ಶ್ರೀನಿವಾಸಪುರ: ಅಧಿಕಾರಿಗಳು ರಾಷ್ಟ್ರೀಯ ಹಬ್ಬಗಳು ಹಾಗೂ ಕನ್ನಡ ರಾಜ್ಯೋತ್ಸವ ಆಚರಣೆಯಲ್ಲಿ ಸಕ್ರಿಯವಾಗಿ ಭಾಗವಹಿಸಬೇಕು. ಸಕಾರಣವಿಲ್ಲದೆ ಗೈರು ಹಾಜರಾಗಬಾರದು ಎಂದು ತಹಶೀಲ್ದಾರ್ ಶಿರಿನ್ ತಾಜ್ ಹೇಳಿದರು.
ಪಟ್ಟಣದ ತಾಲ್ಲೂಕು ಕಚೇರಿ ಸಭಾಂಗಣದಲ್ಲಿ ಶುಕ್ರವಾರ ಏರ್ಪಡಿಸಿದ್ದ ವಿವಿಧ ಇಲಾಖೆಗಳ ಅಧಿಕಾರಿಗಳು ಹಾಗೂ ಸಂಘ ಸಂಸ್ಥೆಗಳ ಪದಾಧಿಕಾರಿಗಳ ಸಭೆಯಲ್ಲಿ ಮಾತನಾಡಿದ ಅವರು, ಅ.23 ರಂದು ಕಿತ್ತೂರು ರಾಣಿ ಚೆನ್ನಮ್ಮ ಜಯಂತಿ ಆಚರಣೆ ಮಾಡಬೇಕು. ನ.1ರಂದು ಕನ್ನಡ ರಾಜ್ಯೋತ್ಸವ ವಿಜೃಂಭಣೆಯಿಂದ ಆಚರಿಸಲು ಅಗತ್ಯವಾದ ಸಿದ್ಧತೆ ಮಾಡಿಕೊಳ್ಳಬೇಕು ಎಂದು ಹೇಳಿದರು.
ಕನ್ನಡ ರಾಜ್ಯೋತ್ಸವ ಆಚರಣೆ ಅಂಗವಾಗಿ ಪಟ್ಟಣದಲ್ಲಿ ಮೆರವಣಿಗೆ ಏರ್ಪಡಿಸಲಾಗಿದೆ. ತಾಲ್ಲೂಕಿನ 27 ಇಲಾಖೆಗಳಿಂದ ತಯಾರಿಸಲಾದ ತಲಾ ಒಂದು ಸ್ಥಬ್ಧ ಚಿತ್ರ ಮೆರವಣಿಗೆಯಲ್ಲಿ ಭಾಗವಹಿಸಬೇಕು. ನಾಡು ನುಡಿ ಮಹತ್ವ ಸಾರುವ ವಿಷಯ ಒಳಗೊಂಡಿರಬೇಕು. ಯಾವುದೇ ಇಲಾಖೆಗೆ ಇದರಿಂದ ವಿನಾಯಿತಿ ಇರುವುದಿಲ್ಲ ಎಂದು ಹೇಳಿದರು.
ಸಮಾರಂಭದಲ್ಲಿ ಎಸ್ಸೆಸ್ಸೆಲ್ಸಿ ಪರೀಕ್ಷೆಯಲ್ಲಿ ಕನ್ನಡ ಭಾಷೆಯಲ್ಲಿ ಅಧಿಕ ಅಂಕ ಗಳಿಸಿದ ವಿದ್ಯಾರ್ಥಿಗಳನ್ನು ಸನ್ಮಾನಿಸಲಾಗುವುದು. ವಿದ್ಯಾರ್ಥಿಗಳಿಂದ ಸಾಂಸ್ಕøತಿಕ ಕಾರ್ಯಕ್ರಮಗಳನ್ನು ಏರ್ಪಡಿಸಲಾಗುವುದು. ರಾಜ್ಯೋತ್ಸವ ಆಚರಣೆಯಲ್ಲಿ ಕನ್ನಡ ಪರ ಸಂಘಟನೆಗಳನ್ನು ತೊಡಗಿಸಿಕೊಳ್ಳಲಾಗುವುದು ಎಂದು ಹೇಳಿದರು.
ವಿವಿಧ ಇಲಾಖೆಗಳ ಅಧಿಕಾರಿಗಳಾದ ವಿ.ಉಮಾದೇವಿ, ಡಾ. ಎಂ.ಸಿ.ವಿಜಯ, ಡಾ. ಮಂಜುನಾಥರೆಡ್ಡಿ, ಎಂ.ಶ್ರೀನಿವಾಸನ್, ಬಿ.ವಿ.ಮುನಿರೆಡ್ಡಿ, ಕೃಷ್ಣಪ್ಪ, ಕೆ.ಸಿ.ಮಂಜುನಾಥ್, ಲಿಖಿತ, ಭಾವನಾ, ನಂಜುಂಡೇಶ್ವರ, ಎ.ಈಶ್ವರ್, ನರಸಿಂಹಮೂರ್ತಿ, ವಿವಿಧ ಸಂಘ ಸಂಸ್ಥೆಗಳ ಮುಖ್ಯಸ್ಥರು ಇದ್ದರು.