ಅಧಿಕಾರಿಗಳು ಮಾವಿನ ಕಾಯಿ ವಹಿವಾಟು ಪಾರದರ್ಶಕವಾಗಿ ಇರುವಂತೆ ನೋಡಿಕೊಳ್ಳಬೇಕು: ಕೆ.ಆರ್.ರಮೇಶ್ ಕುಮಾರ್

ವರದಿ: ಶಬ್ಬೀರ್ ಅಹ್ಮದ್, ಶ್ರೀನಿವಾಸಪುರ

ಶ್ರೀನಿವಾಸಪುರ: ಅಧಿಕಾರಿಗಳು ಮಾವಿನ ಕಾಯಿ ವಹಿವಾಟು ಪಾರದರ್ಶಕವಾಗಿ ಇರುವಂತೆ ನೋಡಿಕೊಳ್ಳಬೇಕುಎಂದು ಶಾಸಕ ಕೆ.ಆರ್.ರಮೇಶ್ ಕುಮಾರ್ ಹೇಳಿದರು.
ಪಟ್ಟಣದ ಎಪಿಎಂಸಿ ಮಾರುಕಟ್ಟೆ ಕಚೇರಿ ಸಭಾಂಗಣದಲ್ಲಿ ಗುರುವಾರ ಏರ್ಪಡಿಸಿದ್ದ ಮಾವಿನ ಕಾಯಿ ಮಂಡಿ ಮಾಲೀಕರು, ವರ್ತಕರು ಹಾಗೂ ಮಾವು ಬೆಳೆಗಾರರ ಸಭೆಯಲ್ಲಿ ಮಾತನಾಡಿದ ಅವರು, ಎಪಿಎಂಸಿ ಮಾರುಕಟ್ಟೆ ಪ್ರಾಂಗಣದಲ್ಲಿ ಮೂಲ ಸೌಕರ್ಯ ಒದಗಿದಬೇಕು ಎಂದು ಹೇಳಿದರು.
ಮಾರುಕಟ್ಟೆಯಲ್ಲಿ ಮಾವಿನ ವಹಿವಾಟು ನಡೆಯು ಕಾಲದಲ್ಲಿ ಕಾನೂನು ಸುವ್ಯವಸ್ಥೆ ಕಾಪಾಡಲು ಪೂರಕವಾಗಿ ಪೊಲೀಸ್ ಹೊರ ಠಾಣೆ ಸ್ಥಾಪಿಸಲು ಕ್ರಮ ಕೈಗೊಳ್ಳಲಾಗುವುದು. ರೈತರು ಹಾಗೂ ವ್ಯಾಪಾರಿಗಳು ಸಹಕಾರದಿಂದ ವಹಿವಾಟು ನಡೆಸಬೇಕು. ಯಾವುದೇ ಕಾರಣಕ್ಕೂ ಬಿಳಿ ಚೀಟಿ ವ್ಯವಹಾರ ಮಾಡಬಾರದು. ಎಪಿಎಂಸಿ ಒದಗಿಸುವ ರಸೀದಿ ಪುಸ್ತಕದಲ್ಲಿ ವಹಿವಾಟಿನ ವಿವರ ದಾಖಲಿಸಬೇಕು ಎಂದು ಹೇಳಿದರು.
ತಾಲ್ಲೂಕಿನಲ್ಲಿ ಮಳೆಯೊಂದಿಗೆ ಬೀಸಿದ ಬಿರುಗಾಳಿ ಹಾಗೂ ಆಲಿಕಲ್ಲಿನ ಹೊಡೆತಕ್ಕೆ ಸಿಕ್ಕಿ ಅಪಾರ ಪ್ರಮಾಣದ ಬೆಳೆ ಹಾನಿ ಉಂಟಾಗಿದೆ. ಕಂದಾಯ ಹಾಗೂ ತೋಟಗಾರಿಕಾ ಇಲಾಖೆ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ನಷ್ಟದ ಅಂದಾಜು ನಡೆಸಬೇಕು. ಶೀಘ್ರವಾಗಿ ಸರ್ಕಾರಕ್ಕೆ ವರದಿ ನೀಡಬೇಕು. ಪರಿಹಾರ ನೀಡುವ ಬಗ್ಗೆ ಮುಖ್ಯ ಮಂತ್ರಿಯೊಂದಿಗೆ ಚರ್ಚಿಸಲಾಗುವುದು ಎಂದು ಹೇಳಿದರು.
ತಹಶೀಲ್ದಾರ್ ಶರಿನ್ ತಾಜ್, ಎಪಿಎಂಸಿ ಕಾರ್ಯದರ್ಶಿ ಆರ್.ಉಮಾ, ಪಿಎಲ್‍ಡಿ ಬ್ಯಾಂಕ್ ಅಧ್ಯಕ್ಷ ದಿಂಬಾಲ ಅಶೋಕ್, ಜಿಲ್ಲಾ ಪಂಚಾಯಿತಿ ಮಾಜಿ ಅಧ್ಯಕ್ಷ ಎಂ.ಶ್ರೀನಿವಾಸನ್, ಮುಖಂಡರಾದ ಅಕ್ಬರ್ ಷರೀಫ್, ಬಿ.ಜಿ.ಸೈಯದ್ ಖಾದರ್, ಶ್ರೀನಿವಾಸ್ ಜಾವಿದ್ ಅನ್ಸಾರಿ, ಅಯ್ಯಪ್ಪ, ಹರೀಶ್ ಯಾದವ್ ಇದ್ದರು