ಶ್ರೀನಿವಾಸಪುರ: ಅಧಿಕಾರಿಗಳು ಸರ್ಕಾರದ ಸೌಲಭ್ಯಗಳು ಅರ್ಹ ಫಲಾನುಭವಿಗಳಿಗೆ ಸಿಗುವಂತೆ ನೋಡಿಕೊಳ್ಳಬೇಕು ಎಂದು ಜಿಲ್ಲಾ ಲೋಕಾಯುಕ್ತ ಎಸ್‍ಪಿ ಬಿ.ಕೆ.ಉಮೇಶ್ ಹೇಳಿದರು.
ಪಟ್ಟಣದ ತಾಲ್ಲೂಕು ಪಂಚಾಯಿತಿ ಕಚೇರಿ ಸಭಾಂಗಣದಲ್ಲಿ ಜಿಲ್ಲಾ ಲೋಕಾಯುಕ್ತ ಅಧಿಕಾರಿಗಳಿಂದ ಏರ್ಪಡಿಸಿದ್ದ ಸಾರ್ವಜನಿಕರ ಕುಂದು ಕೊರತೆ ಸಭೆಯಲ್ಲಿ ಮಾನಾಡಿದ ಅವರು, ಸರ್ಕಾರಿ ಕಚೇರಿ ಸಿಬ್ಬಂದಿ ವಿನಾಕಾರಣ ಸಾರ್ವಜನಿಕರನ್ನು ಕಚೇರಿಗಳಿಗೆ ಅಲೆದಾಡುವಂತೆ ಮಾಡದೆ, ಅವರ ಕೆಲಸ ಮಾಡಿಕೊಡಬೇಕು ಎಂದು ಹೇಳಿದರು.
ಸಾರ್ವಜನಿಕರು ನಿರ್ಭಯವಾಗಿ ಯಾವುದೇ ಕಾನೂನು ಬಾಹಿರ ಚಟುವಟಿಕೆ ಬಗ್ಗೆ ಲೋಕಾಯುಕ್ತ ಪೊಲೀಸರಿಗೆ ದೂರು ನೀಡಬಹುದು. ದೂರುದಾರರ ಹೆಸರನ್ನು ಗೌಪ್ಯವಾಗಿಡಲಾಗುವುದು. ತನಿಖೆ ನಡೆಸಿ ತಪ್ಪಿತಸ್ಥರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲಾಗುವುದು. ಸಾರ್ವಜನಿಕರಿಂದ ವಿವಿಧ ಇಲಾಖೆಗಳಿಗೆ ಸಂಬಂಧಿಸಿದಂತೆ 22 ಅರ್ಜಿ ಬಂದಿವೆ. ಸಂಬಂಧಪಟ್ಟ ಇಲಾಖೆಗಳ ಅಧಿಕಾರಿಗಳು 15 ದಿಗಳಲ್ಲಿ ಅರ್ಜಿಗಳ ವಿಲೆವಾರಿ ಮಾಡಬೇಕು. ಹಾಗೆ ಮಾಡಲು ಸಾಧ್ಯವಿಲ್ಲದಿದ್ದಲ್ಲಿ, ಕಾರಣ ತಿಳಿಸಬೇಕು ಎಂದು ಹೇಳಿದರು.
ಸಭೆಯಲ್ಲಿ ಕಂದಾಯ ಇಲಾಖೆಗೆ ಸಂಬಂಧಿಸಿದಂತೆ 11, ತಾಲ್ಲೂಕು ಪಂಚಾಯಿತಿಗೆ ಸಂಬಂಧಿಸಿದಂತೆ 5, ಪುರಸಭೆಗೆ ಸಂಬಂಧಿಸಿದಂತೆ 1, ಲೋಕೋಪಯೋಗಿ ಇಲಾಖೆಗೆ ಸಂಬಂಧಿಸಿದಂತೆ 1, ಭೂಮಾಪನ ಇಲಾಖೆಗೆ ಸಂಬಂಧಿಸಿದಂತೆ 1 ಹಾಗೂ ಲೋಕಾಯುಕ್ತ ಕಾಯ್ದೆಗೆ ಸಂಬಂಧಿಸಿದಂತೆ 3 ಅರ್ಜಿ ಸ್ವೀಕರಿಸಲಾಯಿತು.
ತಹಶೀಲ್ದಾರ್ ಶಿರಿನ್ ತಾಜ್, ಶಿರಸ್ತೇದಾರ್ ಬಲರಾಮಚಂದ್ರೇಗೌಡ, ಲೋಕಾಯುಕ್ತ ಇನ್ಸ್‍ಪೆಕ್ಟರ್‍ಗಳಾದ ಎಂ.ಪಿ.ಯಶವಂತ್ ಕುಮಾರ್, ಎ.ವಿ.ರೇಣುಕಾ ಇದ್ದರು.