ಕ್ರೈಸ್ತ ಸಮುದಾಯ ವಿಶ್ವಕ್ಕೆ ನೀಡಿದ ಸೇವೆ ಅಪಾರವಾಗಿದ್ದು, ವಿದ್ಯಾಕ್ಷೇತ್ರದ ಮೂಲಕ ಪ್ರತಿಯೊಬ್ಬ ವಿದ್ಯಾರ್ಥಿಗೆ ನೈತಿಕ ಶಿಕ್ಷಣವನ್ನು ನೀಡುವುದರ ಮೂಲಕ ದೇಶದ ಉತ್ತಮ ನಾಗರಿಕರನ್ನಾಗಿ ರೂಪಿತಗೊಳಿಸಿದ್ದಾರೆ. ಅಲ್ಲದೆ ಸೇವೆಯ ಮನೋಭಾವನ್ನು ಮೂಡಿಸುವ ಆಸ್ಪತ್ರೆಗಳು ಇಂದು ಕ್ರೈಸ್ತ ಸಮುದಾಯದ ಸೇವೆಗೆ ಇರುವ ನೈಜ ಉದಾಹರಣೆಗಳಾಗಿವೆ. ಕೇವಲ 2% ಜನಸಂಖ್ಯೆಯನ್ನು ಹೊಂದಿರುವ ಕ್ರೈಸ್ತ ಸಮುದಾಯ ದೇಶಕ್ಕೆ 20% ಸೇವೆಯ ಕೊಡುಗೆಯನ್ನು ನೀಡುತ್ತಿರುವುದು ಯಾರೂ ಕೂಡ ಮರೆಯುವಂತಿಲ್ಲ ಎಂದರು.
ಕಾರ್ಯಕ್ರಮದಲ್ಲಿ ಮಾತನಾಡಿದ ಉಡುಪಿ ಧರ್ಮಪ್ರಾಂತ್ಯದ ಧರ್ಮಾಧ್ಯಕ್ಷರಾದ ವಂ|ಜೆರಾಲ್ಡ್‌ ಐಸಾಕ್‌ ಲೋಬೊ ಉದ್ಘಾಟನೆಗೊಂಡಿರುವ ಅನುಗ್ರಹ ಪಾಲನಾ ಕೇಂದ್ರ ಸಮುದಾಯದ ಸರ್ವತೋಮುಖ ಚಟುವಟಿಕೆಗಳಿಗೆ ಸಹಕಾರಿಯಾಗುವ ಶಕ್ತಿಕೇಂದ್ರವಾಗಿದೆ. ನಾಲ್ಕು ವರ್ಷಗಳ ಸತತ ಪ್ರಯತ್ನ, ಹಲವಾರು ಎಡರುತೊಡರುಗಳನ್ನು ಮೀರಿ ಭವ್ಯವಾದ ಪಾಲನಾ ಕೇಂದ್ರ ನಿರ್ಮಾಣವಾಗಿದ್ದು ಇದಕ್ಕೆ ಸಹಕಾರ ನೀಡಿದ ಸರ್ವರಿಗೂ ಧರ್ಮಾಧ್ಯಕ್ಷರು ಧನ್ಯವಾದವಿತ್ತರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದ ಬೆಂಗಳೂರು ಮಹಾಧರ್ಮಾಧ್ಯಕ್ಷ ವಂ|ಡಾ|ಪೀಟರ್‌ ಮಚಾದೊ ಮಾತನಾಡಿ ಪಾಲನಾ ಕೇಂದ್ರವನ್ನು ಉದ್ಘಾಟಿಸಿರುವುದು ನನಗೆ ಅತೀವ ಸಂತಸವನ್ನು ತಂದಿದ್ದು, ಕರ್ನಾಟಕದ 14 ಧರ್ಮಪ್ರಾಂತ್ಯಗಳಲ್ಲಿ ಉಡುಪಿ ಧರ್ಮಪ್ರಾಂತ್ಯ ತನ್ನ ಅತ್ಯುತ್ತಮವಾದ ಸೇವೆಯ ಮೂಲಕ ಇಡೀ ರಾಜ್ಯ ಹಾಗೂ ದೇಶಕ್ಕೆ ಒಂದು ಮಾದರಿ ಧರ್ಮಪ್ರಾಂತ್ಯವಾಗಿ ಮೂಡಿ ಬಂದಿದೆ. ಕಳೆದ ಹತ್ತು ವರ್ಷಗಳ ಅವಧಿಯಲ್ಲಿ ಧರ್ಮಪ್ರಾಂತ್ಯದಲ್ಲಿ ಸಮುದಾಯದ ಸರ್ವತೋಮುಖ ಬೆಳವಣಿಗೆಗೆ ಧರ್ಮಾಧ್ಯಕ್ಷರಾದ ಅತಿ ವಂ ಜೆರಾಲ್ಡ್‌ ಐಸಾಕ್‌ ಲೋಬೊ ಕಾರಣೀಕರ್ತರಾಗಿದ್ದಾರೆ. ತಮ್ಮ ವಿಶೇಷ ಕೌಶಲ್ಯ ಮತ್ತು ಚಿಂತನೆಯಿಂದ ವಿವಿಧ ರೀತಿಯ ಸುಧಾರಣೆಗಳನ್ನು ತಂದಿದ್ದು ಇದು ಇತರ ಧರ್ಮಪ್ರಾಂತ್ಯಗಳಿಗೂ ಮಾದರಿ ಆಗಿದೆ. ಧರ್ಮಾಧ್ಯಕ್ಷರಾದ ಅತಿ ವಂ ಜೆರಾಲ್ಡ್‌ ಐಸಾಕ್‌ ಲೋಬೊ ಅವರು ಒರ್ವ ದೂರದೃಷ್ಟಿಯನ್ನು ಹೊಂದಿದವರಾಗಿದ್ದು ಅದರ ಪ್ರತಿಫಲವೆಂಬಂತೆ ಅನುಗ್ರಹ ಕಟ್ಟಡ ನಿರ್ಮಾಣಗೊಂಡಿದೆ. ಅಧ್ಯಾತ್ಮಿಕವಾಗಿ, ಸಾಮಾಜಿಕವಾಗಿ ಧರ್ಮಾಧ್ಯಕ್ಷರಾದ ಅತಿ ವಂ ಜೆರಾಲ್ಡ್‌ ಐಸಾಕ್‌ ಲೋಬೊ ಅವರ ದೂರದೃಷ್ಟಿತ್ವ ಇಡೀ ದೇಶದ ಧರ್ಮಪ್ರಾಂತ್ಯಗಳಿಗೆ ಮಾದರಿಯಾಗಿದೆ ಎಂದರು.
ಕಾರ್ಯಕ್ರಮದಲ್ಲಿ ಪಾಲನಾ ಕೇಂದ್ರಕ್ಕೆ ಸ್ಥಳದಾನ ನೀಡಿದ, ಆರ್ಥಿಕ ಸಹಾಯ ನೀಡಿದ ದಾನಿಗಳಿಗೆ, ಕಟ್ಟಡ ನಿರ್ಮಾಣ ಕಾರ್ಯದಲ್ಲಿ ಕೈಜೋಡಿಸಿದ ಎಂಜಿನಿಯರ್‌, ಕಂಟ್ರಾಕ್ಟರ್‌, ಆರ್ಕಿಟೆಕ್ಟ್‌ ಹಾಗೂ ಇತರರಿಗೆ ಧರ್ಮಪ್ರಾಂತ್ಯದ ವತಿಯಿಂದ ಗೌರವಿಸಲಾಯಿತು. ವಂ|ಡೆನಿಸ್‌ ಡೆಸಾ, ವಂ|ಅನಿಲ್‌ ಪ್ರಕಾಶ್‌ ಡಿಸಿಲ್ವಾ, ವಂ|ಸ್ಟೀವನ್‌ ಡಿʼಸೋಜಾ ಸನ್ಮಾನಿತರ ವಿವರವನ್ನು ನೀಡಿದರು. ಧರ್ಮಪ್ರಾಂತ್ಯದ ವತಿಯಿಂದ ಧರ್ಮಾಧ್ಯಕ್ಷ ವಂ|ಡಾ|ಜೆರಾಲ್ಡ್‌ ಐಸಾಕ್‌ ಲೋಬೊ ಅವರಿಗೆ ಧರ್ಮಪ್ರಾಂತ್ಯದ ಪಾಲನಾ ಸಮಿತಿಯ ಕಾರ್ಯದರ್ಶಿ ಲೆಸ್ಲಿ ಅರೋಜಾ ಮತ್ತು ಹಿಂದಿನ ಕಾರ್ಯದರ್ಶಿ ಅಲ್ಫೋನ್ಸ್‌ ಡಿʼಕೋಸ್ತಾ ಗೌರವಿಸಿದರು.
ಕಾರ್ಯಕ್ರಮದಲ್ಲಿ ಉದ್ಯಮಿ ಜೆರ್ರಿ ವಿನ್ಸೆಂಟ್‌ ಡಾಯಸ್‌, ಸ್ಥಳೀಯ ಕಕ್ಕುಂಜೆ ವಾರ್ಡಿನ ನಗರಸಭಾ ಸದಸ್ಯ ಹಾಗೂ ಸ್ಥಾಯಿ ಸಮಿತಿ ಅಧ್ಯಕ್ಷ ಬಾಲಕೃಷ್ಣ ಶೆಟ್ಟಿ, ಕಲ್ಯಾಣಪುರ ಮಿಲಾಗ್ರಿಸ್‌ ಕೆಥೆಡ್ರಲ್‌ ರೆಕ್ಟರ್‌ ವಂ|ವಲೇರಿಯನ್‌ ಮೆಂಡೊನ್ಸಾ, ಸಂತೆಕಟ್ಟೆ ಮೌಂಟ್‌ ರೋಜರಿ ಚರ್ಚಿನ ಧರ್ಮಗುರು ವಂ|ಡಾ|ಲೆಸ್ಲಿಸ ಡಿʼಸೋಜಾ ಉಪಸ್ಥಿತರಿದ್ದರು.
ಧರ್ಮಪ್ರಾಂತ್ಯ ಎಸ್ಟೇಟ್‌ ಮ್ಯಾನೇಜರ್‌ ವಂ|ರೋಮಿಯೋ ಲೂವಿಸ್‌ ಅವರು ಪಾಲನಾ ಕೇಂದ್ರದ ರಚನೆಯ ಕುರಿತು ಪ್ರಾಸ್ತಾವಿಕವಾಗಿ ಮಾತನಾಡಿದರು. ಧರ್ಮಪ್ರಾಂತ್ಯದ ಕುಲಪತಿ ವಂ|ಸ್ಟ್ಯಾನಿ ಬಿ ಲೋಬೊ ಸ್ವಾಗತಿಸಿ, ಉಜ್ವಾಡ್‌ ಪತ್ರಿಕೆಯ ಸಂಪಾದಕರಾದ ವಂ|ರೋಯ್ಸನ್‌ ಫೆರ್ನಾಂಡಿಸ್‌ ವಂದಿಸಿದರು. ಧರ್ಮಪ್ರಾಂತ್ಯದ ಪಾಲನಾ ಸಮಿತಿಯ ಕಾರ್ಯದರ್ಶಿ ಲೆಸ್ಲಿ ಅರೋಜಾ ಕಾರ್ಯಕ್ರಮ ನಿರೂಪಿಸಿದರು.