ವರದಿ: ಶಬ್ಬೀರ್ ಅಹಮ್ಮದ್, ಶ್ರೀನಿವಾಸಪುರ

ಕೋಲಾರ: ಸೊಸೈಟಿಗಳ ಗಣಕೀಕರಣ, ಸಾಮಾನ್ಯ ಜನರ ಮನೆ ಬಾಗಿಲಿಗೆ ಬ್ಯಾಂಕಿಂಗ್ ಸೇವೆ ಒದಗಿಸುವ ಮೈಕ್ರೋಎಟಿಎಂ, ಮೊಬೈಲ್ ಬ್ಯಾಂಕಿಂಗ್ ವ್ಯವಸ್ಥೆ ಜಾರಿಗೆ ಸಹಕಾರ ನೀಡಿದ ಬ್ಯಾಂಕಿನ ಸಿಇಒ ರವಿ ಅವರ ಸೇವೆ ಇತರೆ ಸಿಬ್ಬಂದಿಗೆ ಆದರ್ಶವಾಗಿದೆ ಎಂದು ಕೋಲಾರ,ಚಿಕ್ಕಬಳ್ಳಾಪುರ ಡಿಸಿಸಿ ಬ್ಯಾಂಕ್ ಅಧ್ಯಕ್ಷ ಬ್ಯಾಲಹಳ್ಳಿ ಗೋವಿಂದಗೌಡ ತಿಳಿಸಿದರು.
ನಗರದ ಬ್ಯಾಂಕ್ ಸಭಾಂಗಣದಲ್ಲಿ ನಡೆದ ಕಾರ್ಯಕ್ರಮದಲ್ಲಿ ಡಿಸಿಸಿ ಬ್ಯಾಂಕ್ ಮುಖ್ಯ ಕಾರ್ಯನಿರ್ವಹಣಾಧಿಕಾರಿಯಾಗಿದ್ದು, ಇದೀಗ ಮೈಸೂರು ಜಿಲ್ಲಾ ಲೆಕ್ಕಪರಿಶೋಧನಾ ಇಲಾಖೆ ಜಂಟಿ ನಿದೇಶಕರಾಗಿ ವರ್ಗಾವಣೆಗೊಂಡಿರುವ ರವಿ ಅವರನ್ನು ಸನ್ಮಾನಿಸಿ ಬೀಳ್ಕೊಟ್ಟು ಅವರು ಮಾತನಾಡುತ್ತಿದ್ದರು.
ಇವರ ಅವಧಿಯಲ್ಲೇ ಡಿಸಿಸಿ ಬ್ಯಾಂಕ್‍ಗೆ ಬ್ಲೂರಿಬ್ಬನ್ ಗೌರವ ಸಿಕ್ಕಿ ದೇಶದಲ್ಲೇ ನಂ.1 ಬ್ಯಾಂಕಾಗಲು ಕಾರಣವಾಗಿದೆ, ಸಾಲ ವಿತರಣೆ, ವಸೂಲಾತಿಯಲ್ಲೂ ನಾವು ಮುಂದಿದ್ದೇವೆ, ಈ ಗೌರವ ಉಳಿಯಲು ಹೆಚ್ಚಿನ ಜವಾಬ್ದಾರಿಯಿಂದ ಸಿಬ್ಬಂದಿ ಕೆಲಸ ಮಾಡಬೇಕು ಎಂದು ತಾಕೀತು ಮಾಡಿದರು.
ಬ್ಯಾಂಕಿನ ನಿಷ್ಕ್ರೀಯ ಆಸ್ತಿಯ ಮೌಲ್ಯ ಎನ್‍ಪಿಎ ಇಂದು 2.5ಕ್ಕೆ ಇಳಿದಿದೆ, ಇದು ಬ್ಯಾಂಕಿನ ಆರ್ಥಿಕ ಶಕ್ತಿಗೆ ಸಾಕ್ಷಿಯಾಗಿದೆ, ಠೇವಣಿ ಪ್ರಮಾಣವೂ ಹೆಚ್ಚಳವಾಗಿದೆ ಎಂದು ತಿಳಿಸಿದರು.
ಸರಳ, ಸಜ್ಜನ, ಪ್ರಮಾಣಿಕರಾದ ಸಿಇಒ ರವಿ ಅವರ ಕಾರ್ಯವೈಖರಿ ಕುರಿತು ಮೆಚ್ಚುಗೆ ವ್ಯಕ್ತಪಡಿಸಿದ ಗೋವಿಂದಗೌಡರು, ಬ್ಯಾಂಕಿನ ಅಭಿವೃದ್ದಿಗೆ ಸಂಬಂಧಿಸಿದಂತೆ ಅವರ ಧನಾತ್ಮಕ ಭಾವನೆಯಿಂದ ಗಣಕೀಕರಣದಲ್ಲಿ ಶೇ.100 ಸಾಧನೆ ಸಾಧ್ಯವಾಗಿದೆ, ಇಡೀ ದೇಶದ ವಿವಿಧ ರಾಜ್ಯಗಳಿಗೆ ಮಾದರಿಯಾಗಿ ಮೊಬೈಲ್ ಬ್ಯಾಂಕಿಂಗ್ ಸೇವೆ ನಾವು ಆರಂಭಿಸಿದ್ದು, ಇತರೆ ರಾಜ್ಯಗಳು ಇದರ ಕುರಿತು ಕೇಳಿ ಮಾರ್ಗದರ್ಶನ ಪಡೆಯುತ್ತಿವೆ ಎಂದರು.
ಮಹಿಳಾ ಸಂಘಗಳಿಗೆ ನಾವು ನೀಡಿದಷ್ಟು ಸಾಲವನ್ನು ದೇಶದ ಮತ್ತಿನ್ಯಾವ ಸಹಕಾರಿ ಬ್ಯಾಂಕು ನೀಡುವ ಧೈರ್ಯ ಮಾಡಲಿಲ್ಲ, ಹಾಗೆಯೇ ಸಾಲ ವಸೂಲಾತಿಯಲ್ಲೂ ನಾವು ಮುಂಚೂಣಿಯಲ್ಲಿದ್ದೇವೆ, ಈ ಬಾರಿ ಎನ್‍ಪಿಎ ಶೇ.2ಕ್ಕಿಳಿಸಲು ಸಿಬ್ಬಂದಿಯ ಬದ್ದತೆ, ಇಚ್ಚಾಶಕ್ತಿ ಅಗತ್ಯವಾಗಿದೆ ಎಂದರು.
ಠೇವಣಿ ಸಂಗ್ರಹ ಹೆಚ್ಚಿಸಲು ನಮ್ಮ ಪ್ರಯತ್ನ ಮುಂದುವರೆದಿದೆ, ಈ ನಿಟ್ಟಿನಲ್ಲಿ ಬ್ಯಾಂಕಿನ ಎಲ್ಲಾಶಾಖೆಗಳ ಸಿಬ್ಬಂದಿಗೆ ನೀಡಿರುವ ಗುರಿ ಸಾಧನೆಗೆ ಬದ್ದತೆಯಿಂದ ಶ್ರಮಿಸಿ, ಅನ್ನ ನೀಡಿದ ಬ್ಯಾಂಕ್ ಬೆಳೆಸುವುದು ನಿಮ್ಮ ಜವಾಬ್ದಾರಿ ಎಂದರು.
ಸಾಮಾನ್ಯರ ಮನೆಗೆ;ಬ್ಯಾಂಕಿಂಗ್ ಸೇವೆ

ಸನ್ಮಾನ ಸ್ವೀಕರಿಸಿದ ಬ್ಯಾಂಕ್ ಸಿಇಒ ರವಿ, ರಾಜ್ಯ, ಕೇಂದ್ರ ಸರ್ಕಾರ, ನಬಾರ್ಡ್‍ನಿಂದ ಬ್ಯಾಂಕ್ ಹಾಗೂ ಜಿಲ್ಲೆಗೆ ಸಿಗಬಹುದಾದ ಎಲ್ಲಾ ಸವಲತ್ತುಗಳನ್ನು ಪಡೆದುಕೊಳ್ಳಲಾಗಿದೆ ಎಂದು ತಿಳಿಸಿದರು.
ನನ್ನ ಸೇವಾವಧಿಯಲ್ಲಿ ಸಂಘರ್ಷಕ್ಕೆ ಅವಕಾಶ ನೀಡದೇ ಕೆಲಸ ಮಾಡಿದ್ದೇನೆ, ಇಲ್ಲಿ ಮಾಡಿದ ಕೆಲಸದ ಕುರಿತು ಸಂತೃಪ್ತಿ ಇದೆ, ಕಳೆದ ಒಂದೂವರೆ ವರ್ಷದಲ್ಲಿ ಇಲ್ಲಿ ಮಾಡಿದ ಕೆಲಸಕ್ಕೆ ಗೌರವ, ಎಲ್ಲರ ಪ್ರೀತಿ,ವಿಶ್ವಾಸ ಸಿಕ್ಕಿದೆ ಎಂದು ಸಂತಸ ವ್ಯಕ್ತಪಡಿಸಿದರು.
ವಾಣಿಜ್ಯ ಬ್ಯಾಂಕುಗಳಲ್ಲಿ ಸಾಮಾನ್ಯ ಜನ ಸೌಲಭ್ಯ ಪಡೆಯುವುದು ಸುಲಭದ ಮಾತಲ್ಲ, ಆದರೆ ಡಿಸಿಸಿ ಬ್ಯಾಂಕಿನಲ್ಲಿ ದೇಶದಲ್ಲೇ ಪ್ರಥಮವಾಗಿ ನಾವು ಮೈಕ್ರೋ ಎಟಿಎಂ ಮೂಲಕ ಜನರ ಮನೆಬಾಗಿಲಿಗೆ ಬ್ಯಾಂಕಿಂಗ್ ಸೇವೆ ತಲುಪಿಸುವ ಪ್ರಯತ್ನ ಮಾಡಿದ್ದೇವೆ, ಇದು ಶೇ.100 ಕಾರ್ಯಗತವಾಗಬೇಕು ಎಂದು ಸಿಬ್ಬಂದಿಗೆ ಕಿವಿಮಾತು ಹೇಳಿದರು.
ಬ್ಯಾಂಕಿನ ಅಧ್ಯಕ್ಷ ಬ್ಯಾಲಹಳ್ಳಿ ಗೋವಿಂದಗೌಡರು ಮತ್ತವರ ಆಡಳಿತ ಮಂಡಳಿ ಬ್ಯಾಂಕಿನ ಅಭಿವೃದ್ದಿಯ ವೇಗ ಹೆಚ್ಚಿಸುವಲ್ಲಿ ಕೈಗೊಂಡ ಕ್ರಮಗಳು ಇಂದು ಇಡೀ ದೇಶವೇ ಡಿಸಿಸಿ ಬ್ಯಾಂಕ್ ಕಡೆ ನೋಡುವಂತಾಗಿದೆ, ಜತೆಗೆ ಆಧುನಿಕತೆಗೆ ತಕ್ಕಂತೆ ತಾಂತ್ರಿಕತೆ ಅಳವಡಿಕೆ,ಗಣಕೀಕರಣ, ಮೈಕ್ರೋಎಟಿಎಂ ಮತ್ತಿತರ ಕಾರ್ಯಗಳ ಅನುಷ್ಟಾನಕ್ಕೆ ತಮಗೆ ನೀಡಿದ ಸಹಕಾರ ಮರೆಯಲಾಗದು ಎಂದರು.
ಈ ಸಂದರ್ಭದಲ್ಲಿ ಬ್ಯಾಂಕಿನ ಎಜಿಎಂಗಳಾದ ಖಲೀಮುಲ್ಲಾ, ನಾಗೇಶ್, ಹುಸೇನ್, ದೊಡ್ಡಮನಿ, ವ್ಯವಸ್ಥಾಪಕ ಅರುಣ್, ಬ್ಯಾಂಕಿನ ಸಿಬ್ಬಂದಿ ಬಾಲಾಜಿ, ಬೇಬಿ, ಶುಭ, ಪದ್ಮಮ್ಮ, ಹ್ಯಾರೀಸ್, ಜಬ್ಬಾರ್, ವಿನಯ್ ಪ್ರಸಾದ್ ಸೇರಿದಂತೆ ಬ್ಯಾಂಕಿನ ಸಿಬ್ಬಂದಿ ಹಾಜರಿದ್ದರು.