ಕೋಲಾರ,ಡಿ.19:ಪ್ರಧಾನಮಂತ್ರಿ ವಿಶ್ವಕರ್ಮ ಕೌಶಲ್ಯ ಅಭಿವೃದ್ಧಿ ಯೋಜನೆಯಡಿ ಒಂದು ವಾರದ ಟೈಲರಿಂಗ್ ಮೂಲ ತರಬೇತಿ ಶಿಬಿರ ನಗರದ ಎ.ಟಿ.ಡಿ.ಸಿ ಕೇಂದ್ರದಲ್ಲಿ ಚಾಲನೆಗೊಂಡಿತು.
ವಿಶ್ವಕರ್ಮ ಯೋಜನೆಯಡಿ ನೊಂದಾಯಿಸಲ್ಪಟ್ಟವರ ಪೈಕಿ ಮೊದಲ ಬಾರಿಗೆ 30 ಮಂದಿ ಅರ್ಹ ಅಭ್ಯರ್ಥಿಗಳಿಗೆ ಒಂದು ವಾರ ಕಾಲದಲ್ಲಿ ದಿನಕ್ಕೆ 8 ತಾಸು ತರಬೇತಿ ಇದಾಗಿದ್ದು, ಇದರಲ್ಲಿ ಬಟ್ಟೆ ಹೊಲೆಯುವ ಹೊಸ ವಿಧಾನ-ವಿನ್ಯಾಸ, ಉಪಕರಣಗಳ ಬಳಕೆ, ಡಿಜಿಟಲ್ ಆರ್ಥಿಕ ವ್ಯವಹಾರ, ಬ್ಯಾಂಕಿಂಗ್, ಸಾಮಾಜಿಕ ಜಾಲ, ಇತ್ಯಾದಿ ಕುರಿತು ವಿವಿಧ ಹಂತದ ತರಬೇತಿ ಇದಾಗಿರುತ್ತದೆ.
ದಿನಕ್ಕೆ 500 ರೂನಂತೆ ಶಿಷ್ಯ ವೇತನದೊಂದಿಗೆ 1 ಸಾವಿರ ರೂ ಪ್ರಯಾಣಭತ್ಯೆ ಸೇರಿ ಒಟ್ಟು 4000 ರೂ ತರಬೇತಿ ವೆಚ್ಚವನ್ನು ಅಭ್ಯರ್ಥಿಗಳ ಬ್ಯಾಂಕ್ ಅಕೌಂಟ್ಗೆ ಜಮೆ ಮಾಡಲಾಗುವುದು. ವಾರ ಪೂರ್ತಿ ಬೆಳಗಿನ ಪ್ರಾರಂಭ ಮತ್ತು ಸಂಜೆಯ ಮುಗಿಯುವ ಅವಧಿಯಲ್ಲಿ ಪಿಂಗರ್ ಪ್ರಿಂಟ್ ಹಾಜರಾತಿ ಕಡ್ಡಾಯವಾಗಿದ್ದು, ಅಂತಹವರಿಗೆ ಮಾತ್ರ ಅಂಗೀಕೃತ ಸರ್ಟಿಫಿಕೇಟ್ ಹಾಗೂ ಇತರೆ ಸೌಲಭ್ಯ ಸಿಗಲಿದೆ.
ಈ ಮೂಲ ತರಬೇತಿಯ ಪ್ರಮಾಣಪತ್ರ ಪಡೆದವರಿಗೆ 1 ಲಕ್ಷ ರೂ ಸಾಲ ಸೌಲಭ್ಯ ಪಡೆಯಲು ಅರ್ಹರಾಗಿದ್ದು, ಮೂಲ ತರಬೇತಿ ಪೂರೈಸಿದವರಿಗೆ ಮುಂದಿನ ದಿನಗಳಲ್ಲಿ ಅಡ್ವಾನ್ಸ್ಡ್ ತರಬೇತಿಗೆ ಅರ್ಹರಾಗಿರುತ್ತಾರೆ.
ರಾಷ್ಟ್ರೀಯ ಕೌಶಲ್ಯ ಅಭಿವೃದ್ಧಿ ನಿಗಮದ (ಎನ್.ಎಸ್.ಡಿ.ಸಿ) ಸೀನಿಯರ್ ಅನಾಲಸಿಸ್ ಆಫೀಸರ್ ಪ್ರಶಾಂತ್ ಬರೆಹಾಲ್ ಹಾಗೂ ಬೆಂಗಳೂರಿನ ಅಪೆರಲ್ ಟ್ರೈನಿಂಗ್ ಅಂಡ್ ಡಿಸೈನ್ ಸೆಂಟರ್(ಎ.ಟಿ.ಡಿ.ಸಿ) ರಿಜಿನಲ್ ಮ್ಯಾನೇಜರ್ ಎಸ್.ಪದ್ಮಾವತಿ ಅವರು ಯೋಜನೆ ಹಾಗೂ ತರಬೇತಿಯ ಬಗ್ಗೆ ಅಭ್ಯರ್ಥಿಗಳಿಗೆ ಸಂಪೂರ್ಣ ಮಾಹಿತಿಯನ್ನು ಒದಗಿಸಿದರು.
ಈ ಸಂದರ್ಭದಲ್ಲಿ ಬೆಂಗಳೂರು ಎ.ಟಿ.ಡಿ.ಸಿಯ ಸಹಾಯಕ ರಿಜಿನಲ್ ಮ್ಯಾನೇಜರ್ ಜಿ.ರಮೇಶ್, ಕೋಲಾರ ಎಟಿಡಿಸಿಯ ತರಬೇತುದಾರರಾದ ವೆಂಕಟೇಶಪ್ಪ, ವಂದನ ಮುಂತಾದವರು ಹಾಜರಿದ್ದರು.