ಶ್ರೀನಿವಾಸಪುರ : ದೇಶವನ್ನು ಕಾಡುತ್ತಿರುವ ಬಹುದೊಡ್ಡ ಸಮಸ್ಯೆಗಳಲ್ಲಿ ಒಂದು ನೀರಿನ ಸಮಸ್ಯೆ . ಅದರಲ್ಲೂ ಗ್ರಾಮೀಣ ಭಾಗದಲ್ಲಿ ಹಲವು ಕಡೆ ಶುದ್ಧವಾದ ಕುಡಿಯುವ ನೀರನ್ನು ಪಡೆಯುವದಕ್ಕೆ ಪರದಾಡುವಂತಹ ಪರಿಸ್ಥಿತಿ ಇದೆ. ಇಂತಹ ಸಮಸ್ಯೆಯಿಂದ ಜನರನ್ನು ಹೊರ ತರುವ ನಿಟ್ಟಿನಲ್ಲಿ ಸರ್ಕಾರ ಜಾರಿಗೆ ತಂದ ಮಹತ್ವಾಕಾಂಕ್ಷೆಯ ಯೋಜನೆಯೇ ಜಲ ಜೀವನ್ ಮಿಷನ್ ಯೋಜನೆ ಎಂದು ಶಾಸಕ ಜಿ.ಕೆ.ವೆಂಕಟಶಿವಾರೆಡ್ಡಿ ಹೇಳಿದರು.
ತಾಲೂಕಿನ ಯಲ್ದೂರು ಗ್ರಾಮದಲ್ಲಿ 264 ಲಕ್ಷ ವೆಚ್ಚದಲ್ಲಿ ಜಲ ಜೀವನ್ ಮಿಷನ್ ಯೋಜನೆ ಅಡಿಯಲ್ಲಿ ಮನೆ ಮನೆಗೆ ಗಂಗೆ ಕಾರ್ಯಕ್ರಮವನ್ನು ಗುರುವಾರ ಚಾಲನೆ ನೀಡಿ ಮಾತನಾಡಿದರು.
ನೀರಿನ ಮಾಲಿನ್ಯವನ್ನು ತಡೆಗಟ್ಟುವ ಕಡೆ ನಾವೆಲ್ಲರೂ ಗಮನಹರಿಸಬೇಕು. ಇಲ್ಲದಿದ್ದರೆ ಭೂಮಿಯ ಮೇಲೆ ಜೀವಿಗಳು ಬದುಕುಳಿಯುವುದು ಅಸಾಧ್ಯವಾಗುತ್ತದೆ. ನೀರಿನ ಅಭಾವವನ್ನು ತಡೆಗಟ್ಟಲು ಇರುವ ಒಂದೇ ಮಾರ್ಗವೆಂದರೆ ನೀರಿನ ಸಂರಕ್ಷಣೆ. ಲಭ್ಯವಿರುವ ನೀರನ್ನು ಜಾಗರೂಕತೆಯಿಂದ ಮತ್ತು ಮಿತವ್ಯಯದಿಂದ ಬಳಸಿ , ಮುಂದಿನ ಪೀಳಿಗೆಗೆ ನೀರನ್ನು ಉಳಿಸುವುದೇ ನೀರಿನ ಸಂರಕ್ಷಣೆ ಆದ್ದರಿಂದ ನಾವೆಲ್ಲರೂ ಸೇರಿ ನೀರ ಮೂಲಗಳನ್ನು ಸಂರಕ್ಷಣೆ ಮಾಡಬೇಕು ಎಂದರು.
ಕಾಮಗಾರಿಯನ್ನು ಗುಣಮಟ್ಟದಿಂದ ಮತ್ತು ವೇಗವಾಗಿ ಕೆಲಸ ಮಾಡಿ ಎಂದು ಗುತ್ತಿಗೆದಾರರಿಗೆ ಹಾಗು ಇದಕ್ಕೆ ಸಂಬಂದಪಟ್ಟ ಅಧಿಕಾರಿಗಳಿಗೆ ಸೂಚನೆ ನೀಡಿದ್ದೇನೆ. ಬೇಸಿಗೆ ಕಾಲದಲ್ಲಿ ಕುಡಿಯುವ ನೀರಿನ ಅಭಾವ ತಪ್ಪಿಸಲು ಜಲ ಜೀವನ್ ಮಿಷನ್ ಯೋಜನೆ ಅನುಕೂಲವಾಗಲಿದೆ ಎಂದು ತಿಳಿಸಿದರು.
ಇದೇ ಸಮಯದಲ್ಲಿ ತಾಲೂಕಿನ ನಂಬಿಹಳ್ಳಿ 111 .25 ಲಕ್ಷ, ಚಲ್ದಿಗಾನಹಳ್ಳಿ 124.50 ಲಕ್ಷ , ಗಾಂಡ್ಲಹಳ್ಳಿ 108 ಲಕ್ಷ, ಲಕ್ಷ್ಮೀಸಾಗರ 133ಲಕ್ಷ, ನಾರಾಯಣಪುರ 55.53 ಲಕ್ಷ ಜಲ ಜೀವನ್ ಮಿಷನ್ ಕಾಮಗಾರಿಗೆ ಚಾಲನೆ ನೀಡಿದರು.
ಜಿ.ಪಂ. ಮಾಜಿ ಸದಸ್ಯ ಇಂದಿರಾ ಭವನ್ ರಾಜಣ್ಣ, ತಾ.ಪಂ.ಮಾಜಿಸದಸ್ಯ ಗೊಟ್ಟಿಕುಂಟೆ ಕೃಷ್ಣಾರೆಡ್ಡಿ, ಮುಖಂಡರಾದ ಶೇಷಾಪುರ ಗೋಪಾಲ್, ಕಾಡುದೇವಂಡಹಳ್ಳಿ ರಾಮಂದ್ರೇಗೌಡ, ರಘು, ಷಾವಲ್ಲಿ, ಯಲ್ದೂರು ಮಣಿ, ಮಂಜುಲ ನಗರ ರಘು, ಆರ್ಐ ಜರ್ನಾಧನ್, ಪಿಡಿಒ ಮಂಜುನಾಥಸ್ವಾಮಿ, ಗುತ್ತಿಗೆದಾರರಾದ ಮೋಹನ್, ರವಿಕುಮಾರ್, ಇಂಜಿನೀಯರ್ ಶಿವಕುಮಾರ್ ಇದ್ದರು.