ವರದಿ: ಶಬ್ಬೀರ್ ಅಹ್ಮದ್, ಶ್ರೀನಿವಾಸಪುರ
ಕೋಲಾರ : ಪ್ರಸ್ತುತ ಸಾಲಿನಲ್ಲಿ ಕಳೆದ ಸಾಲಿಗಿಂತ ಹೆಚ್ಚಿನ ಅಭಿವೃದ್ಧಿಯ ಗುರಿಯನ್ನು ಸಾಧಿಸಿ , ಅಧಿಕಾರಿಗಳು ಬದ್ಧತೆಯಿಂದ ಕಾರ್ಯನಿರ್ವಹಿಸಬೇಕು ಎಂದು ತೋಟಗಾರಿಕೆ ಮತ್ತು ಯೋಜನೆ , ಕಾರ್ಯಕ್ರಮ ಸಂಯೋಜನೆ ಮತ್ತು ಸಾಂಖ್ಯಿಕ ಹಾಗೂ ಕೋಲಾರ ಜಿಲ್ಲಾ ಉಸ್ತುವಾರಿ ಸಚಿವರಾದ ಮುನಿರತ್ನ ರವರು ತಿಳಿಸಿದರು . ಇಂದು ಜಿಲ್ಲಾ ಪಂಚಾಯತ್ ಸಭಾಂಗಣದಲ್ಲಿ ಹಮ್ಮಿಕೊಂಡಿದ್ದ ಜಿಲ್ಲೆಯ ವಿವಿಧ ಇಲಾಖೆಗಳ ಮಾರ್ಚ್ -2022 ರ ಅಂತ್ಯದವರೆಗೆ ಸಾಧಿಸಿರುವ ಪ್ರಗತಿ ಪರಿಶೀಲನಾ ಸಭೆಯ ಅಧ್ಯಕ್ಷತೆಯನ್ನು ವಹಿಸಿ ಮಾತನಾಡಿದ ಅವರು ಕೋಲಾರ ಜಿಲ್ಲೆಯಲ್ಲಿ ಕಳೆದ ರಾತ್ರಿ ಸುರಿದ ಮಳೆ ಪರಿಣಾಮದಿಂದ ಶೇ . 80 ರಷ್ಟು ಮಾವು ಬೆಳೆ ನಾಶವಾಗಿದ್ದು , ಈ ಬಗ್ಗೆ ಸರ್ಕಾರದ ಗಮನ ಸೆಳೆಯುವುದಾಗಿ ಸಚಿವರು ತಿಳಿಸಿದರು . ವಿಳಂಬ ಮಾಡದೆ ಜನರ ಸಮಸ್ಯೆಗಳಿಗೆ ಸ್ಪಂದಿಸಿ ಅದನ್ನು ಶೀಘ್ರದಲ್ಲಿ ಅಧಿಕಾರಿಗಳು ಬಗೆಹರಿಸಬೇಕು . ರೈತರ ಜೀವನಕ್ಕೆ ತೊಂದರೆಯಾಗದಂತೆ ಅವರಿಗೆ ಸರಿಯಾದ ರೀತಿಯ ಅಗತ್ಯ ಸೌಲಭ್ಯಗಳನ್ನು ಒದಗಿಸಿ ಎಂದು ಅಧಿಕಾರಿಗಳಿಗೆ ಸೂಚಿಸಿದರು . ಪರವಾನಗಿ ಇಲ್ಲದೆ ರಸಗೊಬ್ಬರವನ್ನು ಮಾರುತ್ತಿರುವಂತಹ ಅಂಗಡಿಗಳನ್ನು ಪರಿಶೀಲನೆ ಮಾಡಬೇಕು ಎಂದು ಕೃಷಿ ಅಧಿಕಾರಿಗಳಿಗೆ ಸೂಚಿಸಿದರು . ರಾಗಿ ಖರೀದಿ ಮಾಡುವಾಗ ಪ್ರತಿ ದಿನ ಎಷ್ಟು ಜನ ರೈತರು ನೊಂದಾಯಿಸಿದ್ದಾರೆ ಅದರ ಸಂಪೂರ್ಣ ಮಾಹಿತಿಯನ್ನು ಸರ್ಕಾರಕ್ಕೆ ತಿಳಿಸಬೇಕು ಎಂದು ಆಹಾರ ಮತ್ತು ನಾಗರೀಕ ಸರಬರಾಜು ಇಲಾಖೆಯ ಉಪ ನಿರ್ದೇಶಕರಿಗೆ ಸೂಚಿಸಿದರು . ಜಿಲ್ಲೆಯ ಪ್ರತಿಯೊಬ್ಬ ರೈತನ ಸಂಪೂರ್ಣ ಮಾಹಿತಿಯನ್ನು ಮುಂದಿನ ಸಭೆಯಲ್ಲಿ ಒದಗಿಸಬೇಕು . ನಷ್ಟವಾಗಿರುವ ಬೆಳೆಗಳ ಅಂದಾಜು ಮಾಡಿ ಆ ಬೆಳೆಗಳಿಗೆ ವಿಮೆ ಮಾಡಿಸಿದಲ್ಲಿ ವಿಮಾ ಕಂಪನಿಯ ಪ್ರತಿನಿಧಿಯನ್ನು ಕೂಡಲೇ ಭೇಟಿ ಮಾಡಿ ಬೆಳೆ ವಿಮೆಯನ್ನು ರೈತರಿಗೆ ಶೀಘ್ರದಲ್ಲಿ ಒದಗಿಸುವ ವ್ಯವಸ್ಥೆಯನ್ನು ಮಾಡಬೇಕು ಎಂದು ತೋಟಗಾರಿಕೆ ಇಲಾಖೆಯ ಉಪನಿರ್ದೇಶಕರಿಗೆ ತಿಳಿಸಿದರು . ಜಿಲ್ಲೆಯ ಪ್ರತಿಯೊಂದು ಶಾಲೆಗಳಲ್ಲಿ ಮೂಲಭೂತ ಸೌಕರ್ಯ ಕೊರತೆ ಹಾಗೂ ಇತರೆ ಸಮಸ್ಯೆಗಳ ಸಂಪೂರ್ಣ ಮಾಹಿತಿಯನ್ನು ನೀಡಲು ಸಾರ್ವಜನಿಕ ಶಿಕ್ಷಣ ಇಲಾಖೆಯ ಉಪ ನಿರ್ದೇಶಕರಿಗೆ ಸೂಚಿಸಿದರು . ಜಿಲ್ಲೆಯಲ್ಲಿ 32 ಡಯಾಲಿಸಿಸ್ ಯಂತ್ರಗಳಿವೆ . ಡಯಾಲಿಸಿಸ್ ಕಡೆ ಆರೋಗ್ಯ ಅಧಿಕಾರಿಗಳು ಹೆಚ್ಚಾಗಿ ಗಮನಹರಿಸಬೇಕು . ಜಿಲ್ಲೆಯಲ್ಲಿ 411 ಅಂಗನವಾಡಿ ಕೇಂದ್ರಗಳು ಖಾಸಗಿ ಕಟ್ಟಡಗಳಲ್ಲಿ ನಡೆಯುತ್ತಿವೆ . ಮುಂದಿನ ದಿನಗಳಲ್ಲಿ ಇವುಗಳಿಗೆ ಸರ್ಕಾರಿ ಕಟ್ಟಡಗಳನ್ನು ಒದಗಿಸುವ ಬಗ್ಗೆ ಒತ್ತು ನೀಡಲಾಗುವುದು . ಸ್ಮಶಾನಕ್ಕೆ ಒದಗಿಸಲಾಗಿರುವ ಅನುದಾನವನ್ನು ಬೇರೆ ಯಾವುದೇ ಯೋಜನೆಗಳಿಗೆ ಉಪಯೋಗಸಬಾರದು ಎಂದು ತಿಳಿಸಿದರು .
ಸರ್ಕಾರದ ಮುಖ್ಯ ಸಚೇತಕರು ಹಾಗೂ ವಿಧಾನ ಪರಿಷತ್ ಸದಸ್ಯರಾದ ವೈ.ಎ.ನಾರಾಯಣಸ್ವಾಮಿ ಅವರು ಶಾಲೆಗಳಲ್ಲಿ ಹಾಗೂ ಅಂಗನವಾಡಿ ಕೇಂದ್ರಗಳಲ್ಲಿ ಶೌಚಾಲಯ , ಕುಡಿಯುವ ನೀರು , ಆಟದ ಮೈದಾನ ಹಾಗೂ ಸುಸಜ್ಜಿತ ಅಡುಗೆ ಕೋಣೆಗಳನ್ನು ನರೇಗಾ ಯೋಜನೆಯಡಿ ನಿರ್ಮಿಸಲು ಸರ್ಕಾರಕ್ಕೆ ಒತ್ತಾಯಿಸಲಾಗುವುದು . ಕೋಲಾರ ಜಿಲ್ಲೆಗೆ ಬಿಡುಗಡೆಯಾಗುವ ಸಿ.ಎಸ್.ಆರ್ ಅನುದಾನವನ್ನು ಸಮರ್ಪಕವಾಗಿ ವಿನಿಯೋಗಿಸುವಂತೆ ಸಂಬಂಧಿತ ಅಧಿಕಾರಿಗಳಿಗೆ ಸೂಚಿಸಿದರು . ಸಂಬಂಧಿತ ಅಧಿಕಾರಿಗಳು ಜಿಲ್ಲೆಯ ಎಲ್ಲಾ ಅಂಗನವಾಡಿ ಕೇಂದ್ರಗಳಿಗೆ ಸರಬರಾಜು ಆಗುವ ಆಹಾರ ಪದಾರ್ಥಗಳ ಗುಣಮಟ್ಟವನ್ನು ಪರಿಶೀಲಿಸಬೇಕು ಹಾಗೂ ಆಗಾಗ್ಗೆ ಅನಿರೀಕ್ಷಿತವಾಗಿ ಭೇಟಿ ನೀಡಿ ಕೂಲಂಕುಶವಾಗಿ ಪರಿಶೀಲಿಸಬೇಕು . ಗಂಗಾ ಕಲ್ಯಾಣ ಯೋಜನೆಯಡಿ ಜಿಲ್ಲೆಯಲ್ಲಿ ಕೊಳವೆ ಬಾವಿಗಳನ್ನು ಕೊರೆಸಲಾಗುತ್ತಿದ್ದು , ಈ ಯೋಜನೆಯಡಿ ಅಕ್ರಮಗಳಾಗುತ್ತಿವೆ . ಅಕ್ರಮಗಳನ್ನು ತಡೆಗಟ್ಟುವ ನಿಟ್ಟಿನಲ್ಲಿ ಅಧಿಕಾರಿಗಳು ಕ್ರಮಕೈಗೊಳ್ಳಬೇಕು . ಮಳೆಗಾಲದಲ್ಲಿ ವಿದ್ಯುತ್ ಸಮಸ್ಯೆ ಉಂಟಾಗುತ್ತದೆ . ಅದಕ್ಕಾಗಿ ಸಾಕಷ್ಟು ಟ್ರಾನ್ಸ್‌ಫಾರರ್‌ಗಳನ್ನು ಸಜ್ಜಾಗಿರಿಸಿಕೊಂಡಿರುವಂತೆ ಬೆಸ್ಕಾಂ ಅಧಿಕಾರಿಗಳಿಗೆ ಸೂಚಿಸಿದರು .
ಶ್ರೀನಿವಾಸಪುರ ವಿಧಾನಸಭಾ ಕ್ಷೇತ್ರ ಶಾಸಕರಾದ ಕೆ.ಆರ್.ರಮೇಶ್ ಕುಮಾರ್ ಅವರು ರೈತರಿಗೆ ನೈಸರ್ಗಿಕ ವಿಕೋಪದಿಂದ ಉಂಟಾಗುವಂತಹ ಸಮಸ್ಯೆಗಳನ್ನು ತಹಶೀಲ್ದಾರ್ ಮೂಲಕ ಜಿಲ್ಲಾಧಿಕಾರಿಗಳ ಗಮನಕ್ಕೆ ತರಬೇಕು . ಬಹುತೇಕ ಜಿಲ್ಲೆಯಲ್ಲಿ ಎಲ್ಲಾ ಶಾಲೆಗಳಲ್ಲಿ ಮೂಲಭೂತ ಸೌಕರ್ಯಗಳನ್ನು ನೀಡಬೇಕು . ಬಡವರಿಗೆ ಇರುವುದು ಒಂದೇ ಶಾಲೆ ಅದು ಸರ್ಕಾರಿ ಶಾಲೆ ಆದರಿಂದ ಅವರಿಗೆ ಬೇಕಾದ ಉತ್ತಮ ಗುಣಮಟ್ಟದ ಶಿಕ್ಷಣ ಸೌಲಭ್ಯಗಳನ್ನು ಅಧಿಕಾರಿಗಳು ಒದಗಿಸಬೇಕು ಎಂದು ತಿಳಿಸಿದರು . ಬಂಗಾರಪೇಟೆ ವಿಧಾನಸಭಾ ಕ್ಷೇತ್ರದ ಶಾಸಕರಾದ ಎಸ್.ಎನ್.ನಾರಾಯಣಸ್ವಾಮಿ ಅವರು ಜಿಲ್ಲೆಯಲ್ಲಿ ರೈತರಿಗೆ ಮುಂಗಾರು ಮಳೆಗೆ ಮುಂಚೆ ಬಿತ್ತನೆ ಬೀಜ ದೊರೆಯುವಂತೆ ಮಾಡಬೇಕು . ಕಾಲ ಕಾಲಕ್ಕೆ ಅಭಿವೃದ್ಧಿ ಸಭೆಗಳನ್ನು ನಡೆಸಿ ಜಿಲ್ಲೆಯಲ್ಲಿನ ಕುಂದುಕೊರತೆಗಳನ್ನು ಪರಿಹರಿಸುವ ಬಗ್ಗೆ ಸಚಿವರು , ಶಾಸಕರು ಹಾಗೂ ಅಧಿಕಾರಿಗಳು ಗಮನಹರಿಸಬೇಕು ಎಂದು ತಿಳಿಸಿದರು .
ವಿಧಾನ ಪರಿಷತ್ ಸದಸ್ಯರಾದ ಎಂ.ಎಲ್.ಅನಿಲ್ ಕುಮಾರ್ ರವರು ನಿನ್ನೆ ಸುರಿದ ಅನಿರೀಕ್ಷಿತ ಮಳೆಗೆ ಕೇವಲ ಮಾವು ಮಾತ್ರವಲ್ಲದೇ ಇತರೆ ಬೆಳೆಗಳು ಸಹ ನಾಶವಾಗಿದೆ . ಅವುಗಳಿಗೂ ಸಹ ಬೆಳೆ ಪರಿಹಾರ ನೀಡುವಂತೆ ಸಚಿವರ ಗಮನಕ್ಕೆ ತಂದರು . ಅದಕ್ಕೆ ಸಚಿವರು ಶೀಘ್ರದಲ್ಲೇ ಪರಿಹಾರ ಒದಗಿಸಲಾಗುವುದು ಎಂದು ತಿಳಿಸಿದರು . ಸಭೆಯಲ್ಲಿ ಕೋಲಾರ ಲೋಕಸಭಾ ಕ್ಷೇತ್ರದ ಸಂಸದರಾದ ಎಸ್.ಮುನಿಸ್ವಾಮಿ , ಮುಳಬಾಗಿಲು ವಿಧಾನಸಭಾ ಕ್ಷೇತ್ರದ ಶಾಸಕರು ಹಾಗೂ ಡಾ || ಬಿ.ಆರ್.ಅಂಬೇಡ್ಕರ್ ಅಭಿವೃದ್ಧಿ ನಿಮಗದ ಅಧ್ಯಕ್ಷರಾದ ಹೆಚ್.ನಾಗೇಶ್ , ಕೋಲಾರ ವಿಧಾನ ಸಭಾ ಕ್ಷೇತ್ರ ಶಾಸಕರಾದ ಕೆ.ಶ್ರೀನಿವಾಸಗೌಡ , ಕೆ.ಜಿ.ಎಫ್ ವಿಧಾನ ಸಭಾ ಕ್ಷೇತ್ರದ ಶಾಸಕರಾದ ರೂಪಕಲಾ ಶಶಿಧರ್ , ಮಾಲೂರು ವಿಧಾನಸಭಾ ಕ್ಷೇತ್ರ ಶಾಸಕರಾದ ಕೆ.ವೈ.ನಂಜೇಗೌಡ , ಕೆ.ಡಿ.ಪಿ ನಾಮನಿರ್ದೇಶಿತ ಸದಸ್ಯರಾದ ಶ್ರೀನಿವಾಸಮೂರ್ತಿ , ಶಿವಶಂಕರ್ , ಮಂಜುಳಾ, ಜಯಂತಿರಾಜ್ , ಮಂಜುನಾಥ್ , ಜಿಲ್ಲಾಧಿಕಾರಿಗಳಾದ ವೆಂಕಟ್ ರಾಜಾ , ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿಗಳಾದ ಯುಕೇಶ್ ಕುಮಾರ್ , ಉಪ ಕಾರ್ಯದರ್ಶಿ ಸಂಜೀವಪ್ಪ , ಜಿಲ್ಲಾ ಹಾಗೂ ತಾಲ್ಲೂಕು ಮಟ್ಟದ ಅಧಿಕಾರಿಗಳು ಸೇರಿದಂತೆ ಮತ್ತಿತರರು ಉಪಸ್ಥಿತರಿದ್ದರು .