ಶ್ರೀನಿವಾಸಪುರ: ಮಳೆ ಕೊರತೆಯಿಂದ ಉಂಟಾಗಿರುವ ಸಂಕಷ್ಟದ ಸಂದರ್ಭದಲ್ಲಿ ಕೃಷಿಕರು ಎದುರಿಸುತ್ತಿರುವ ಸಮಸ್ಯೆಗಳ ನಿವಾರಣೆಗೆ ಅಧಿಕಾರಿಗಳು ಪ್ರಾಮಾಣಿಕ ಪ್ರಯತ್ನ ಮಾಡಬೇಕು ಎಂದು ಶಾಸಕ ಜಿ.ಕೆ.ವೆಂಕಟಶಿವಾರೆಡ್ಡಿ ಹೇಳಿದರು.
ಪಟ್ಟಣದ ತಾಲ್ಲೂಕು ಕಚೇರಿ ಸಭಾಂಗಣದಲ್ಲಿ ಬರ ಪರಿಸ್ಥಿತಿ ಬಗ್ಗೆ ಚರ್ಚಿಸಲು ಶುಕ್ರವಾರ ಏರ್ಪಡಿಸಿದ್ದ ತಾಲ್ಲೂಕಿನ ಎಲ್ಲ ಇಲಾಖೆಗಳ ಅಧಿಕಾರಿಗಳ ಸಭೆಯಲ್ಲಿ ಮಾತನಾಡಿದ ಅವರು, ಬರ ಪರಿಸ್ಥಿತಿ ಕೃಷಿ ಹಾಗೂ ಹೈನುಗಾರಿಕೆ ಮೇಲೆ ದುಷ್ಪರಿಣಾಮ ಉಂಟುಮಾಡಿದೆ ಎಂದು ಹೇಳಿದರು.
ಸಧ್ಯದ ಪರಿಸ್ಥಿತಿಯಲ್ಲಿ ಜಾನುವಾರು ಮೇವಿನ ಸಮಸ್ಯೆ ನಿವಾರಣೆಗೆ ಹೆಚ್ಚಿನ ಗಮನ ನೀಡಬೇಕಾಗಿದೆ. ಜಾನುವಾರು ಮೇವು ಬೆಳೆಯಲು ಈಗಾಗಲೆ ಪಶುಪಾಲನಾ ಇಲಾಖೆಯಿಂದ ರೈತರಿಗೆ ಮೇವಿನ ಬೀಜ ವಿತರಿಸಲಾಗಿದೆ. ಆದರೆ ಮಳೆ ಕೊರತೆ ಪರಿಣಾಮವಾಗಿ ನಿರೀಕ್ಷಿತ ಪ್ರಮಾಣದಲ್ಲಿ ಬಿತ್ತನೆ ಆಗಿಲ್ಲ. ಆದ್ದರಿಂದ ಈಗ ಮತ್ತೆ ಮೇವಿನ ಬೀಜ ವಿತರಣೆ ಮಾಡಬೇಕಾಗಿದೆ. ಹಿಂಗಾರು ಮಳೆಯಾದಲ್ಲಿ ಬಿತ್ತನೆ ಮಾಡಲು ಸಾಧ್ಯವಾಗುತ್ತದೆ ಎಂದು ಹೇಳಿದರು.
ಜನತಾ ದರ್ಶನ: ಪಟ್ಟಣದ ಮಾರುತಿ ಸಭಾ ಭವನದಲ್ಲಿ ನ.17 ರಂದು ತಾಲ್ಲೂಕು ಮಟ್ಟದ ಜನತಾ ದರ್ಶನ ಕಾರ್ಯಕ್ರಮ ಏರ್ಪಡಿಸಲಾಗಿದೆ. ಅಂದು ಜಿಲ್ಲಾಧಿಕಾರಿ ನೇತೃತ್ವದಲ್ಲಿ ವಿವಿಧ ಇಲಾಖೆಗಳ ಜಿಲ್ಲಾ ಮತ್ತು ತಾಲ್ಲೂಕು ಮಟ್ಟದ ಅಧಿಕಾರಿಗಳು ಕಾರ್ಯಕ್ರಮದಲ್ಲಿ ಭಾಗವಹಿಸುತ್ತಾರೆ. ಸಾರ್ವಜನಿಕರು ತಮ್ಮ ಅಹವಾಲು ಸಲ್ಲಿಸಬಹುವುದು. ಆಯಾ ಇಲಾಖೆ ಅಧಿಕಾರಿಗಳು ಸಂಬಂಧಪಟ್ಟ ಸಮಸ್ಯೆಗಳ ಪರಿಹಾರಕ್ಕೆ ಅಗತ್ಯ ಕ್ರಮ ಕೈಗೊಳ್ಳುತ್ತಾರೆ. ಕೆಲವು ಸಮಸ್ಯೆಗಳಿಗೆ ಸ್ಥಳದಲ್ಲಿಯೇ ಪರಿಹಾರ ಸಿಗುವ ಸಾಧ್ಯತೆ ಇರುತ್ತದೆ ಎಂದು ಹೇಳಿದರು.
ತಾಲ್ಲೂಕಿನಲ್ಲಿ ಜಿಲ್ಲಾಧಿಕಾರಿ ನೇತೃತ್ವದಲ್ಲಿ ಜನತಾ ದರ್ಶನ ಕಾರ್ಯಕ್ರಮ ಏರ್ಪಡಿಸಿರುವುದರಿಂದ, ಜಿಲ್ಲಾ ಮಟ್ಟದ ಅಧಿಕಾರಿಗಳು ಭಾಗವಹಿಸುತ್ತಾರೆ. ಆದ್ದರಿಂದ ಪಟ್ಟಣದಲ್ಲಿ ಹಬ್ಬದ ವಾತಾವರಣ ಇರುವಂತೆ ನೋಡಿಕೊಳ್ಳಬೇಕು. ಅಧಿಕಾರಿಗಳು ಪಟ್ಟಣದ ಪ್ರವೇಶಿಸುವ ರಸ್ತೆಯಲ್ಲಿ ಸ್ವಾಗತ ಫಲಕ ಅಳವಡಿಸಬೇಕು ಹಾಗೂ ತಳಿರು ತೋರಣ ಕಟ್ಟಿ ಬರಮಾಡಿಕೊಳ್ಳಬೇಕು ಎಂದು ಸೂಚಿಸಿದರು.
ತಹಶೀಲ್ದಾರ್ ಶಿರಿನ್ ತಾಜ್, ಉಪ ತಹಶೀಲ್ದಾರ್, ಜಯರಾಮ್, ತಾಲ್ಲೂಕು ಪಂಚಾಯಿತಿ ಕಾರ್ಯನಿರ್ವಹಣಾಧಿಕಾರಿ ಎಸ್.ಶಿವಕುಮಾರಿ, ಶಿರಸ್ತೇದಾರ್ ಬಲರಾಮಚಂದ್ರೇಗೌಡ, ಹಿರಿಯ ಕಂದಾಯ ನಿರೀಕ್ಷಕ ಬಿ.ವಿ.ಮುನಿರೆಡ್ಡಿ, ಗುರುರಾಜರಾವ್, ವಿನೋದ್, ಹರಿ, ವಿವಿಧ ಇಲಾಖೆಗಳ ಸಹಾಯಕ ನಿರ್ದೇಶಕರಾದ ಕೆ.ಸಿ.ಮಂಜುನಾಥ್, ಕೃಷ್ಣಪ್ಪ, ಎ.ಬೈರಾರೆಡ್ಡಿ, ಡಾ. ಮಂಜುನಾಥರೆಡ್ಡಿ, ಸಹಾಯಕ ಕಾರ್ಯಪಾಲಕ ಎಂಜಿನಿಯರ್ ನಾರಾಯಣಸ್ವಾಮಿ, ಪೊಲೀಸ್ ಸರ್ಕಲ್ ಇನ್ಸ್ಪೆಕ್ಟರ್ ಜಯಾನಂದ್, ಬೆಸ್ಕಾಂ ಸಹಾಯಕ ಎಂಜಿನಿಯರ್ ನಂಜುಂಡೇಶ್ವರ ಮತ್ತಿತರರು ಇದ್ದರು.