ವರದಿ:ಶಬ್ಬೀರ್ ಅಹ್ಮದ್, ಶ್ರೀನಿವಾಸಪುರ, (ಸಂಪಾದಕರು: ಬರ್ನಾಡ್ ಡಿ’ಕೋಸ್ತಾ)
ಶ್ರೀನಿವಾಸಪುರ: ಅಧಿಕಾರಿಗಳು ಅರ್ಹ ಫಲಾನುಭವಿಗಳಿಗೆ ಸರ್ಕಾರಿ ಸೌಲಭ್ಯ ತಲುಪಿಸಬೇಕು ಎಂದು ಹೆಚ್ಚುವರಿ ಜಿಲ್ಲಾಧಿಕಾರಿ ಡಾ. ಸ್ನೇಹ ಹೇಳಿದರು.
ಪಟ್ಟಣದ ತಾಲ್ಲೂಕು ಪಂಚಾಯಿತಿ ಕಚೇರಿ ಸಭಾಂಗಣದಲ್ಲಿ ಗುರುವಾರ ಏರ್ಪಡಿಸಿದ್ದ ಕಂದಾಯ ಇಲಾಖೆ ಪ್ರಗತಿ ಪರಿಶೀಲನಾ ಸಭೆಯಲ್ಲಿ ಮಾತನಾಡಿ, ಸಾರ್ವಜನಿಕರು ಸಕಾಲ ಯೋಜನೆಯಡಿ ಸಲ್ಲಿಸಲಾಗಿರುವ ಅರ್ಜಿಗಳನ್ನು ನಿಗದಿತ ಕಾಲ ಮಿತಿಯೊಳಗೆ ವಿಲೇವಾರಿ ಮಾಡಬೇಕು. ಸಾರ್ವಜನಿಕರ ಸಮಸ್ಯೆಗಳಿಗೆ ಸ್ಪಂದಿಸಿ ಶೀಘ್ರವಾಗಿ ಪರಿಹಾರ ಒದಗಿಸಬೇಕು ಎಂದು ಸೂಚಿಸಿದರು.
ಅಧಿಕಾರಿಗಳು ಪೌತಿ ಖಾತೆ ಮಾಡಲು ವಿಳಂಬ ಮಾಡಬಾರದು. ಭೂ ದಾಖಲೆಗಳನ್ನು ಕ್ರಮಬದ್ಧವಾಗಿ ಇಡಬೇಕು. ಅರ್ಹರು ಯಾವುದೇ ಪಿಂಚಣಿ ಸೌಲಭ್ಯದಿಂದ ವಂಚಿತರಾಗದಂತೆ ಎಚ್ಚರ ವಹಿಸಬೇಕು. ಯಾವುದೇ ವಿಷಯದಲ್ಲಿ ಸಾರ್ವಜನಿಕರಿಂದ ದೂರುಗಳು ಬರದಂತೆ ಕಾರ್ಯನಿರ್ವಹಿಸಬೇಕು ಎಂದು ಹೇಳಿದರು.
ಗ್ರಾಮೀಣ ಪ್ರದೇಶದಲ್ಲಿ ಗ್ರಾಮ ಲೆಕ್ಕಾಧಿಕಾರಿಗಳ ವಸತಿ ಗೃಹ ಹಾಗೂ ಕಚೇರಿ ನಿರ್ಮಿಸಲು ಸೂಕ್ತ ಜಮೀನು ಗುರುತಿಸಿ ಪಟ್ಟಿ ನೀಡಿದಲ್ಲಿ, ಸರ್ಕಾರದಿಂದ ಆರ್ಥಿಕ ನೆರವು ನೀಡಲಾಗುವುದು. ಈ ಬಗ್ಗೆ ಶೀಘ್ರವಾಗಿ ಸ್ಥಳ ಪರಿಶೀಲಿಸಿ ವರದಿ ನೀಡಬೇಕು ಎಂದು ಹೇಳಿದರು.
ಹೆಚ್ಚುವರಿ ಜಿಲ್ಲಾಧಿಕಾರಿ ಡಾ. ಸ್ನೇಹ ಮತಗಟ್ಟೆ ಕೇಂದ್ರಗಳಿಗೆ ಭೇಟಿ ನೀಡಿ ಮತದಾರರ ಪಟ್ಟಿಗಳನ್ನು ಪರಿಶೀಲಿಸಿದರು
ಭೇಟಿ: ತಹಶೀಲ್ದಾರ್ ಶಿರಿನ್ ತಾಜ್, ಶಿರಸ್ತೇದಾರ್ ಮನೋಹರ ಮಾನೆ, ಉಪ ತಹಶೀಲ್ದಾರ್ ಬಲರಾಮೇಗೌಡ, ಎಡಿಎಲ್ಆರ್ ನಟೇಶ್ ಮೂರ್ತಿ, ಕಂದಾಯ ನಿರೀಕ್ಷಕರಾದ ಬಿ.ವಿ.ಮುನಿರೆಡ್ಡಿ, ಗುರುರಾಜರಾವ್, ಜನಾರ್ಧನ್, ವಿನೋದ್, ಹರಿ ಇದ್ದರು.
ಭೇಟಿ: ತಾಲ್ಲೂಕಿನ ಪಾಳ್ಯ ಹಾಗೂ ಉನಿಕಿಲಿ ಗ್ರಾಮಗಳ ಮತಗಟ್ಟೆ ಕೇಂದ್ರಗಳಿಗೆ ಭೇಟಿ ನೀಡಿದ್ದ ಹೆಚ್ಚುವರಿ ಜಿಲ್ಲಾಧಿಕಾರಿ ಡಾ. ಸ್ನೇಹ ಮತದಾರರ ಪಟ್ಟಿಗಳನ್ನು ಪರಿಶೀಲಿಸಿದರು. ಮತಪಟ್ಟಿ ಕುರಿತು ಸಂಬಂಧಿಸಿದ ಬಿಎಲ್ಒಗಳ ಜತೆ ಚರ್ಚಿಸಿದರು. ಹಿರಿಯ ಕಂದಾಯ ನಿರೀಕ್ಷಕ ಬಿ.ವಿ.ಮುನಿರೆಡ್ಡಿ ಇದ್ದರು.