ಒಕ್ಕಲಿಗ ಸಮುದಾಯ ಸಾಂಘಿಕ ಪ್ರಯತ್ನದ ಮೂಲಕ ಸಮಸ್ಯೆ ಬಗೆಹರಿಸಿಕೊಳ್ಳಬೇಕು : ಡಾ. ನಿರ್ಮಲಾನಂದನಾಥ ಸ್ವಾಮೀಜಿ

ಶ್ರೀನಿವಾಸಪುರ: ಒಕ್ಕಲಿಗ ಸಮುದಾಯ ಸಾಂಘಿಕ ಪ್ರಯತ್ನದ ಮೂಲಕ ಸಮಸ್ಯೆ ಬಗೆಹರಿಸಿಕೊಳ್ಳಬೇಕು ಎಂದು ಆದಿಚುಂಚನಗಿರಿ ಮಹಾ ಸಂಸ್ಥಾನ ಮಠದ ಪೀಠಾಧ್ಯಕ್ಷ ಡಾ. ನಿರ್ಮಲಾನಂದನಾಥ ಸ್ವಾಮೀಜಿ ಹೇಳಿದರು.
ಪಟ್ಟಣದ ಸರ್ಕಾರಿ ಬಾಲಕಿಯರ ಪದವಿ ಪೂರ್ವ ಕಾಲೇಜು ಮೈದಾನದಲ್ಲಿ ತಾಲ್ಲೂಕು ಒಕ್ಕಲಿಗರ ಸಂಘ ಹಾಗೂ ರಾಷ್ಟ್ರೀಯ ಹಬ್ಬಗಳ ಆಚರಣಾ ಸಮಿತಿ ವತಿಯಿಂದ ಶನಿವಾರ ಏರ್ಪಡಿಸಿದ್ದ ನಾಡಪ್ರಭು ಕೆಂಪೇಗೌಡ ಜಯಂತ್ಯೋತ್ಸವ ಸಮಾರಂಭ ಉದ್ಘಾಟಿಸಿ ಅವರು ಮಾತನಾಡಿದರು.
ತಾಲ್ಲೂಕಿನಲ್ಲಿ 30 ಸಾವಿರ ಹೆಕ್ಟೇರ್‍ನಲ್ಲಿ ಮಾವು ಬೆಳೆಯಲಾಗುತ್ತಿದೆ. ಆದರೆ ಮಾವು ವಹಿವಾಟಿಗೆ ಸಂಬಂಧಿಸಿದಂತೆ ಪ್ರತಿ ವರ್ಷ ಒಂದಲ್ಲಾ ಒಂದು ಸಮಸ್ಯೆ ಎದುರಿಸುತ್ತಿದ್ದಾರೆ. ಮಾವು ಸಂಸ್ಕøತಣ ಘಟಕದ ಸ್ಥಾಪನೆ ಅದಕ್ಕೆ ಪರಿಹಾರವಾಗಿದೆ. ಸರ್ಕಾರ ಶ್ರೀನಿವಾಸಪುರದಲ್ಲಿ ಮಾವು ಸಂಸ್ಕರಣ ಘಟಕ ಸ್ಥಾಪಿಸುವುದರ ಮೂಲಕ ಬೆಳೆಗಾರರ ನೆರವಿಗೆ ಬರಬೇಕು. ಅದಕ್ಕೆ ಪೂರಕವಾಗಿ ಇಲ್ಲಿನ ಶಾಸಕರು ಹಾಗೂ ಇತರ ಜನ ಪ್ರತಿನಿಧಿಗಳು ಪ್ರಾಣಿಕ ಪ್ರಯತ್ನ ಮಾಡಬೇಕು ಎಂದು ಹೇಳಿದರು.
ಕೆಂಪೇಗೌಡರ ದೂರದರ್ಶಿತ್ವ ನಾಡಿನ ಅಭ್ಯುದಯಕ್ಕೆ ಕಾರಣವಾಗಿದೆ. ಮುಖ್ಯವಾಗಿ ಬೆಂಗಳೂರಿನ ಬೆಳವಣಿಗೆಗೆ ದೊಡ್ಡ ಕೊಡುಗೆ ನೀಡಿದೆ. ಒಕ್ಕಲಿಗ ಸಮುದಾಯ ಶಿಕ್ಷಣಕ್ಕೆ ಮೊದಲ ಆದ್ಯತೆ ನೀಡಬೇಕು. ಆ ನಿಟ್ಟಿನಲ್ಲಿ ಕೋಲಾರ ತಾಲ್ಲೂಕಿನ ಸೀತಿ ಬೆಟ್ಟದಲ್ಲಿ 5 ಸಾವಿರ ವಿದ್ಯಾರ್ಥಿಗಳಿಗೆ ಉಚಿತ ವಿದ್ಯಾಭ್ಯಾಸ ನೀಡುವ ವ್ಯವಸ್ಥೆ ಮಾಡಲಾಗುವುದು. ಎಲ್ಲ ಸಮುದಾಯಗಳ ಮಕ್ಕಳಿಗೆ ಅವಕಾಶ ಕಲ್ಪಿಸಲಾಗುವುದು ಎಂದು ಹೇಳಿದರು.
ಲೋಕಸಭಾ ಸದಸ್ಯ ಎಸ್.ಮುನಿಸ್ವಾಮಿ ಮಾತನಾಡಿ, ಕೆಂಪೇಗೌಡರ ಆದರ್ಶ ಪಾಲನೆ ಇಂದಿನ ಅಗತ್ಯವಾಗಿದೆ. ಅವರ ಸಮ ಸಮಾಜದ ಕಲ್ಪನೆ ಸಾಕಾರಗೊಳ್ಳಬೇಕಾಗಿದೆ. ಸಮಾಜದ ಎಲ್ಲ ವರ್ಗದ ಜನರಿಗೂ ಸಮಾನ ಅವಕಾಶ ಕಲ್ಪಿಸಲು 64 ಪೇಟೆಗಳನ್ನು ನಿರ್ಮಿಸಿ, ಬೆಂಗಳೂರು ಸರ್ವ ಜನಾಂಗದ ಸುಂದರ ನಗರವಾಗಿ ಬೆಳೆಯಲು ಅಡಿಪಾಯ ಹಾಕಿದರು ಎಂದು ಹೇಳಿದರು.
ಶಾಸಕ ಜಿ.ಕೆ.ವೆಂಕಟಶಿವಾರೆಡ್ಡಿ ಮಾತನಾಡಿ, ಕೆಂಪೇಗೌಡರು ಕೈಗೊಂಡ ಜನಪರ ಕಾರ್ಯಗಳ ಮುಂದುವರಿಕೆಯಿಂದಾಗಿ ಇಂದು ಬೆಂಗಳೂರು ವಿಶ್ವ ಭೂಪಟದಲ್ಲಿ ಸ್ಥಾನ ಪಡೆದುಕೊಂಡಿದೆ. ಅವರ ಹೆಸರಿನ ಬಲದಿಂದ ನಗರ ಆರ್ಥಿಕ ಶಕ್ತಿಯಾಗಿ ಬೆಳೆಯುತ್ತಿದೆ ಎಂದು ಹೇಳಿದರು.
ಈ ಸಂದರ್ಭದಲ್ಲಿ ಸಮುದಾಯದ ಸಾಧಕರಾದ ಎಂ.ಶ್ರೀರಾಮರೆಡ್ಡಿ, ಬಿ.ಎನ್.ರಮೇಶ್, ಡಿ.ದೇವರಾಜ್, ಎಂ.ಎನ್.ಅನುಚೇತ್, ಬಿ.ಎಲ್.ನಾಗೇಶ್, ಸುಭಾಷ್, ವಸಂತ ಕುಮಾರ್, ಎ.ಎನ್.ಕೃಷ್ಣಾರೆಡ್ಡಿ, ಕೆ.ಎಸ್.ನಾಗರಾಜ್ ಅವರನ್ನು ಸನ್ಮಾನಿಸಲಾಯಿತು.
ತಾಲ್ಲೂಕು ಒಕ್ಕಲಿಗರ ಸಂಘದ ಅಧ್ಯಕ್ಷ ವೇಣುಗೋಪಾಲರೆಡ್ಡಿ, ಕಾರ್ಯದರ್ಶಿ ಮೀಸಗಾನಹಳ್ಳಿ ವೆಂಕಟರೆಡ್ಡಿ, ಜಿಲ್ಲಾ ಘಟಕದ ಅಧ್ಯಕ್ಷ ಕೆ.ವಿ.ಶಂಕರಪ್ಪ, ತಹಶೀಲ್ದಾರ್ ಶಿರಿನ್ ತಾಜ್, ತಾಲ್ಲೂಕು ಪಂಚಾಯಿತಿ ಕಾರ್ಯನಿರ್ವಹಣಾಧಿಕಾರಿ ಕೃಷ್ಣಪ್ಪ, ಪೊಲೀಸ್ ಇನ್ಸ್‍ಪೆಕ್ಟರ್ ಆರ್.ದಯಾನಂದ್, ಮುಖಂಡರಾದ ಎಲ್.ಗೋಪಾಲಕೃಷ್ಣ, ತೂಪಲ್ಲಿ ಆರ್.ಚೌಡರೆಡ್ಡಿ, ಆರ್.ನಾರಾಯಣಸ್ವಾಮಿ, ಬಿ.ವಿ.ಶಿವಾರೆಡ್ಡಿ, ಮಂಜುನಾಥಸ್ವಾಮಿ, ಡಾ. ಕೆ.ಎನ್.ವೇಣುಗೋಪಾಲ್, ಎಂ.ಶ್ರೀರಾಮರೆಡ್ಡಿ, ಎ.ವೆಂಕಟರೆಡ್ಡಿ, ಡಾ. ರಮೇಶ್, ಚಿನ್ನಪ್ಪರೆಡ್ಡಿ, ಶ್ರೀನಾಥರೆಡ್ಡಿ, ಎನ್.ಜಿ.ಬೇಟಪ್ಪ, ರೋಣೂರು ಚಂದ್ರಶೇಖರ್, ರಾಮಚಂದ್ರ ಇದ್ದರು.
ಮೆರಣಿಗೆ: ಪಟ್ಟಣದ ಎಂಜಿ ರಸ್ತೆಯಲ್ಲಿ ಕೆಂಪೇಗೌಡರ ಭಾವ ಚಿತ್ರ ಮೆರವಣಿಗೆ ಏರ್ಪಡಿಸಲಾಗಿತ್ತು. ಮೆರವಣಿಗೆಯಲ್ಲಿ ತಾಲ್ಲೂಕಿನ ಬೇರೆ ಬೇರೆ ಕಡೆಗಳಿಂದ ಆಗಮಿಸಿದ್ದ ನೂಕ್ಕೂ ಹೆಚ್ಚು ಕೆಂಪೇಗೌಡರ ಭಾವ ಚಿತ್ರ ಹೊತ್ತ ಪಲ್ಲಕಿಗಳು ಭಾಗವಹಿಸಿದ್ದವು. ಮೆರವಣಿಗೆ ಉದ್ದಕ್ಕೂ ಕಲಾವಿದರು ವಿವಿಧ ಸಾಂಸ್ಕøತಿಕ ಕಾರ್ಯಕ್ರಮಗಳನ್ನು ನಡೆಸಿಕೊಟ್ಟರು.