ಶ್ರೀನಿವಾಸಪುರ: ಅಧಿಕಾರಿಗಳು ಕುಡಿಯುವ ನೀರು ಪೂರೈಕೆಗೆ ಮೊದಲ ಆದ್ಯತೆ ನೀಡಬೇಕು ಎಂದು ಶಾಸಕ ಜಿ.ಕೆ.ವೆಂಕಟಶಿವಾರೆಡ್ಡಿ ಹೇಳಿದರು.
ಪಟ್ಟಣದ ತಾಲ್ಲೂಕು ಕಚೇರಿ ಸಭಾಂಗಣದಲ್ಲಿ ಶನಿವಾರ ಏರ್ಪಡಿಸಿದ್ದ ತಾಲ್ಲೂಕು ಮಟ್ಟದ ಟಾಸ್ಕ್ ಫೋರ್ಸ್ ಸಭೆಯಲ್ಲಿ ವಿವಿಧ ಇಲಾಖೆಗಳ ಪ್ರಗತಿ ಪರಿಶೀಲಿಸಿ ಮಾತನಾಡಿದ ಅವರು, ತಾಲ್ಲೂಕಿನಲ್ಲಿ ಮಳೆ ಕೊರೆಯಿಂದಾಗಿ ಬರ ಪರಿಸ್ಥಿತಿ ನಿರ್ಮಾಣವಾಗಿದೆ ಎಂದು ಹೇಳಿದರು.
ಬರಗಾಲ ಇರುವಾಗ ಜನ ಜಾನುವಾರು ರಕ್ಷಣೆ ಸರ್ಕಾರದ ಆದ್ಯ ಕರ್ತವ್ಯ. ಆದ್ದರಿಂದ ದುಡಿಯುವ ಕೈಗಳಿಗೆ ಕೆಲಸ ನೀಡಬೇಕು. ಜಾನುವಾರು ಮೇವಿನ ಸಮಸ್ಯೆ ನಿವಾರಣೆಗೆ ಅಗತ್ಯ ಕ್ರಮ ಕೈಗೊಳ್ಳಬೇಕು. ಪೊಲೀಸ್ ಇಲಾಖೆ, ತಾಲ್ಲೂಕಿನಿಂದ ನೆರೆಯ ಆಂಧ್ರಪ್ರದೇಶಕ್ಕೆ ಜಾನುವಾರು ಮೇವು ಸರಬರಾಜು ಮಾಡುವುದಕ್ಕೆ ಕಡಿವಾಣ ಹಾಕಬೇಕು. ಹೊರ ಜಾಜ್ಯಗಳಿಂದ ತಾಲ್ಲೂಕಿಗೆ ಜಾನುವಾರು ಮೇವು ಬರವುದನ್ನು ತಡೆಯಬಾರದು ಎಂದು ಸೂಚಿಸಿದರು.
ಪಟ್ಟಣದ ಪಶುಪಾಲನಾ ಇಲಾಖೆ ಕಚೇರಿ ಹಾಗೂ ಪಶು ಆಸ್ಪತ್ರೆಗೆ ಎಂಜಿ ರಸ್ತೆಯಿಂದ ನೇರವಾಗಿ ರಸ್ತೆ ನಿರ್ಮಿಸಲಾಗುವುದು. ಶೀಘ್ರವಾಗಿ ಕಾಮಗಾರಿ ಪ್ರಾರಂಭಿಸುವಂತೆ ಗುತ್ತಿಗೆದಾರರಿಗೆ ತಿಳಿಸಲಾಗಿದೆ. ರಸ್ತೆ ನಿರ್ಮಾಣಕ್ಕೆ ಅಡ್ಡಿಯಾಗಿದ್ದ ಶೌಚಾಲಯ ಕಟ್ಟಡ ನೆಲಸಮಗೊಳಿಸಿ, ಸಾರ್ವಜನಿಕರಿಗೆ ಅನುಕೂಲವಾಗುವಂತೆ ಬೇರೆ ಕಡೆ ನಿರ್ಮಿಸಲಾಗುವುದು ಎಂದು ಹೇಳಿದರು.
ತಹಶೀಲ್ದಾರ್ ಜಿ.ಎನ್.ಸುಧೀಂದ್ರ, ತಾಲ್ಲೂಕು ಪಂಚಾಯಿತಿ ಕಾರ್ಯನಿರ್ವಹಣಾಧಿಕಾರಿ ಎಸ್.ಶಿವಕುಮಾರಿ, ಉಪ ತಹಶೀಲ್ದಾರ್ ಕೆ.ಎಲ್.ಜಯರಾಂ, ಶಿರಸ್ತೇದಾರ್ ಬಲರಾಮಚಂದ್ರೇಗೌಡ, ಹಿರಿಯ ಕಂದಾಯ ನಿರೀಕ್ಷಕ ಬಿ.ವಿ.ಮುನಿರೆಡ್ಡಿ, ಸಹಾಯಕ ಕೃಷಿ ನಿರ್ದೇಶಕ ಕೆ.ಸಿ.ಮಂಜುನಾಥ್, ಸಹಾಯಕ ರೇಷ್ಮೆ ಕೃಷಿ ನಿರ್ದೇಶಕ ಕೃಷ್ಣಪ್ಪ, ಸಹಾಯಕ ತೋಟಗಾರಿಕಾ ನಿರ್ದೇಶಕ ಎ.ಬೈರಾರೆಡ್ಡಿ, ಸಹಾಯಕ ಕಾರ್ಯಪಾಲಕ ಎಂಜಿನಿಯರ್ ನಾರಾಯಣಸ್ವಾಮಿ, ಪಶುವೈದ್ಯಾಧಿಕಾರಿ ಡಾ. ವಿಶ್ವನಾಥ್ ಇದ್ದರು.