ವರದಿ:ಶಬ್ಬೀರ್ಅಹಮ್ಮದ್,ಶ್ರೀನಿವಾಸಪುರ
ಕೋಲಾರ:- ವ್ಯಾಜ್ಯವಿಲ್ಲದೆ ರಾಜಿ ಸಂಧಾನದ ಮೂಲಕ ವ್ಯಾಜ್ಯ ಇತ್ಯರ್ಥಗೊಳಿಸಿ ನ್ಯಾಯ ದೊರಕಿಸಿ ಕೊಡಲು ಸೆ.30 ರಂದು ಜಿಲ್ಲಾ ನ್ಯಾಯಾಲಯದ ಅವರಣದಲ್ಲಿ ಮೆಗಾ ಲೋಕ್ ಅದಾಲತ್ ಕ್ರಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ ಎಂದು ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶರಾದ ಕೆ.ಆರ್.ನಾಗರಾಜ್ ತಿಳಿಸಿದರು.
ವಕೀಲರ ಸಂಘದ ಸಭಾಂಗಣದಲ್ಲಿ ಸೋಮವಾರ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ, ವಕೀಲರ ಸಂಘದ ಸಂಯುಕ್ತ ಅಶ್ರಯದಲ್ಲಿ ಸೆ.30ರ ಮೆಘಾ ಅದಾಲತ್ನ ಪೂರ್ವಭಾವಿಯಾಗಿ ನಡೆದ ಮನವರಿಕಾ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡುತ್ತಿದ್ದರು.
ಸರ್ವರಿಗೂ ನ್ಯಾಯ ಎಂಬುದು ರಾಷ್ರೀಯ ಕಾನೂನು ಸೇವೆಗಳ ಪ್ರಾಧಿಕಾರದ ಧ್ಯೇಯವಾಗಿದ್ದು, ಜನ ಸಾಮಾನ್ಯರಿಗೆ ಅತೀ ತ್ವರಿತವಾಗಿ ಹಾಗೂ ಯಾವುದೇ ವ್ಯಾಜ್ಯವಿಲ್ಲದೇ ರಾಜೀ ಸಂಧಾನದ ಮೂಲಕ ನ್ಯಾಯ ಒದಗಿಸುವ ಸದುದ್ದೇಶ ಹೊಂದಲಾಗಿದೆ ಎಂದು ತಿಳಿಸಿದರು.
ಕೋಲಾರ ಜಿಲ್ಲೆಯಲ್ಲಿ ಸುಮಾರು 41000 ಪ್ರಕರಣಗಳು ಬಾಕಿ ಇದ್ದು ಇವುಗಳಲ್ಲಿ ರಾಜಿಯಾಗ ಬಹುದಾದ ಪ್ರಕರಣಗಳನ್ನು ಮೆಗಾ ಲೋಕ್ ಅದಾಲತ್ನಲ್ಲಿ ರಾಜಿ ಮಾಡಿಕೊಳ್ಳಲು ವಕೀಲರು ಹಾಗೂ ಕಕ್ಷಿಗಾರರು ಸಹಕರಿಸಬೇಕೆಂದು ಮನವಿ ಮಾಡಿದರು.
ಅದಾಲತ್ನಲ್ಲಿ ರಾಜೀ ಮೂಲಕ ಪ್ರಕರಣಗಳು ಇತ್ಯರ್ಥವಾದಲ್ಲಿ ಕಕ್ಷಿದಾರರಿಗೆ ಶೀಘ್ರ ನ್ಯಾಯ ಸಿಗುತ್ತದೆ, ಕೋರ್ಟ್ಗೆ ಅಲೆದಾಟ ತಪ್ಪುತ್ತದೆ, ಮಾನಸಿಕ ನೆಮ್ಮದಿಗೂ ಕಾರಣವಾಗುತ್ತದೆ ಮತ್ತು ಪ್ರಕರಣದಲ್ಲಿ ಎರಡೂ ಪಕ್ಷಗಳವರು ರಾಜೀಗೆ ಒಪ್ಪುವುದರಿಂದ ಗ್ರಾಮಗಳಲ್ಲಿ ಸುಮಧುರ ಸಂಬಂಧವೂ ಇರುತ್ತದೆ ಎಂದು ತಿಳಿಸಿದರು.
ಅಪರ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶರಾದ ಸಂತೋಷ್ ಗಜಾನನ್ ಭಟ್ ಮಾತನಾಡಿ, ಈ ಮೆಗಾ ಅದಾಲತ್ನಲ್ಲಿ ಎಲ್ಲಾ ರೀತಿಯ ರಾಜಿಯಾಗಬಹುದಾರ ವ್ಯಾಜ್ಯ ಪೂರ್ವ ಹಾಗೂ ಬಾಕಿ ಇರುವ ಪ್ರಕರಣಗಳನ್ನು ರಾಜಿ ಸಂಧಾನದ ಮೂಲಕ ಇತ್ಯರ್ಥ ಪಡಿಸಲಾಗುವುದು ಕಕ್ಷಿಗಾರರು ಹಾಗೂ ಸಾರ್ವಜನಿಕರು ಮೆಗಾ ಅದಾಲತ್ ಅನ್ನು ಸದುಪಯೋಗ ಪಡಿಸಿಕೊಂಡು ನ್ಯಾಯಲಯಕ್ಕೆ ಅನಾವಶ್ಯಕವಾಗಿ ಅಲೆದಾಟ ಮತ್ತು ಹಣ ಖರ್ಚು ಮಾಡುವ ಪ್ರಮೆಯ ಇರುವುದಿಲ್ಲವೆಂದು ತಿಳಿಸಿದರು.
ಕಾನೂನು ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿಗಳಾದ ಸಿ.ಹೆಚ್.ಗಂಗಾಧರ್, ಪ್ರತಿದಿನ ಜಿಲ್ಲೆಯ ಎಲ್ಲಾ ನ್ಯಾಯಾಲಯಗಳಲ್ಲಿ ಮೆಗಾ ಅದಾಲತ್ ಸಂಬಂಧಿಸಿದಂತೆ ಪೂರ್ವಬಾವಿ ಬೈಠಕ್ಗಳು ನಡೆಯಲಿದ್ದು ಜಿಲ್ಲೆಯಲ್ಲಿ ಸುಮಾರು 6000 ವಿವಧ ಪ್ರಕರಣಗಳ ಸದರಿ ಅದಾಲತ್ನಲ್ಲಿ ಇತ್ಯರ್ಥ ಪಡಿಸುವ ಉದ್ದೇಶವಿದೆ ತಿಳಿಸಿದರು.
ಅತಿ ಹೆಚ್ಚಿನ ಪ್ರಕರಣಗಳು ಜಿಲ್ಲೆಯಲ್ಲಿ ಇತ್ಯರ್ಥವಾಗಲು ಸಹಕಾರ ನೀಡುವಂತೆ ಕೋರಿದ ಅವರು, ನ್ಯಾಯಾಲಯದ ಮೇಲಿನ ಒತ್ತಡವೂ ಕಡಿಮೆಯಾಗಲಿದ್ದು, ಮತ್ತಷ್ಟು ರಾಜೀ ಸಂಧಾನಗಳಿಗೆ ಉತ್ತೇಜನ ನೀಡಿದಂತಾಗಲಿದೆ ಎಂದರು.
ವಕೀಲರ ಸಂಘದ ಅಧ್ಯಕ್ಷ ಜಿ. ಶ್ರೀಧರ್ ಮಾತನಾಡಿ, ಕಕ್ಷಿಗಾರರಿಗೆ ಅನುಕೂಲವಾಗುವ ರೀತಿಯಲ್ಲಿ ಜಿಲ್ಲೆಯ ಎಲ್ಲಾ ವಕೀಲರು ಮೆಗಾ ಅದಾಲತ್ ಯಶಸ್ವಿಗೆ ಸಹಕರಿಸುವುದಾಗಿ ತಿಳಿಸಿದರು.
ಕಾರ್ಯಕ್ರಮದಲ್ಲಿ ನ್ಯಾಯಾಧೀಶರಾದ ಬಿ.ಪಿ.ದೇವಮಾನಿ, ತನುಮಯ್ಯ, ವಕೀಲರ ಸಂಘದ ಪ್ರಧಾನ ಕಾರ್ಯದರ್ಶಿ ರಘುಪತಿ ಗೌಡ ಮತ್ತಿತರರು ಹಾಜರಿದ್ದರು.