ದೀಪಾವಳಿಯ ಒಂದು ದಿನವನ್ನು ಬಲಿಪಾಡ್ಯಮಿ ಎಂದು ಬಲಿ ಚಕ್ರವರ್ತಿಯ ನೆನಪಿಗಾಗಿ ಆಚರಿಸಲಾಗುತ್ತದೆ:ಸತ್ಯನಾರಾಯಣಶಾಸ್ತ್ರಿ

ಶ್ರೀನಿವಾಸಪುರ 1 : ದೀಪಾವಳಿಯ ವೇಳೆ ಒಂದು ದಿನವನ್ನು ಬಲಿಪಾಡ್ಯಮಿ ಎಂದು ಬಲಿ ಚಕ್ರವರ್ತಿಯ ನೆನಪಿಗಾಗಿ ಆಚರಿಸಲಾಗುತ್ತದೆ ಎಂದು ಮೇಧಾ ಗುರು ಜ್ಯೋತಿರ್ವಿಜ್ಞಾನ ಕೇಂದ್ರದ ಸಂಸ್ಥಾಪಕ ವೆಲ್ಲಾಲ ಸತ್ಯನಾರಾಯಣಶಾಸ್ತ್ರಿ ತಿಳಿಸಿದರು.
ತಾಲೂಕಿನ ರಾಯಲ್ಪಾಡು ಗ್ರಾಮದಲ್ಲಿನ ಶ್ರೀ ಕಾಶೀವಿಶ್ವೇಶ್ವರ ದೇವಾಲಯದಲ್ಲಿ ಬುಧವಾರ ಬಲಿ ಪಾಡ್ಯಮಿ,ಬಲೀಂದ್ರ ಪೂಜಾ ಅಂಗವಾಗಿ ನಡೆದ ಗೋಪೂಜೆ ಕಾರ್ಯಕ್ರಮದಲ್ಲಿ ಮಾತನಾಡಿದರು.
ಈ ದಿನ ಲಕ್ಷ್ಮೀ ಪೂಜೆ, ಗೋಪೂಜೆ ಇವುಗಳನ್ನು ಮಾಡಲಾಗುವುದು ಯಾಕೆಂದರೆ, ಬಲಿ ಚಕ್ರವರ್ತಿಯ ಸಾಮ್ರಾಜ್ಯದಲ್ಲಿ ಗೋವುಗಳಿಗೆ ಅತಿಯಾದ ಮಹತ್ವ ನೀಡಲಾಗುತ್ತಿತ್ತು, ಅದಕ್ಕೆ ಪೂಜೆಗಳನ್ನು ಆರಾಧನೆಯನ್ನು ಮಾಡಲಾಗುತ್ತಿತ್ತು. ಅದರ ಸವಿನೆನಪಿಗಾಗಿ ಬಲಿಪಾಡ್ಯಮಿ ದಿವಸ ಗೋವಿಗಳಿಗೆ ಪೂಜೆ ಸಲ್ಲಿಸಲಾಗುತ್ತದೆ.
ಗೋವು ಐಶ್ವರ್ಯ ಮತ್ತು ಮೋಕ್ಷಕ್ಕೆ ಪ್ರತೀಕ . ಗೋವನ್ನು ಸವರುವುದರಿಂದ ಎಲ್ಲಾ ಪಾಪಕರ್ಮದಿಂದ ಮುಕ್ತಿ ಸಿಗುತ್ತದೆ ಗೋವಿನ ರಕ್ಷಣೆ ಕೊಡುವುದರಿಂದ , ಗೋಸೇವೆ ಮಾಡುವುದರಿಂದ ,ಗೋವುಗಳಿಗೆ ಹುಲ್ಲುನ್ನು ತಿನ್ನಿಸುವ್ಯದರಿಂದ,ಗೋಪೂಜೆ ಮಾಡುವುದರಿಂದ ಬಡತನ , ತಡ ವಿವಾಹ,ಆರೋಗ್ಯ ಸಮಸ್ಯೆ,ಶತ್ರುತ್ವ,ಪಿತೃ ಶಾಪ,ಶನಿ ದೋಷ ದೂರವಾಗುತ್ತದೆ ಹಾಗೂ ಹಿಂದಿನ ಜನ್ಮ ಮತ್ತು ಈ ಜನ್ಮದಲ್ಲಿ ಮಾಡಿದ ಪಾಪ ಕಾರ್ಯಗಳಿಗೆ ಪರಿಹಾರವಾಗುತ್ತದೆ ಎಂದು ಸ್ಕಂದಪುರಾಣ ಮತ್ತು ಕರ್ಮವಿಪಾಕದಲ್ಲಿ ಹೇಳಲಾಗಿದೆ ಎಂದರು.
ಗೋಪೂಜೆ ಮಾಡುವುದರಿಂದ ಸರ್ವಸಮೃದ್ಧಿಯುಂಟಾಗಿ , ದನಕರುಗಳ ವೃದ್ಧಿಯಾಗುವಂತೆ ಇದೇ ದಿನ ಧನಲಕ್ಷ್ಮಿ ಪೂಜೆಯ ಮೂಲಕ ಲಕ್ಷ್ಮಿಯನ್ನು ಒಲಿಸಿಕೊಳ್ಳಲಾಗುತ್ತದೆ. ಈ ರೀತಿ ಮಾಡುವುದರಿಂದ ಬಲಿ ಚಕ್ರವರ್ತಿಯ ರಾಜ್ಯದಲ್ಲಿದ್ದಂತೆ ಎಲ್ಲಾ ಸುಖೋಪಭೋಗಗಳು ದೊರೆಯುವುದು ಎಂಬ ನಂಬಿಕೆ ಜನರಲ್ಲಿದೆ ಎಂದು ಹೇಳಿದರು.
ಪ್ರಾಚೀನ ಕಾಲದಲ್ಲಿ ಪ್ರತಿ ಮನೆ-ಮನೆಯಲ್ಲಿಯೂ ಹಟ್ಟಿಯಲ್ಲಿ ಗೋಪೂಜೆ ನಡೆಯುತ್ತಿತ್ತು, ಇಂದೂ ಗೋವಿನ (ಸಂಕ್ರಾತಿ) ಹಬ್ಬದ ಸಮಯದಲ್ಲಿ ಭಾರತದಲ್ಲಿ ಗೋವಿನ ಪೂಜೆ ನಡೆಯುತ್ತಿದೆ ಅಷ್ಟೇ, ಆದರೆ ನಮ್ಮ ದೇಶಕ್ಕೆ ಹಿಂದಿನ ಮಹಿಮೆ ಮತ್ತು ಗೌರವ ಸಿಗಬೇಕಿದ್ದರೆ ನಾವು ಗೋವುಗಳನ್ನು ತಾಯಿಯಂತೆ ರಕ್ಷಿಸಿಬೇಕು.
ಹಾಗೂ ಇತ್ತೀಚಿಗೆ ಗೋವುಗಳನ್ನು ಬಾಧಿಸುತ್ತಿರುವ ಚರ್ಮದ ಗಂಟು ರೋಗದಿಂದಾಗಿ ಗೋವುಗಳು ರೋಗದಿಂದ ಬಳಲುತ್ತಿದ್ದು, ರೈತರು ರೋಗ ನಿರ್ಮೂಲನೆಗಾಗಿ ಪಶುಇಲಾಖೆಯು ಜಾರಿಗೆ ತಂದಿರುವ ಔಷದೋಪಚಾರವನ್ನು ಉಪಯೋಗಿಸುವಂತೆ ತಿಳಿಸಿದರು. ನಾವೆಲ್ಲೂರು ಸೇರಿ ರೋಗ ನಿರ್ಮೂಲನೆಗಾಗಿ ದೇವರನ್ನು ಪ್ರಾರ್ಥಿಸೋಣ ಎಂದು ಮನವಿ ಮಾಡಿದರು.
ಗ್ರಾಮದ ಗಂಗಮ್ಮ ಗುಡಿಯಲ್ಲಿ ಗೋ ಪೂಜೆ ನಡೆಯಿತು. ಮುಖಂಡರಾದ ಎಸ್.ಎನ್.ವೇಮನ್ನ, ಎಂ.ಎಸ್.ಮಹೇಶ್ , ರವಿ, ಯಂಡಗುಟ್ಟಪಲ್ಲಿ ನಾಗಾರ್ಜುನ, ಕಂದಾಯ ಇಲಾಖೆಯ ಗ್ರಾಮಸಹಾಯಕ ಆರ್.ವಿ.ಶ್ರೀರಾಮಪ್ಪ ಇದ್ದರು.