ಅಧಿಕಾರಿಗಳು ಕಚೇರಿ ವ್ಯವಹಾರದಲ್ಲಿ ಮಧ್ಯವರ್ತಿಗಳಿಗೆ ಅವಕಾಶ ನೀಡಬಾರದು :ಶಾಸಕ ಕೆ.ಆರ್.ರಮೇಶ್

ಶ್ರೀನಿವಾಸಪುರ: ಅಧಿಕಾರಿಗಳು ಕಚೇರಿ ವ್ಯವಹಾರದಲ್ಲಿ ಮಧ್ಯವರ್ತಿಗಳಿಗೆ ಅವಕಾಶ ನೀಡಬಾರದು ಎಂದು ಶಾಸಕ ಕೆ.ಆರ್.ರಮೇಶ್ ಕುಮಾರ್ ಹೇಳಿದರು.ಪುರಸಭೆ ಕಚೇರಿ ಸಭಾಂಗಣದಲ್ಲಿ ಬುಧವಾರ ಏರ್ಪಡಿಸಿದ್ದ ವಿವಿಧ ಲಾಖೆಗಳ ಅಭಿವೃದ್ದಿ ಪರೀಲನಾ ಸಭೆಯಲ್ಲಿ ಮಾತನಾಡಿದ ಅವರು, ಕ್ಷೇತ್ರಕ್ಕೆ 5200 ಮನೆ ಮಂಜೂರು ಮಾಡಿಸಲಾಗಿದೆ. ಆದರೆ ಪಿಡಿಒಗಳ ನಿಧಾನ ಧೋರಣೆಯಿಂದ ಇನ್ನೂ ಫಲಾನುಭವಿಗಳಿಗೆ ವಿತರಣೆಯಾಗಿಲ್ಲ. ವಿಶೇಷವಾಗಿ ಬೈರಗಾನಹಳ್ಳಿ ಹಾಗೂ ಗೌನಿಪಲ್ಲಿ ಗ್ರಾಮ ಪಂಚಾಯಿತಿ ಕಚೇರಿಗಳಲ್ಲಿ ಫಲಾನುಭವಿಗಳ ಪಟ್ಟಿಯನ್ನು ಆನ್‍ಲೈನ್‍ಗೆ ಹಾಕಿಲಲ್ಲ. ಪಿಡಿಒಗಳ ಕಳ್ಳಾಟದಿಂದ ಫಲಾನುಭವಿಗಳು ಸೌಲಭ್ಯ ವಂಚಿತರಾಗುತ್ತಿದ್ದಾರೆ. ಪರಿಸ್ಥಿತಿ ಬದಲಾಗದಿದ್ದರೆ ಎಸಿಬಿ ತನಿಖೆ ಮಾಡಿಸಲಾಗುವುದು ಎಂದು ಎಚ್ಚರಿಕೆ ನೀಡಿದರು.
ಕಂದಾಯ ಇಲಾಖೆ ಪಿ ನಂಬರ್ ತೆಗೆಯಬೇಕು. ಅರಣ್ಯ ಹಾಗೂ ಕೆರೆ ಅಂಗಳ ಹೊರತುಪಡಿಸಿ ಸಾಗುವಳಿ ಚೀಟಿ ನೀಡಬೇಕು. ನಿಯಮ ಬಾಹಿರವಾಗಿ ನೀಡಲಾಗಿರುವ ಅರ್ಜಿಗಳನ್ನು ಯಾವುದೇ ಕಾರಣಕ್ಕೂ ಪರಿಗಣಿಸಬಾರದು. ಒಮ್ಮೆ ಸಾಗುವಳಿ ಚೀಟಿ ನೀಡಿದ ಮೇಲೆ ಅಡ್ಡಿಪಡಿಸುವ ಅಧಿಕಾರ ಅರಣ್ಯ ಇಲಾಖೆಗೆ ಇರುವುದಿಲ್ಲ. ಬೇಕಾದರೆ ಅವರು ನ್ಯಾಯಾಲಯದ ಮೊರೆ ಹೋಗಬಹುದು. ಅನರ್ಹ ಅರ್ಜಿಗಳನ್ನು ಉಳಿಸಿಕೊಂಡರೆ ಪ್ರಗತಿ ಸಾಧ್ಯವಾಗುವುದಿಲ್ಲ. ಅಂಥ ಅರ್ಜಿಗಳನ್ನು ತಿರಸ್ಕರಿಸಿ ಆ.7ರೊಳಗೆ ಅರ್ಹರಿಗೆ ಸಾಗುವಳಿ ಚೀಟಿ ಸಿದ್ಧಪಡಿಸಬೇಕು. ಆಗ ದರಖಾಸ್ತು ಜಮೀನು ನೀಡಿಕೆಯಲ್ಲಿ ತಾಲ್ಲೂಕು ರಾಜ್ಯದಲ್ಲಿಯೇ ಮೊದಲ ಸ್ಥಾನದಲ್ಲಿರುತ್ತದೆ ಎಂದು ಹೇಳಿದರು.
ಶ್ರೀನಿವಾಸಪುರ-ಕೋಲಾರ ರಸ್ತೆ ವಿಸ್ತರಣೆ ಕಾಮಗಾರಿ ಕೈಗೊಳ್ಳಲು ಮುಖ್ಯ ಮಂತ್ರಿಗಳು ಒಪ್ಪಿಗೆ ಸೂಚಿಸಿದ್ದಾರೆ. ಡಿಪಿಆರ್ ಆಗಿದೆ. ಅಂದಾಜು ವೆಚ್ಚ ನಮೂದಿಸಿ, ಟೆಂಡರ್ ಕರೆಯುವ ಹಂತದಲ್ಲಿದೆ. ಈ ಬಗ್ಗೆ ಸಂಬಂಧಪಟ್ಟ ಅಧಿಕಾರಿಗಳು ಗಮನ ಹರಿಸಬೇಕು ಎಂದು ಹೇಳಿದರು.
ಅಧಿಕಾರಿಗಳ ಸಭೆ ಬಳಿಕ ಶಾಸಕರು ಸಾರ್ವಜನಿಕರ ಕುಂದು ಕೊರತೆ ವಿಚಾರಿಸಿದರು.
ತಹಶೀಲ್ದಾರ್ ಶಿರಿನ್ ತಾಜ್, ಹಿರಿಯ ಕಂದಾಯ ನಿರೀಕ್ಷಕ ಬಿ.ವಿ.ಮುನಿರೆಡ್ಡಿ, ಗುರುರಾಜರಾವ್, ತಾಲ್ಲೂಕು ಪಂಚಾಯಿತಿ ಕಾರ್ಯನಿರ್ವಹಣಾಧಿಕಾರಿ ಎಸ್.ಆನಂದ್, ಲೋಕೋಪಯೋಗಿ ಇಲಾಖೆ ಸಹಾಯಕ ಕಾರ್ಯಪಾಲಕ ಎಂಜಿನಿಯರ್ ಹುಸೇನ್ ಸಾಬ್, ಪುರಸಭಾಧ್ಯಕ್ಷೆ ಲಲಿತಾ ಶ್ರೀನಿವಾಸ್, ಪಿಎಲ್‍ಡಿ ಬ್ಯಾಂಕ್ ನಿರ್ದೇಶಕ ದಿಂಬಾಲ ಅಶೋಕ್, ಮುಖಂಡರಾದ ಸಂಜಯ್ ರೆಡ್ಡಿ, ಬಿ.ಜಿ.ಸೈಯದ್ ಖಾದರ್, ವೆಂಕಟರೆಡ್ಡಿ, ಶಂಕರ್, ಗಂಗಾಧರ್, ಅಕ್ಬರ್ ಷರೀಫ್ ಇದ್ದರು.