ಅಧಿಕಾರಿಗಳು ಸಾರ್ವಜನಿಕರ ಸಮಸ್ಯೆಗಳಿಗೆ ಸ್ಪಂದಿಸಿ ಕಾರ್ಯನಿರ್ವಹಿಸಬೇಕು:ಜಿಲ್ಲಾ ಲೋಕಾಯುಕ್ತ ಎಸ್ಸಿ ಬಿ.ಕೆ.ಉಮೇಶ್

ಶ್ರೀನಿವಾಸಪುರ: ಅಧಿಕಾರಿಗಳು ಸಾರ್ವಜನಿಕರ ಸಮಸ್ಯೆಗಳಿಗೆ ಸ್ಪಂದಿಸಿ ಕಾರ್ಯನಿರ್ವಹಿಸಬೇಕು ಎಂದು ಜಿಲ್ಲಾ ಲೋಕಾಯುಕ್ತ ಎಸ್ಸಿ ಬಿ.ಕೆ.ಉಮೇಶ್ ಹೇಳಿದರು.
ಪಟ್ಟಣದ ತಾಲ್ಲೂಕು ಕಚೇರಿ ಸಭಾಂಗದಲ್ಲಿ ಜಿಲ್ಲಾ ಲೋಕಾಯುಕ್ತ ಅಧಿಕಾರಿಗಳಿಂದ ಮಂಗಳವಾರ ಏರ್ಪಡಿಸಿದ್ದ ತಾಲ್ಲೂಕು ಮಟ್ಟದ ಸಾರ್ವಜನಿಕ ಕುಂದು ಕೊರತೆ ವಿಚಾರಣಾ ಸಭೆಯಲ್ಲಿ ಮಾತನಾಡಿದ ಅವರು, ಅಧಿಕಾರಿಗಳು ಹಾಗೂ ಸಿಬ್ಬಂದಿ ಸರ್ಕಾರದ ಸೌಲಭ್ಯ ಅರ್ಹ ಫಲಾನುಭವಿಗಳಿಗೆ ಸಿಗುವಂತೆ ನೋಡಿಕೊಳ್ಳಬೇಕು. ಸೌಲಭ್ಯ ವಿತರಣೆಯಲ್ಲಿ ತಾರತಮ್ಯ ಮಾಡಬಾರದು ಎಂದು ಹೇಳಿದರು.
ಸಾರ್ವಜನಿಕರು ಭ್ರಷ್ಟ ಅಧಿಕಾರಿಗಳ ಭ್ರಷ್ಟಾಚಾರ ಬಯಲು ಮಾಡಬೇಕು. ಯಾವುದೇ ಆಧಿಕಾರಿ ಅಥವಾ ಸರ್ಕಾರಿ ಕಚೇರಿ ಸಿಬ್ಬಂದಿ ಲಂಚ ಕೇಳಿದರೆ, ಯಾವುದೇ ಹಿಂಜರಿಕೆ ಇಲ್ಲದೆ ಲೋಕಾಯುಕ್ತ ಪೊಲೀಸರಿಗೆ ದೂರು ನೀಡಬೇಕುಎಂದು ಹೇಳಿದರು.
ಡಿ.17 ರಂದು ಕೋಲಾರದ ಜಿಲ್ಲಾಧಿಕಾರಿ ಕಚೇರಿಯಲ್ಲಿ ಉಪ ಲೋಕಾಯುಕ್ತರ ಸಭೆ ಏರ್ಪಡಿಸಲಾಗಿದೆ. ಡಿ.18 ಮತ್ತು 19 ರಂದು ಅಧಿಕಾರಿಗಳ ಸಭೆ ಏರ್ಪಡಿಸಲಾಗಿದೆ ಎಂದು ಹೇಳಿದರು.
ಸಭೆಯಲ್ಲಿ ಸಾರ್ವಜನಿಕರಿಂದ ಒಟ್ಟು 52 ದೂರುಗಳನ್ನು ಸ್ವೀಕರಿಸಲಾಯಿತು. ಆಪೈಕಿ 28 ದೂರುಗಳು ಕಂದಾಯ ಇಲಾಖೆಗೆ ಸಂಬಂಧಪಟ್ಟಿದ್ದರೆ, 28 ದೂರುಗಳು ಅರಣ್ಯ, ಪೊಲೀಸ್, ಭೂಮಾಪನ ಹಾಗೂ ಬಿಸಿಎಂ ಇಲಾಖೆಗೆ ಸಂಬಂದಿಸಿದ್ದವು.
ಜಿಲ್ಲಾ ಲೋಕಾಯುಕ್ತ ಡಿವೈಎಸ್ಪಿ ಎಸ್.ಚೈತ್ರ, ತಹಶೀಲ್ದಾರ್ ಶರಿನ್ ತಾಜ್, ಶಿರಸ್ತೇದಾರ್ ಜೆ.ಎಂ.ಬಲರಾಮಚಂದ್ರೇಗೌಡ, ಭೂಮಾಪನ ಇಲಾಖೆ ಮೇಲ್ವಿಚಾರಕ ಮಂಜುನಾಥ್, ಲೋಕಾಯುಕ್ತ ಇನ್ಸ್‍ಪೆಕ್ಟರ್ ಎಂ.ಆರ್.ಯಶ್ವಂತ್ ಕುಮಾರ್, ಸಿಬ್ಬಂದಿ ರಾಜ್‍ಗೋಪಾಲ್, ರಾಮಚಂದ್ರ, ಶ್ರೀನಾಥ್, ಸುಬ್ರಮಣಿ ಇದ್ದರು.