ಅಧಿಕಾರಿಗಳು ಮೂಲ ಸೌಕರ್ಯ ಒದಗಿಸಲು ಮೊದಲ ಆದ್ಯತೆ ನೀಡಬೇಕು : ಶಾಸಕ ಕೆ.ಆರ್.ರಮೇಶ್ ಕುಮಾರ್

ವರದಿ: ಶಬ್ಬೀರ್ ಅಹ್ಮದ್, ಶ್ರೀನಿವಾಸಪುರ

ಶ್ರೀನಿವಾಸಪುರ: ಅಧಿಕಾರಿಗಳು ಮೂಲ ಸೌಕರ್ಯ ಒದಗಿಸಲು ಮೊದಲ ಆದ್ಯತೆ ನೀಡಬೇಕು ಎಂದು ಶಾಸಕ ಕೆ.ಆರ್.ರಮೇಶ್ ಕುಮಾರ್ ಹೇಳಿದರು.
ಪಟ್ಟಣದ ತಾಲ್ಲೂಕು ಪಂಚಾಯಿತಿ ಕಚೇರಿ ಸಭಾಂಗಣದಲ್ಲಿ ಸೋಮವಾರ ಏರ್ಪಡಿಸಿದ್ದ ವಿವಿಧ ಇಲಾಖೆಗಳ ಅಧಿಕಾರಿಗಳ ಪ್ರಗತಿ ಪರಿಶೀಲನಾ ಸಭೆಯಲ್ಲಿ ಮಾತನಾಡಿದ ಅವರು, ತಾಲ್ಲೂಕಿನಲ್ಲಿ ಸಮರ್ಪಕ ವಿದ್ಯುತ್ ಪೂರೈಕೆ ಮಾಡಲು ಅಗತ್ಯವಾದ ಕಾಮಗಾರಿ ಕೈಗೊಳ್ಳಲು ರೂ.4.50 ಕೋಟಿ ಮಂಜೂರಾಗಿದೆ. ಬೆಸ್ಕಾಂ ಅಧಿಕಾರಿಗಳು ತಾಲ್ಲೂಕಿನಲ್ಲಿ ಸಂಚರಿಸಿ, ಸಮಸ್ಯೆ ಪತ್ತೆ ಹಚ್ಚಿ ನಿವಾರಣೆಗೆ ಅಗತ್ಯವಾದ ಕ್ರಮ ಕೈಗೊಳ್ಳಬೇಕು. ಗ್ರಾಮೀಣ ಪ್ರದೇಶದಲ್ಲಿ ವಿದ್ಯುತ್ ಪೂರೈಕೆಯಲ್ಲಿ ಸಮಸ್ಯೆ ಇಲ್ಲದಂತೆ ನೋಡಿಕೊಳ್ಳಬೇಕು ಎಂದು ಹೇಳಿದರು.
ತಾಲ್ಲೂಕಿನಲ್ಲಿ ಕುಡಿಯುವ ನೀರು ಪೂರೈಕೆಗೆ ಪೂರಕವಾದ ಕಾಮಗರಿಗಳನ್ನು ಕೈಗೊಳ್ಳಬೇಕು. ಅಗತ್ಯ ಇರುವ ಕಡೆ ಹೊಸ ಕೊಳವೆ ಬಾವಿಗಳನ್ನು ನಿರ್ಮಿಸಬೇಕು. ಈಗ ತಾಲ್ಲೂಕಿನಾದ್ಯಂತ ಮಳೆಯಾಗುತ್ತಿದೆ. ಆದರೂ ಕುಡಿಯವ ನೀರು ಪೂರೈಕೆಯಲ್ಲಿ ಯಾವುದೇ ವ್ಯತ್ಯಯ ಉಂಟಾಗದಂತೆ ನೋಡಿಕೊಳ್ಳಬೇಕು ಎಂದು ಸೂಚಿಸಿದರು.
ಲೋಕೋಪಯೋಗಿ ಇಲಾಖೆ ಮಳೆಯಿಂದಾಗಿ ಹಾನಿಗೊಂಡಿರುವ ರಸ್ತೆಗಳ ದುರಸ್ತಿ ಮಾಡಿಸಬೇಕು. ರಸ್ತೆ ಹಳ್ಳ ಮುಚ್ಚಲು ಆದ್ಯತೆ ನೀಡಬೇಕು. ಕೆಟ್ಟ ರಸ್ತೆ ಪರಿಣಾಮವಾಗಿ ಅಪಘಾತ ಸಂಭವಿಸದಂತೆ ಎಚ್ಚರ ವಹಿಸಬೇಕು ಎಂದು ಹೇಳಿದರು.
ಪ್ರತಿ ತಿಂಗಳು ಮೊದಲ ಸೋಮವಾರ ಪ್ರಗತಿ ಪರಿಶೀಲನಾ ಸಭೆ ನಡೆಸಲಾಗುವುದು. ಅಧಿಕಾರಿಗಳು ಅದಕ್ಕೆ ಸಿದ್ಧರಾಗಿ ಬರಬೇಕು. ಸಭೆಯಲ್ಲಿ ಕೈಗೊಳ್ಳಲಾದ ನಿರ್ಣಯಗಳು ಮುಂದಿನ ಸಭೆಯೊಳಗೆ ಕಾರ್ಯರೂಪಕ್ಕೆ ಬಂದಿರಬೇಕು. ಗ್ರಾಮೀಣ ಪ್ರದೇಶದ ಜನ ಕೆಲಸ ಬಿಟ್ಟು ಕಚೇರಿಗಳಿಗೆ ಅಲೆಯುವುದನ್ನು ತಪ್ಪಿಸಬೇಕು. ನಿಗದಿತ ಸಮಯದೊಳಗೆ ಅವರ ಸಮಸ್ಯೆ ಬಗೆಹರಿಸಬೇಕು ಎಂದು ಹೇಳಿದರು.
ಪಿಎಲ್‍ಡಿ ಬ್ಯಾಂಕ್ ಅಧ್ಯಕ್ಷ ದಿಂಬಾಲ ಅಶೋಕ್, ಡಿಸಿಸಿ ಬ್ಯಾಂಕ್ ನಿರ್ದೇಶದಕ ವೆಂಕಟರೆಡ್ಡಿ ಹಾಗೂ ವಿವಿಧ ಇಲಾಖೆಗೆ ಅಧಿಕಾರಿಗಳು ಇದ್ದರು.