ವರದಿ: ಶಬ್ಬೀರ್ ಅಹಮ್ಮದ್, ಶ್ರೀನಿವಾಸಪುರ
ಶ್ರೀನಿವಾಸಪುರ: ಅಧಿಕಾರಿಗಳು ಇಂದಿರಾ ನಗರದ ಬಡವರಿಗೆ ಮನೆ ನಿವೇಶನ ನೀಡುವಿಕೆಯಲ್ಲಿ ಅನ್ಯಾಯ ಆಗದಂತೆ ನೋಡಿಕೊಳ್ಳಬೇಕು. ಅರ್ಹ ಫಲಾನುಭವಿಗಳಿಗೆ ಮನೆ ನಿವೇಶನ ಅಥವಾ ಮನೆ ಸಿಗದ ಪಕ್ಷದಲ್ಲಿ ತಾಲ್ಲೂಕು ಕಚೇರಿಗೆ ಮುತ್ತಿಗೆ ಹಾಕಲಾಗುವುದು ಎಂದು ಮಾಜಿ ಶಾಸಕ ಜಿ.ಕೆ.ವೆಂಕಟಶಿವಾರೆಡ್ಡಿ ಹೇಳಿದರು.
ಪಟ್ಟಣದ ಇಂದಿರಾ ನಗರದಲ್ಲಿ ಮಂಗಳವಾರ ಏರ್ಪಡಿಸಲಾಗಿದ್ದ ಸಾರ್ವಜನಿಕರ ಕುಂದು ಕೊರತೆ ಸಭೆಯಲ್ಲಿ ಮಾತನಾಡಿ, ‘ನಾನು ಶಾಸಕನಾಗಿದ್ದಾಗ ಬಡವರನ್ನು ಗುರುತಿಸಿ ಮನೆ ನಿವೇಶನ ವಿತರಣೆ ಮಾಡಿದ್ದೆ. ಹಕ್ಕು ಪತ್ರಗಳಲ್ಲಿ ಸಣ್ಣ ಪುಟ್ಟ ತಪ್ಪುಗಳಿದ್ದಲ್ಲಿ ಸಂಬಂಧಪಟ್ಟ ಅಧಿಕಾರಿಗಳು ಸರಿಪಡಿಸಿ ಕೊಡಬೇಕು. ಭೇದ ಭಾವ ಇಲ್ಲದಂತೆ ಫಲಾನುಭವಿಗಳನ್ನು ನಡಿಸಿಕೊಳ್ಳಬೇಕು’ ಎಂದು ಹೇಳಿದರು.
ಪಟ್ಟಣದ ಅಭಿವೃದ್ಧಿಗೆ ಸಂಬಂಧಿಸಿದಂತೆ ಮಾದರಿಯಾಗಿ ಕೆಲಸ ಮಾಡಲಾಗಿದೆ. ಬಡವರಿಗೆ ಮನೆ ನಿವೇಶನ ಕೊಡುವ ಉದ್ದೇಶದಿಂದ ಅಮಾನಿ ಕೆರೆಯ ಅಂಚಿನಲ್ಲಿ 2 ಸಾವಿರ ನಿವೇಶನಗಳನ್ನು ಮಾಡಿ ಹಂಚಿಕೆ ಮಾಡಲಾಗಿತ್ತು. ವಿವಿಧ ಸಂಘ ಸಂಸ್ಥೆಗಳ ಫಲಾನುಭವಿಗಳಿಗೂ ನಿವೇಶನ ಮಂಜೂರು ಮಾಡಲಾಗಿತ್ತು. ಆದರೆ ಅದನ್ನು ದುರುದ್ದೇಶಪೂರ್ವಕವಾಗಿ ರದ್ದುಪಡಿಸಲಾಯಿತು ಎಂದು ಹೇಳಿದರು.
ತಹಶೀಲ್ದಾರ್ ಎಸ್.ಎಂ.ಶ್ರೀನಿವಾಸ್ ಮಾತನಾಡಿ, ಅರ್ಹ ಫಲಾನುಭವಿಗಳಿಗೆ ಯಾವುದೇ ತೊಂದರೆ ಆಗುವುದಿಲ್ಲ. ಹಕ್ಕು ಪತ್ರದಲ್ಲಿ ತಪ್ಪುಗಳಿದ್ದಲ್ಲಿ ಸರಿಪಡಿಸಿ ಕೊಡಲಾಗುವುದು. ಅರ್ಹರಲ್ಲದ ವ್ಯಕ್ತಿಗಳು ಮನೆ ನಿವೇಶನ ಪಡೆದಿದ್ದಲ್ಲಿ ಶಿಸ್ತು ಕ್ರಮ ಕೈಗೊಳ್ಳಲಾಗುತ್ತಿದೆ. ಕೆಲವು ವ್ಯಕ್ತಿಗಳು ತಮ್ಮ ಹೆಸರಲ್ಲಿ ಒಂದಕ್ಕಿಂತ ಹೆಚ್ಚು ನಿವೇಶನಗಳನ್ನು ಹೊಂದಿದ್ದಾರೆ. ಅಂಥ ವ್ಯಕ್ತಿಗಳಿಂದ ನಿವೇಶನ ವಾಪಸ್ ಪಡೆದು ಅರ್ಹರಿಗೆ ನೀಡಲಾಗುವುದು ಎಂದು ಹೇಳಿದರು.
ಪುರಸಭಾಧ್ಯಕ್ಷೆ ಎಂ.ಎನ್.ಲಲಿತಾ ಶ್ರೀನಿವಾಸ್, ಉಪಾಧ್ಯಕ್ಷೆ ಆಯಿಷಾ ನಯಾಜ್, ಸದಸ್ಯ ಬಿ.ವೆಂಕಟರೆಡ್ಡಿ, ಮುಖ್ಯಾಧಿಕಾರಿ ವೈ.ಎನ್.ಸತ್ಯನಾರಾಯಣ, ಅಧಿಕಾರಿಗಳಾದ ನಾಗರಾಜ್, ಶಂಕರ್, ರಾಜೇಶ್ವರಿ, ನಾಗೇಶ್, ಪೊಲೀಸ್ ಇನ್ಸ್‍ಪೆಕ್ಟರ್ ರವಿಕುಮಾರ್ ಇದ್ದರು.